ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪ್ರಿ ಶಿಫಾರಸು ಧಿಕ್ಕರಿಸಿದ ಸರ್ಕಾರ

1 ಕಿ.ಮೀಟರ್‌ನಿಂದ 500 ಮೀಗೆ ಇಳಿಯಿತು ಅರ್ಕಾವತಿ, ಕುಮುದ್ವತಿ ನದಿಗಳ ಬಫರ್‌
Last Updated 24 ಜುಲೈ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಸಂರಕ್ಷಣಾ ವಲಯದ ಸಮಗ್ರ ಅಧ್ಯಯನ ನಡೆಸಿದ್ದ ಪರಿಸರ ನಿರ್ವಹಣಾ ನೀತಿ ಮತ್ತು ಸಂಶೋಧನಾ ಸಂಸ್ಥೆ (ಎಂಪ್ರಿ) ಮಾಡಿದ್ದ ಪ್ರಮುಖ ಶಿಫಾರಸನ್ನು ಗಾಳಿಗೆ ತೂರಿರುವ ರಾಜ್ಯ ಸರ್ಕಾರ, ಅರ್ಕಾವತಿ ಹಾಗೂ ಕುಮುದ್ವತಿ ನದಿಗಳ ಸಂರಕ್ಷಣಾ ವಲಯವನ್ನು ಶೇ 50ರಷ್ಟು ಕಡಿತಗೊಳಿಸಿ ಆದೇಶ ಮಾಡಿದೆ.

ಪತನದ ಅಂಚಿನಲ್ಲಿದ್ದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ತೆಗೆದುಕೊಂಡ ಈ ನಿರ್ಧಾರಕ್ಕೆ ಜಲ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ‘ಸರ್ಕಾರದ ಈ ದುಡುಕಿನ ನಿರ್ಧಾರದಿಂದ ಜಲಾನಯನ ಪ್ರದೇಶದಲ್ಲಿ ನಗರೀಕರಣ ಚಟುವಟಿಕೆ ಹೆಚ್ಚಲಿದ್ದು, ಈ ಎರಡು ನದಿಗಳ ಪುನಶ್ಚೇತನಕ್ಕೆ ಹಿನ್ನಡೆ ಉಂಟಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಯಾವುದೇ ಕಟ್ಟಡ ಹಾಗೂ ಕೃಷಿಯೇತರ ಚಟುವಟಿಕೆಗೆ ಮಂಜೂರಾತಿ ನೀಡಬಾರದು ಎಂದು ನಿರ್ಬಂಧಿಸಿ ಪರಿಸರ ಮತ್ತು ಅರಣ್ಯ ಇಲಾಖೆ 2003ರಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಈ ಭಾಗದ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಜಲಾನಯನ ಪ್ರದೇಶದಲ್ಲಿ ಸಮಗ್ರ ಅಧ್ಯಯನ ಕೈಗೊಳ್ಳುವಂತೆ ಎಂಪ್ರಿಗೆ ಸರ್ಕಾರ ಸೂಚನೆ ನೀಡಿತ್ತು. ಈ ಕುರಿತು ಕೆರೆ ಸಂರಕ್ಷಣಾ ಕೇಂದ್ರದ ಜತೆ ಸೇರಿ ಅಧ್ಯಯನ ನಡೆಸಿದ್ದ ಎಂಪ್ರಿ 2015ರಲ್ಲೇ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.

‘ಅಭಿವೃದ್ಧಿ ಚಟುವಟಿಕೆಯಿಂದಾಗಿ ನಗರವು ಈಗಾಗಲೇ ಸಾಕಷ್ಟು ಒತ್ತಡ ಎದುರಿಸುತ್ತಿದೆ. ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನ ಪ್ರದೇಶಗಳ ಸಂರಕ್ಷಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸುವವರೆಗೂ 2003ರ ಅಧಿಸೂಚನೆಯಲ್ಲಿದ್ದಂತೆ ನಗರೀಕರಣ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಸಬೇಕು. ನಿರ್ಬಂಧ ಸಡಿಲಿಸಿದರೆ ಈ ಪ್ರದೇಶದಲ್ಲಿ ಬಡಾವಣೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಲಿವೆ. ಬಡಾವಣೆಗಳು ಹೆಚ್ಚಳವಾಗಿ ಮಳೆ ನೀರು ಚರಂಡಿ ವ್ಯವಸ್ಥೆ ಹದಗೆಟ್ಟರೆ ಮತ್ತೆ ನದಿಯ ಪುನಶ್ಚೇತನಕ್ಕೆ ಅವಕಾಶವೇ ಇರುವುದಿಲ್ಲ’ ಎಂದೂ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿತ್ತು.

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ವಲಯವಾರು ನಿರ್ಬಂಧ

* ವಲಯ1 (ಸಂಪೂರ್ಣ ಜಲಾನಯನ ಪ್ರದೇಶ): ಅಂತರ್ಜಲ ಬಳಕೆ ನಿಯಂತ್ರಣ, ಕಲ್ಲಿನ ಕ್ವಾರಿಗೆ, ಗಣಿಗಾರಿಕೆಗೆ, ಜಲ್ಲಿ ಕ್ರಷರ್‌ಗಳಿಗೆ ಹೊಸ ಪರವಾನಗಿ ನೀಡುವಂತಿಲ್. ವೈಜ್ಞಾನಿಕ ಸಂಸ್ಕರಣೆ ನಡೆಸದೆ ಯಾವುದೇ ವ್ಯಕ್ತಿ ಕಸ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಮಾಡುವಂತಿಲ್ಲ. ಹೊಸ ಹಾಗೂ ಅಸ್ತಿತ್ವದಲ್ಲಿರುವ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯ. ಸಾವಯವ ಕೃಷಿಗೆ ಉತ್ತೇಜನ

*ವಲಯ 2 (ಜಲಾಶಯದ 2 ಕಿ.ಮೀ ವ್ಯಾಪ್ತಿ); ಅನುಮತಿ ಇಲ್ಲದೇ ಕೃಷಿಯೇತರ ಚಟುವಟಿಕೆ ನಡೆಸುವಂತಿಲ್ಲ

* ವಲಯ 3 (ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ದಂಡೆಯ 500 ಮೀ ವ್ಯಾಪ್ತಿ); ಅನುಮತಿ ಇಲ್ಲದೇ ಕೃಷಿಯೇತರ ಚಟುವಟಿಕೆ ನಡೆಸುವಂತಿಲ್ಲ

* ವಲಯ 4 (ಅರ್ಕಾವತಿ ಮತ್ತು ಕುಮುದ್ವತಿ ನದಿ ದಂಡೆಯ 500 ಮೀಟರ್‌ನಿಂದ 1 ಕಿ.ಮೀವರೆಗೆ): ಹಸಿರು ಪಟ್ಟಿ ಕೈಗಾರಿಕೆಗೆ ಅವಕಾಶ. ಅವುಗಳಿಗೂ ಮಳೆ ನೀರು ಸಂಗ್ರಹ ಮತ್ತು ತ್ಯಾಜ್ಯ ನೀರು ಸಂಸ್ಕರಣೆ ಕಡ್ಡಾಯ; ಕೆಎಸ್‌ಪಿಸಿಬಿ ಒಪ್ಪಿಗೆ ಇಲ್ಲದೇ ಇತರ ನಿಯಂತ್ರಣ ಪ್ರಾಧಿಕಾರಗಳೂ ಯಾವುದೇ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತಿಲ್ಲ. ತ್ಯಾಜ್ಯ ನೀರು ಹೊರಗೆ ಬಿಡದಂತೆ ಹಾಗೂ ಮಳೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಂಡಿದ್ದರೆ ಮಾತ್ರ ಹೊಸ ವಸತಿ ಕಟ್ಟಡಗಳಿಗೆ ಅನುಮತಿ. ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಹಾಸ್ಟೆಲ್‌ಗಳಿಗೆ ಅನುಮತಿ (ತ್ಯಾಜ್ಯ ನೀರು ಹೊರಬಿಡದಿದ್ದರೆ, ಮಳೆ ನೀರು ಸಂಗ್ರಹ ಹಾಗೂ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ವ್ಯವಸ್ಥೆ ಇದ್ದರೆ ಮಾತ್ರ)

**
2 ಕಿ.ಮೀ ಕಡಿತ
ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಇದೇ 20ರಂದು ನಡೆದ ಸಭೆ ನಿರ್ಣಯ ಆಧರಿಸಿ ಸರ್ಕಾರ ಮಾಡಿರುವ ಆದೇಶದಿಂದಾಗಿ, ಅರ್ಕಾವತಿ, ಕುಮುದ್ವತಿ ನದಿಗಳ ಇಕ್ಕೆಲಗಳಲ್ಲಿ 2 ಕಿ.ಮೀಗಳಷ್ಟು ಸಂರಕ್ಷಿತ ಪ್ರದೇಶ ಕಡಿಮೆಯಾಗಲಿದೆ.

2003ರ ಅಧಿಸೂಚನೆ ಪ್ರಕಾರ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದ ವಲಯ 3ರಲ್ಲಿ ಅರ್ಕಾವತಿ ಮತ್ತು ಕುಮುದ್ವತಿ ನದಿ ತೀರದ ಅಂಚಿನಿಂದ 1 ಕಿ.ಮೀ ವ್ಯಾಪ್ತಿವರೆಗೆ ಸಂರಕ್ಷಣಾ ವಲಯವನ್ನು ನಿಗದಿಪಡಿಸಲಾಗಿತ್ತು. ಇಲ್ಲಿ ಅನುಮತಿ ಇಲ್ಲದೆ ಕೃಷಿಯೇತರ ಚಟುವಟಿಕೆ ಕೈಗೊಳ್ಳುವುದನ್ನು ನಿರ್ಬಂಧಿಸಲಾಗಿತ್ತು. ಆದರೆ, ಸರ್ಕಾರ ಇದೀಗ ಈ ಸಂರಕ್ಷಣಾ ವಲಯವನ್ನು 500 ಮೀ.ಗೆ ಸೀಮಿತಗೊಳಿಸಿದೆ.

2003ರ ಅಧಿಸೂಚನೆಯಲ್ಲಿ ಈ ನದಿಗಳ ಅಂಚಿನಿಂದ 1 ಕಿ.ಮೀ.ನಿಂದ 2 ಕಿ.ಮೀ.ವರೆಗಿನ ಪ್ರದೇಶವನ್ನು ವಲಯ 4 ಎಂದು ಗುರುತಿಸಲಾಗಿತ್ತು. ಆದರೆ, ಅದನ್ನು ನದಿ ತೀರದ ಅಂಚಿನ 500 ಮೀಟರ್‌ನಿಂದ 1 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

ವಲಯದ –4ರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಸಿರುಪಟ್ಟಿಯ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮಳೆ ನೀರು ಸಂಗ್ರಹ ಹಾಗೂ ಬಳಸಿದ ನೀರಿನ ಶುದ್ಧೀಕರಣ ಸೌಲಭ್ಯ ಹೊಂದಿರುವುದು ಕಡ್ಡಾಯವಾಗಿತ್ತು. ಇಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿದ್ದರೆ, ನೆಲಮಹಡಿ ಹಾಗೂ ಅದರ ಮೇಲೆ ಒಂದು ಮಹಡಿಯ ಕಟ್ಟಡ ನಿರ್ಮಿಸುವುದಕ್ಕೆ ಮಾತ್ರ ಅವಕಾಶವಿತ್ತು. ಈ ನಿರ್ಬಂಧದ ಬಗ್ಗೆ ಹೊಸ ಆದೇಶದಲ್ಲಿ ಪ್ರಸ್ತಾಪವೇ ಇಲ್ಲ. ಈ ವಲಯದಲ್ಲಿ ಶೈಕ್ಷಣಿಕ ಸಂಸ್ಥೆ, ವೈದ್ಯಕೀಯ ಸಂಸ್ಥೆ, ಆಸ್ಪತ್ರೆ, ಸರ್ಕಾರಿ ಹಾಸ್ಟೆಲ್‌ಗಳಿಗೆ ಕೆಲವು ನಿಬಂಧನೆಗಳೊಂದಿಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT