ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಾನಿಕ್‌’ಗೆ ಪರವಾನಗಿ ಪ್ರಶ್ನಿಸಿ ಪಿಐಎಲ್: ಅಬಕಾರಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್

Last Updated 13 ಡಿಸೆಂಬರ್ 2019, 4:11 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದ ಸರ್ಕಲ್‌ನಲ್ಲಿರುವ ‘ಟಾನಿಕ್’ ಮದ್ಯ ಮಾರಾಟ ಅಂಗಡಿಗೆ ಪರವಾನಗಿ ನೀಡಿರುವುದನ್ನು ತಕ್ಷಣ ರದ್ದುಗೊಳಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಬಕಾರಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಹೈಕೋರ್ಟ್‌ ವಕೀಲ ಎ.ವಿ.ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರಕರಣದ ಪ್ರತಿವಾದಿಗಳಾದ ಬೆಂಗಳೂರು ನಗರ ಜಿಲ್ಲಾ ಅಬಕಾರಿ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಮತ್ತು ಬಾರ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?: ‘ಧಾರ್ಮಿಕ ಕೇಂದ್ರ, ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆಯಂತಹ ಸ್ಥಳಗಳಿಂದ ನೂರು ಮೀಟರ್ ಒಳಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡುವಂತಿಲ್ಲ. ಇದು ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮ–1962ರ ಕಲಂ 5ಕ್ಕೆ ವಿರುದ್ಧವಾಗಿದೆ. ಆದರೆ, ಗಾಂಧಿ ಪ್ರತಿಮೆಯ ಮುಂಭಾಗದ ವೃತ್ತದಲ್ಲಿನ 20 ಮೀಟರ್‌ ಅಂತರದಲ್ಲಿಯೇ ‘ಟಾನಿಕ್’ ಮದ್ಯದಂಗಡಿಗೆ ಪರವಾನಗಿ ನೀಡಲಾಗಿದೆ. ಇದು ಅವರಿಗೆ ಅಪಮಾನ ಮಾಡಿದಂತೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

‘ಅಂಗಡಿಯ ಅನತಿ ದೂರದಲ್ಲೇ ಡಿಸಿಪಿ ಕಚೇರಿಯೂ ಇದೆ, ಎದುರಿಗೇ ಬಾಲ ಭವನ ಇದೆ. ಅಂತೆಯೇ ಸಮೀಪದಲ್ಲೇ ಸೇಂಟ್‌ ಮಾರ್ಕ್ಸ್‌ ಚರ್ಚ್‌ ಕೂಡಾ ಇದೆ. ಇವೆಲ್ಲಾ ಅಂಗಡಿಯಿಂದ 20ರಿಂದ 50 ಮೀಟರ್ ಅಂತರದಲ್ಲಿವೆ. ಆದ್ದರಿಂದ, ಈ ಮದ್ಯದ ಅಂಗಡಿಗೆ ಪರವಾನಗಿ ನೀಡಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದ್ದು ಪರವಾನಗಿ ರದ್ದುಗೊಳಿಸಬೇಕು. ಪರವಾನಗಿ ನೀಡಲು ಕಾರಣವಾಗಿರುವ ಎಲ್ಲ ಅಧಿಕಾರಿಗಳನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು’ ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT