ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ಗೆ ಕಲ್ಲೇಟು: ಅಂಗವಿಕಲೆಗೆ ಬೂಟುಗಾಲಿನಿಂದ ಒದ್ದ ‘ಎಎಸ್‌ಐ’

ಟೋಯಿಂಗ್ ವಿಚಾರವಾಗಿ ಗಲಾಟೆ: ಮಹಿಳೆ ಬಂಧಿಸಿದ ಪೊಲೀಸರು
Last Updated 30 ಜನವರಿ 2022, 10:43 IST
ಅಕ್ಷರ ಗಾತ್ರ

ಬೆಂಗಳೂರು: ಟೋಯಿಂಗ್ ವಿಚಾರವಾಗಿ ಅಂಗವಿಕಲ ಮಹಿಳೆ ಹಾಗೂ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ನಡುವೆ ಗಲಾಟೆ ಆಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಾಹನವನ್ನು ಟೋಯಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದ ಮಹಿಳೆ, ಕರ್ತವ್ಯ ನಿರತ ಎಎಸ್‌ಐ ತಲೆಗೆ ಕಲ್ಲಿನಿಂದ ಹೊಡೆದಿದ್ದರು. ಸಿಟ್ಟಾದ ಎಎಸ್‌ಐ, ನಡುರಸ್ತೆಯಲ್ಲಿ ಮಹಿಳೆಯನ್ನು ಅಟ್ಟಾಡಿಸಿ ಹಿಡಿದು ಬೂಟುಗಾಲಿನಿಂದ ಒದ್ದಿದ್ದಾರೆ. ಬಿಡಿಸಲು ಹೋದ ಸ್ಥಳೀಯರ ವಿರುದ್ಧವೂ ಎಎಸ್‌ಐ ಹರಿಹಾಯ್ದಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿದೆ.

ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ಹಲಸೂರು ಗೇಟ್ ಸಂಚಾರ ಠಾಣೆ ಎಎಸ್‌ಐ ನಾರಾಯಣ ಹಾಗೂ ಸಿಬ್ಬಂದಿ, ಜ.24ರಂದು ಸಂಜೆ ಟೋಯಿಂಗ್ ವಾಹನದ ಕರ್ತವ್ಯದಲ್ಲಿದ್ದರು. ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ವಾಹನವನ್ನು ಟೋಯಿಂಗ್ ಮಾಡಿದ್ದರು. ಅದನ್ನು ಪ್ರಶ್ನಿಸಿದ್ದ ಮಹಿಳೆ, ಎಎಸ್‌ಐಗೆ ಕಲ್ಲಿನಿಂದ ಹೊಡೆದಿದ್ದರು’ ಎಂದರು.

‘ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಮಹಿಳೆಯನ್ನು ಎಎಸ್‌ಐ ಹಾಗೂ ಇತರರು ಹಿಡಿದಿದ್ದರು. ನಂತರ, ಎಸ್‌.ಜೆ.ಪಾರ್ಕ್‌ ಪೊಲೀಸರ ವಶಕ್ಕೆ ಒಪ್ಪಿಸಿದ್ದರು' ಎಂದೂ ಹೇಳಿದರು.

‘ಘಟನೆ ಬಗ್ಗೆ ಎಎಸ್‌ಐ ಅವರು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌.ಜೆ.ಪಾರ್ಕ್ ಪೊಲೀಸರು, ಮಹಿಳೆಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ’ ಎಂದೂ ತಿಳಿಸಿದರು.

ಎಎಸ್‌ಐ ವರ್ತನೆಗೆ ಆಕ್ರೋಶ: ವಿಡಿಯೊವನ್ನು ಹಂಚಿಕೊಂಡಿರುವ ಸಾರ್ವಜನಿಕರು, ‘ಎಎಸ್‌ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಅಂಗವಿಕಲ ಮಹಿಳೆಯನ್ನು ನಡುರಸ್ತೆಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಮಹಿಳೆ ತಪ್ಪು ಮಾಡಿದ್ದರೆ, ಮಹಿಳಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಅವರನ್ನು ವಶಕ್ಕೆ ಪಡೆಯಬಹುದಿತ್ತು. ಅದನ್ನು ಬಿಟ್ಟು ಎಎಸ್‌ಐ ಅವರೇ ಮಹಿಳೆಯನ್ನು ಹಿಡಿದು ಎಳೆದಾಡಿ ಬೂಟುಗಾಲಿನಿಂದ ಒದ್ದಿರುವುದು ಖಂಡನೀಯ’ ಎಂದೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮಹಿಳೆ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದ ಎಎಸ್‌ಐ ಹಾಗೂ ಇತರರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಪ್ಪಿತಸ್ಥ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕು. ತನಿಖೆ ನಡೆಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು‘ ಎಂದೂ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT