ಸೋಮವಾರ, ಸೆಪ್ಟೆಂಬರ್ 27, 2021
21 °C
ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರ ಅಭಿಮಾನಿ ಎಂದು ವಾಹನದ ಮೇಲೆ ಬರೆಸಿಕೊಂಡಿದ್ದ ಸವಾರ.

42 ಬಾರಿ ನಿಯಮ ಉಲ್ಲಂಘಿಸಿದ್ದ ಸವಾರನಿಗೆ ₹ 20,200 ದಂಡ, ದ್ವಿಚಕ್ರ ವಾಹನ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಸ್ತೆ ಸಂಚಾರ ನಿಯಮಗಳನ್ನು 42 ಬಾರಿ ಉಲ್ಲಂಘಿಸಿದ್ದಕ್ಕಾಗಿ ಸವಾರ ಪಿ. ಗಿರೀಶ್ ಬಾಬು (58) ಎಂಬಾತನಿಗೆ ₹ 20,200 ದಂಡ ವಿಧಿಸಿರುವ ಸಂಚಾರ ಪೊಲೀಸರು, ಆತನ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.

‘ತ್ಯಾಗರಾಜನಗರದ ನೇತಾಜಿ ರಸ್ತೆಯ ನಿವಾಸಿ ಗಿರೀಶ್ ಬಾಬು, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಕಾರ್ಯಕರ್ತ ಎಂದು ಹೇಳಿಕೊಂಡು ಓಡಾಡುತ್ತಿದ್ದ. ‘ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರ ಅಭಿಮಾನಿ’, ‘ಪ್ರೆಸ್’ ಹಾಗೂ ‘ನಮಸ್ಕಾರ ನಮ್ಮ ಪೊಲೀಸ್’ ಎಂಬುದಾಗಿ ದ್ವಿಚಕ್ರ ವಾಹನದ ಮೇಲೆ ಬರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಹೊಂಡಾ ಆ್ಯಕ್ಟಿವಾ (ಕೆ.ಎ. 05 ಜೆಎಸ್ 2581) ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದ ಗಿರೀಶ್ ಬಾಬು, ಹೆಲ್ಮೆಟ್ ಧರಿಸುತ್ತಿರಲಿಲ್ಲ. ಜೊತೆಗೆ, ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ. ಇದನ್ನು ಸಂಚಾರ ಪೊಲೀಸರು, ಕ್ಯಾಮೆರಾದಲ್ಲೂ ಸೆರೆಹಿಡಿದಿದ್ದರು.’

‘ಕೆಲ ಬಾರಿ ಸಂಚಾರ ಪೊಲೀಸರು, ಗಿರೀಶ್ ಬಾಬು ವಾಹನ ತಡೆದು ಪರಿಶೀಲನೆ ನಡೆಸಿದ್ದರು. ‘ನಾನು ರವಿಕಾಂತೇಗೌಡ ಅಭಿಮಾನಿ. ‘ಪ್ರೆಸ್‌’ನಲ್ಲಿ ಕೆಲಸ ಮಾಡುತ್ತೇನೆ. ನನ್ನ ವಾಹನವನ್ನು ಬಿಡದಿದ್ದರೆ, ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸರನ್ನೇ ಹೆದರಿಸುತ್ತಿದ್ದ. ಹಿರಿಯ ಅಧಿಕಾರಿಗಳ ಹೆಸರು ಹೇಳುತ್ತಿದ್ದರಿಂದ ಸಿಬ್ಬಂದಿ ವಾಹನ ಬಿಟ್ಟು ಕಳುಹಿಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

ವಿಶೇಷ ತಂಡ ರಚನೆ: ಗಿರೀಶ್ ಬಾಬು ವಾಹನದ ಬಗ್ಗೆ ಕೆಲವರು, ನೇರವಾಗಿ ರವಿಕಾಂತೇಗೌಡ ಅವರಿಗೆ ಮಾಹಿತಿ ನೀಡಿದ್ದರು. ಜಯನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಪಿ.ಎನ್. ಈಶ್ವರಿ ನೇತೃತದಲ್ಲಿ ತಂಡ ರಚಿಸಿದ್ದ ರವಿಕಾಂತೇಗೌಡ, ವಾಹನದ ಪತ್ತೆಗೆ ಸೂಚಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು