ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ವ್ಯತ್ಯಾಸ: ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಖರೀದಿ ಸ್ಥಗಿತ

ಲಡ್ಡುವಿಲ್ಲೂ ಬಿಜೆಪಿ ರಾಜಕೀಯ: ಭೀಮನಾಯ್ಕ
Published 1 ಆಗಸ್ಟ್ 2023, 0:30 IST
Last Updated 1 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ತಿರುಪತಿಯಲ್ಲಿ ಪ್ರಸಾದದ ರೂಪದಲ್ಲಿ ವಿತರಿಸುವ ಪ್ರಸಿದ್ಧ ಲಡ್ಡುಗಳ ತಯಾರಿಕೆಗೆ ಬಳಸುತ್ತಿದ್ದ ನಂದಿನಿ ತುಪ್ಪದ ಖರೀದಿಯನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ನಿಲ್ಲಿಸಿದೆ.

ಕೆಎಂಎಫ್ ಸಲ್ಲಿಸಿರುವ ತುಪ್ಪದ ದರ ಪ್ರಸ್ತಾವವನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ಅದರ ಬದಲಾಗಿ ಬೇರೆ ಕಂಪನಿಯಿಂದ ತುಪ್ಪ ಖರೀದಿಸಲು ಮುಂದಾಗಿದೆ.

‘ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪ ಪೂರೈಸಲು ಟಿಟಿಡಿ ಟೆಂಡರ್‌ ಕರೆದಿತ್ತು. ಆದರೆ, ನಮ್ಮ ಉತ್ಪನ್ನದ ಗುಣಮಟ್ಟ ಹಾಗೂ ಅದಕ್ಕೆ ತಕ್ಕಂತೆ ದರ ಹೆಚ್ಚಿರುವುದರಿಂದ ಪಾಲ್ಗೊಂಡಿಲ್ಲ’ ಎಂದು ಕೆಎಂಎಫ್‌ ಅಧ್ಯಕ್ಷ ಭೀಮನಾಯ್ಕ ತಿಳಿಸಿದ್ದಾರೆ.

‘2005ರಿಂದಲೂ ಕೆಎಂಎಫ್‌ ತುಪ್ಪವನ್ನು ಪೂರೈಸುತ್ತಿತ್ತು. ತಿರುಪತಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೆ ಶೇ 45ರಷ್ಟು ನಂದಿನಿ ಬ್ರ್ಯಾಂಡ್‌ ತುಪ್ಪವನ್ನೇ ಬಳಸಲಾಗುತ್ತಿತ್ತು. 2022ರಲ್ಲಿ ಕೋರಿಕೆಯ ಮೇರೆಗೆ ಮಾತ್ರ ಪ್ರತಿ ಕೆ.ಜಿ.ಗೆ ₹349ರಂತೆ 345 ಟನ್‌ ತುಪ್ಪ ಪೂರೈಸಲಾಗಿತ್ತು. ಆದರೆ, ಈ ಬಾರಿ ತುಪ್ಪದ ಬೇಡಿಕೆ ನಮ್ಮ ರಾಜ್ಯದಲ್ಲೇ ಹೆಚ್ಚಾಗಿದ್ದು, ಸಂಗ್ರಹದ ಕೊರತೆಯೂ ಇದೆ. ಜತೆಗೆ, ನಿರೀಕ್ಷೆಗೆ ತಕ್ಕಂತೆ ನಮಗೆ ದರ ದೊರೆತಿಲ್ಲ. ಟಿಟಿಡಿ ಟೆಂಡರ್‌ನಲ್ಲಿ ನಾವು ನಿಗದಿಪಡಿಸಿದ ದರ ಮೂರನೇ ಸ್ಥಾನದಲ್ಲಿದೆ. ಹೀಗಾಗಿ, ಕೆಎಂಎಫ್‌ ತುಪ್ಪ ಪೂರೈಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ ಮುಖಂಡ ಸಿ.ಟಿ. ರವಿ ಈ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಅವರಿಗೆ ಈಗ ಕೆಲಸವಿಲ್ಲ. ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಅಸಮರ್ಥ ಆಡಳಿತವೇ ಕಾರಣ: ಸಿ.ಟಿ.ರವಿ ಲಡ್ಡು ಪ್ರಸಾದ ತಯಾರಿಕೆಗೆ ಟಿಟಿಡಿ ‘ನಂದಿನಿ’ ತುಪ್ಪ ಖರೀದಿಸುವುದನ್ನು ನಿಲ್ಲಿಸಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರದ ಅಸಮರ್ಥ ಆಡಳಿತವೇ ಕಾರಣ ಎಂದು ಬಿಜೆಪಿಯ ಮುಖಂಡ ಸಿ.ಟಿ.ರವಿ ಟೀಕಿಸಿದ್ದಾರೆ. ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ‘ನಂದಿನಿ’ ಹಾಲಿನ ವಿಚಾರವನ್ನು ರಾಜಕೀಯಕ್ಕೆ ಬಳಸಿತು. ನಂದಿನಿ– ಅಮೂಲ್‌ ಜಗಳ ಹಚ್ಚಿ ತನ್ನ ಅಜೆಂಡಾ ಸಾಧಿಸಿತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣವೇ ಹಾಲಿನ ಬೆಲೆ ಏರಿಕೆ ಮಾಡಿತು. ಟಿಟಿಡಿ ತುಪ್ಪದ ಖರೀದಿಯನ್ನೂ ನಿಲ್ಲಿಸಿದೆ. ಈ ಮೂಲಕ ಕಾಂಗ್ರೆಸ್‌ ‘ಸುವರ್ಣಕರ್ನಾಟಕ’ವನ್ನು ನಾಶ ಮಾಡುತ್ತಿದೆ ಎಂದು ಅವರು ಟ್ವೀಟ್‌ ಮೂಲಕ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT