ಭಾನುವಾರ, ಅಕ್ಟೋಬರ್ 17, 2021
23 °C

ವಾಹನ ಚಾಲನೆ ವೇಳೆ ಹೆಡ್‌ ಫೋನ್‌, ಬ್ಲೂ ಟೂತ್ ಬಳಸಿದರೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಹನ ಚಲಾಯಿಸುವ ವೇಳೆ ಹೆಡ್‌ ಫೋನ್ ಹಾಗೂ ಬ್ಲೂ ಟೂತ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಈ ನಿಯಮ ಉಲ್ಲಂಘಿಸಿದವರಿಗೆ ಸಂಚಾರ ಪೊಲೀಸರು ₹ 1,000 ದಂಡ ವಿಧಿಸಲಿದ್ದಾರೆ.

‘ಮೋಟಾರು ವಾಹನಗಳ ಕಾಯ್ದೆ ಪ್ರಕಾರ, ವಾಹನ ಚಾಲನೆ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆಯುವ ಉಪಕರಣಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಚಾಲನೆ ವೇಳೆ ಯಾರಾದರೂ ಮೊಬೈಲ್, ಹೆಡ್‌ಫೋನ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣ ಬಳಸಿದರೆ ದಂಡ ವಿಧಿಸಲಾಗುವುದು. ಈ ಬಗ್ಗೆ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ‘ಪ್ರಜಾವಾಣಿ’ಗೆ ಹೇಳಿದರು.

‘ನ್ಯಾವಿಗೇಷನ್‌ ಉದ್ದೇಶಕ್ಕಾಗಿ ಮಾತ್ರ ಉಪಕರಣ ಬಳಸಲು ಅವಕಾಶವಿದೆ’ ಎಂದೂ ತಿಳಿಸಿದರು.

ಅಪಘಾತಕ್ಕೆ ಕಾರಣ: ‘ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಬಹುತೇಕರು, ಹೆಡ್‌ಫೋನ್ ಹಾಗೂ ಬ್ಲೂಟೂತ್ ಉಪಕರಣ ಬಳಕೆ ಮಾಡುತ್ತಿರುತ್ತಾರೆ. ವಾಹನ ಚಲಾಯಿಸುತ್ತಲೇ ಮೊಬೈಲ್‌ನಲ್ಲಿ ಮಾತನಾಡುತ್ತಾರೆ ಹಾಗೂ ಹಾಡು ಕೇಳುತ್ತಾರೆ. ಇಂಥ ವರ್ತನೆಯಿಂದ ಗಮನ ಬೇರೆಡೆ ಹೋಗಿ, ಅಪಘಾತಗಳು ಹೆಚ್ಚುತ್ತವೆ. ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ’ ಎಂದೂ ರವಿಕಾಂತೇಗೌಡ ಹೇಳಿದರು.

‘ಕಣ್ಣಿಗೆ ಕಾಣುವ ನಿಯಮಗಳನ್ನು ಉಲ್ಲಂಘಿಸಿದವರನ್ನು ಪೊಲೀಸರು ರಸ್ತೆಯಲ್ಲಿ ಅಡ್ಡಗಟ್ಟಿ ದಂಡ ವಿಧಿಸುತ್ತಿದ್ದಾರೆ. ಹೆಡ್‌ಫೋನ್ ಹಾಗೂ ಬ್ಲೂಟೂತ್‌ ಬಳಸುವವರನ್ನೂ ನಿಲ್ಲಿಸಿ ಇನ್ನು ಮುಂದೆ ಪ್ರಕರಣ ದಾಖಲಿಸಲಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು