ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತನೆ ಸಮೃದ್ಧ, ಫಲ ಏನೂ ಇಲ್ಲ: ಟಿ.ಆರ್‌. ಚಂದ್ರಶೇಖರ್

ಮಹಿಳಾಭಿವೃದ್ಧಿ ಗೋಷ್ಠಿಯಲ್ಲಿ ಅರ್ಥಶಾಸ್ತ್ರಜ್ಞ ಪ್ರತಿಪಾದನೆ
Published : 11 ಮಾರ್ಚ್ 2023, 20:25 IST
ಫಾಲೋ ಮಾಡಿ
Comments

ಬೆಂಗಳೂರು: ‘ನೂರೈವತ್ತು ವರ್ಷಗಳಲ್ಲಿ ಮಹಿಳಾ ಅಭಿವೃದ್ಧಿಯ ಚಿಂತನೆ ಸಮೃದ್ಧವಾಗಿ ಬೆಳೆದಿದೆ. ಸಿದ್ಧಾಂತಗಳು ರೂ‍ಪುಗೊಂಡಿವೆ, ಅಧ್ಯಯನಗಳಾಗಿವೆ, ವರದಿಗಳೂ ಬಂದಿವೆ. ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನೂ ರೂಪಿಸಿವೆ. ಹೀಗಿದ್ದರೂ, ಈ ಎಲ್ಲದರ ಫಲವನ್ನು ಉಣ್ಣಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಅರ್ಥಶಾಸ್ತ್ರಜ್ಞ ಪ್ರೊ.ಟಿ.ಆರ್‌. ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ್ದ 16ನೇ ‘ಬೆಂಗಳೂರು ನಗರ ಜಿಲ್ಲಾ ಕನ್ನಡ ಸಮ್ಮೇಳನ’ದ ‘ಕರ್ನಾಟಕದಲ್ಲಿ ಮಹಿಳಾಭಿವೃದ್ಧಿ: ಅವಲೋಕನ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿಯನ್ನು ಮಾವನ ಹಕ್ಕು’ ಎಂದು ಘೋಷಿಸಿದ ವಿಶ್ವಸಂಸ್ಥೆಯು, ಮಹಿಳಾ ಅಭಿವೃದ್ಧಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿತು. ಅಭಿವೃದ್ಧಿಯಲ್ಲಿ ಮಹಿಳೆಯರ ಸಹಭಾಗಿತ್ವ ಉತ್ತಮವಾಗಬೇಕು ಎಂದು ವಿಶ್ವಸಂಸ್ಥೆ ಹಾಗೂ ವಿಶ್ವಬ್ಯಾಂಕ್‌ ಪ್ರಚಾರ ಮಾಡಿದವು. ಆದರೆ, ಈ ಯಾವ ಕ್ರಮವೂ ಲಿಂಗ ಅಸಮಾನತೆ, ಮಹಿಳೆಯರಿಗೆ ಇರುವ ಸಾಮಾಜಿಕ ತಾರತಮ್ಯ, ಪಿತೃ ಪ್ರಧಾನ ಮೌಲ್ಯಗಳನ್ನು ಪ್ರಶ್ನೆ ಮಾಡಲಿಲ್ಲ’ ಎಂದರು.

‘ಮಾನವ ಅಭಿವೃದ್ಧಿಯು ಎಲ್ಲಿಯವರೆಗೆ ಲಿಂಗ ಸಮಾನತೆಯಿಂದ ಕೂಡಿರುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿಗೆ ಕಂಟಕ ತಪ್ಪಿದ್ದಲ್ಲ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮವು ತನ್ನ 1995ರಲ್ಲಿ ಮಾನವ ಅಭಿವೃದ್ಧಿ ವರದಿಯ ಸಂದೇಶದಲ್ಲಿ ಹೇಳಿದೆ’ ಎಂದರು.

‘ಕರ್ನಾಟಕದಲ್ಲಿ ಅಪೌಷ್ಟಿಕತೆ ರಾಕ್ಷಸ ಸ್ವರೂಪಿಯಾಗಿದೆ. 2015–16ರಿಂದ 2019–20ರ ಅವಧಿಯಲ್ಲಿ 15–49 ವರ್ಷದ 70 ಲಕ್ಷದಿಂದ 80 ಲಕ್ಷ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಇತ್ತು. ಎಲ್ಲಾ ಜಿಲ್ಲೆಗಳಲ್ಲೂ ಮಹಿಳೆಯರ ಮತ್ತು ಮಕ್ಕಳ ಅಪೌಷ್ಟಿತೆಯಲ್ಲಿ ತೀವ್ರ ಏರಿಕೆಯಾಗಿದೆ. ಆದರೆ, ಇದನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ’ ಎಂದರು. ‘ತಳಸಮುದಾಯದ ಮಹಿಳಾ ಸ್ಥಿತಿಗತಿಗಳ ಅವಲೋಕನ’ ವಿಷಯ ಕುರಿತು ಸಾಮಾಜಿಕ ಹೋರಾಟಗಾರ್ತಿ ದು.ಸರಸ್ವತಿ ಮಾತನಾಡಿದರು. ಡಾ. ವಸುಂಧರ ಭೂಪತಿ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

‘ಬೊಟ್ಟು ಯಾಕಿಟ್ಟಿಲ್ಲ..’ ಎಂದು ಮಹಿಳೆಯೊಬ್ಬರನ್ನು ಕೋಲಾರ ಸಂಸದ ನಿಂದಿಸಿದ ಕುರಿತು ದು.ಸರಸ್ವತಿ ಹಾಗೂ ವಸುಂಧರ ಭೂಪತಿಯವರು ಖಂಡನೆ ವ್ಯಕ್ತಪಡಿಸಿದರು. ನಿರ್ಮಲಾ ಎಲಿಗಾರ್‌ ಅವರ ಕಸಾಪ ಸದಸ್ಯತ್ವವನ್ನು ರದ್ದು ಮಾಡಿದ ಕುರಿತೂ ವಸುಂಧರ ಖಂಡನೆ ವ್ಯಕ್ತಪಡಿಸಿದರು.

*
ಅಪೌಷ್ಟಿಕತೆ ಪರಿಹರಿಸಲು ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ಮಾಡಬೇಕಿಲ್ಲ. ಮಹಿಳೆಯರು, ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಸಾಕು.
-ಪ್ರೊ.ಟಿ.ಆರ್‌. ಚಂದ್ರಶೇಖರ್‌, ಅರ್ಥಶಾಸ್ತ್ರಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT