ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಐಟಿಐಗಳಲ್ಲಿ ನ.1ರಿಂದ ತರಬೇತಿ

ಟಾಟಾ ಟೆಕ್ನಾಲಜೀಸ್‌ ಸಹಯೋಗ: ₹4,636 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ
Last Updated 21 ಅಕ್ಟೋಬರ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯೋಗ’ ಕಾರ್ಯಕ್ರಮದಡಿ ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ ₹4,636 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ 150 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ಇನ್ನೆರಡು ವಾರದಲ್ಲಿ ಉದ್ಘಾಟನೆಯಾಗಲಿವೆ. ಈ ಸಂಸ್ಥೆಗಳಲ್ಲಿ ಆಧುನಿಕ ಕೋರ್ಸ್‌ಗಳನ್ನು ಒಳಗೊಂಡ ತರಬೇತಿ ನ.1ರಿಂದ ಆರಂಭವಾಗಲಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಪೀಣ್ಯದಲ್ಲಿ ಮೇಲ್ದರ್ಜೆಗೇರಿಸಿರುವ ಸರ್ಕಾರಿ ಐಟಿಐ ಕೇಂದ್ರವನ್ನು ಗುರುವಾರ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಹೊಸ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಉದ್ಯಮಗಳ ಈಗಿನ ಬೇಡಿಕೆಗೆ ತಕ್ಕಂತೆ ಹೊಸ ಪಠ್ಯಕ್ರಮ ರೂಪಿಸಲಾಗಿದೆ. ಅಡ್ವಾನ್ಸ್‌ಡ್‌ ಸಿಎನ್‌ಸಿ ಮಷಿನಿಂಗ್, ಬೇಸಿಕ್ಸ್ ಆಫ್ ಡಿಸೈನ್ ಆ್ಯಂಡ್‌ ವರ್ಚುಯಲ್ ವೆರಿಫಿಕೇಷನ್, ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್‌ಡ್‌ ಟೂಲ್ಸ್, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಆ್ಯಂಡ್‌ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆ್ಯಂಡ್‌ ಆಟೋಮೇಷನ್ ಮತ್ತು ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ಇವುಗಳಲ್ಲಿ ಸೇರಿವೆ’ ಎಂದು ಸಚಿವರು ವಿವರಿಸಿದರು.

‘ಈ ಸಂಸ್ಥೆಗಳಲ್ಲಿ ಜೆಟಿಒಗಳಿಗೆ ಹೊಸ ತಾಂತ್ರಿಕತೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ 20 ಸಾವಿರ ಜೆಟಿಒಗಳಿಗೆ ಅನುಕೂಲವಾಗುತ್ತದೆ. ಇದರ ಜೊತೆಗೆ ಐಟಿಐ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರಯೋಜನವಾಗುತ್ತದೆ’ ಎಂದರು.

‘ಟಾಟಾ ಕಂಪನಿಯೊಂದಿಗೆ ದೀರ್ಘಾವಧಿ ಸಹಭಾಗಿತ್ವ ಹೊಂದುವ ಉದ್ದೇಶವಿದ್ದು ಮೊದಲ ಎರಡು ವರ್ಷಗಳಿಗಾಗಿ 300 ಹಾಗೂ ಮೂರನೇ ವರ್ಷಕ್ಕಾಗಿ 150 ವಿಷಯ ಪರಿಣತರನ್ನು ನಿಯೋಜಿಸಲಾಗುತ್ತದೆ. ಇದರಿಂದ ಜೆಟಿಒಗಳಿಗೆ ಹಾಗೂ ಐಟಿಐ ಬೋಧಕ ಸಿಬ್ಬಂದಿಗೆ ಹೊಸ ರೀತಿಯ ತರಬೇತಿಗಳ ಬಗ್ಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ’ ಎಂದು ಸಚಿವರು ಹೇಳಿದರು.

‘ಯಂತ್ರೋಪಕರಣಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸುವುದಕ್ಕಾಗಿ 5 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಇದು ಒಳಗೊಂಡಿದೆ. ಅಗತ್ಯಬಿದ್ದರೆ ಇದನ್ನು ಇನ್ನೂ 5 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ. ಈ 150 ಸಂಸ್ಥೆಗಳಿಗೆ ಅಳವಡಿಸಿರುವ 11 ದೀರ್ಘಾವಧಿ ತರಬೇತಿ ಹಾಗೂ 23 ಅಲ್ಪಾವಧಿ ತರಬೇತಿ ಕೋರ್ಸ್‌ಗಳನ್ನು ಕ್ರಮೇಣ ಎಲ್ಲ ಐಟಿಐಗಳಿಗೆ ವಿಸ್ತರಿಸಲಾಗುತ್ತದೆ’ ಎಂದು ಅವರು ಹೇಳಿದರು.

ಒಟ್ಟು ₹4,636 ಕೋಟಿ ಯೋಜನಾ ವೆಚ್ಚದ ಪೈಕಿ ಕರ್ನಾಟಕ ಸರ್ಕಾರ ಶೇ 12ರಷ್ಟನ್ನು ಹಾಗೂ ಟಾಟಾ ಟೆಕ್ನಾಲಜೀಸ್ ಶೇ 88ರಷ್ಟನ್ನು ಭರಿಸುತ್ತಿವೆ. ಜೊತೆಗೆ ರಾಜ್ಯ ಸರ್ಕಾರವು ಭೌತಿಕ ಮೂಲಸೌಕರ್ಯಗಳಿಗಾಗಿ ₹220 ಕೋಟಿ ವೆಚ್ಚ ಮಾಡುತ್ತಿದೆ. ತಾಂತ್ರಿಕ ಉನ್ನತೀಕರಣಕ್ಕಾಗಿ ಆಧುನಿಕ ಸಿಎನ್‌ಸಿ ಯಂತ್ರ, ಲೇಸರ್ ಕಟ್ಟಿಂಗ್ ಯಂತ್ರ, ಆಡಿಟಿವ್ ಮ್ಯಾನುಫ್ಯಾಕ್ಟರಿಂಗ್, 3 ಡಿ ಪ್ರಿಂಟಿಂಗ್ ಮೆಷಿನ್, ಕೈಗಾರಿಕಾ ರೊಬೋಟ್, ವಿನೂತನ ತಂತ್ರಾಂಶಗಳು ಐಟಿಐಗಳಿಗೆ ಸೇರ್ಪಡೆಯಾಗಲಿವೆ.

ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಡಾ.ಕೆ.ಹರೀಶ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT