ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಮುಷ್ಕರ: ಪ್ರಯಾಣಿಕರು ಹೈರಾಣ

ಬಿಎಂಟಿಸಿಯ 126 ಬಸ್‌ಗಳಷ್ಟೇ ಸಂಚಾರ * ಅಲ್ಲಲ್ಲಿ ವಾಗ್ವಾದ
Last Updated 12 ಡಿಸೆಂಬರ್ 2020, 20:24 IST
ಅಕ್ಷರ ಗಾತ್ರ

ಬೆಂಗಳೂರು: ನೌಕರರ ಮುಷ್ಕರದಿಂದ ನಗರದಲ್ಲಿ ಬಸ್ ಸೇವೆ ಸ್ಥಗಿತಗೊಂಡು ಎರಡನೇ ದಿನವಾದ ಶನಿವಾರವೂ ನಾಗರಿಕರು ಸಮಸ್ಯೆ ಎದುರಿಸಿದರು. ಬಿಎಂಟಿಸಿಯ 6 ಸಾವಿರಕ್ಕೂ ಅಧಿಕ ಬಸ್‌ಗಳಲ್ಲಿ 126 ಬಸ್‌ಗಳಷ್ಟೇ ರಸ್ತೆಗಿಳಿದವು.

ಮುಷ್ಕರದ ಬಗ್ಗೆ ಸಹಮತ ಇಲ್ಲದ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರ ಜತೆಗೆ ನಿರ್ವಾಹಕ ಮತ್ತು ಚಾಲಕ ಹುದ್ದೆಯಿಂದ ಸಂಚಾರ ನಿಯಂತ್ರಕ (ಟಿ.ಸಿ) ಹುದ್ದೆಗೆ ಬಡ್ತಿ ಹೊಂದಿದವರನ್ನು ಕಾರ್ಯಾಚರಣೆಗೆ ಬಳಸಲಾಯಿತು. ಇದಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದರು.

ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲ ನೌಕರರು ಬಸ್ ಚಾಲನೆಗೆ ಮುಂದಾದರು. ಇದಕ್ಕೆ ಪ್ರತಿಭಟನಾನಿರತರು ಅಡ್ಡಿಪಡಿಸಿದರು. ಮೆಜೆಸ್ಟಿಕ್, ಮೈಸೂರು ರಸ್ತೆ ಬಳಿಯ ಉಪನಗರ ಬಸ್‌ನಿಲ್ದಾಣ, ಶಿವಾಜಿನಗರ, ಜಯನಗರ, ಜೆ.ಪಿ.ನಗರ ಸೇರಿ ಹಲವೆಡೆ ಬಸ್‌ಗಳು ಸಂಚರಿಸಿದವು. ಮೆಜೆಸ್ಟಿಕ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ವಾದ ನಡೆಯಿತು. ಮಧ್ಯಾಹ್ನದ ನಂತರ ಯಾವುದೇ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಡಿ.ಕೆ. ಶಿವಕುಮಾರ್ ಬೆಂಬಲ: ಬನಶಂಕರಿಯ ಬಸ್ ನಿಲ್ದಾಣದಲ್ಲಿ ಮುಷ್ಕರನಿರತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು. ಪ್ರತಿಭಟನೆಯಲ್ಲಿ ನೌಕರರ ಕುಟುಂಬ ಸದಸ್ಯರೂ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕೆಂಗೇರಿ, ಹೆಣ್ಣೂರು, ಬನಶಂಕರಿ, ಯಶವಂತಪುರ ಸೇರಿದಂತೆ ಹಲವು ಡಿಪೊಗಳಲ್ಲಿ ನೌಕರರು ಧರಣಿ ನಡೆಸಿದರು.

ಪ್ರಯಾಣಿಕರ ಪಡಿಪಾಟಲು: ಮುಷ್ಕರದ ಮಾಹಿತಿ ಇಲ್ಲದ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

‘ಸಾರಿಗೆ ಸಂಸ್ಥೆಗಳ ಬಸ್ ಇಲ್ಲದೆ ಮೆಜೆಸ್ಟಿಕ್‌ನಲ್ಲೇ ಕಾಲ ಕಳೆದೆ. ಬಿಎಂಟಿಸಿ ಬಸ್‌ ಇಲ್ಲದ ಕಾರಣ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಲ್ಲಿ ದುಬಾರಿ ಬೆಲೆ ತೆತ್ತು ಓಡಾಡಬೇಕಾಯಿತು’ ಎಂದು ಹೈದರಾಬಾದ್‌ನಿಂದ ಬಂದಿದ್ದ ಅನಿರುದ್ದ ತಿಳಿಸಿದರು.

ಕೊರೊನಾ ಕಾರಣದಿಂದ ಮೆಟ್ರೊ ರೈಲಿನಲ್ಲಿ ಪ್ರಯಾಣ ಕಡಿಮೆಯಾಗಿತ್ತು. ಬಸ್ ಮುಷ್ಕರದ ಕಾರಣದಿಂದ ಕೆಲವರು ಮೆಟ್ರೊ ರೈಲಿನ ಮೊರೆ ಹೋದರು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಮೆಟ್ರೊ ರೈಲು ಸಂಚಾರದ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. ಜನದಟ್ಟಣೆ ಹೆಚ್ಚಿದ್ದಾಗ 2 ನಿಮಿಷಕ್ಕೆ ಒಂದು ರೈಲುಗಳು ಸಂಚರಿಸಿದವು.

ಏಳು ನೌಕರರು ವಶಕ್ಕೆ

ನಗರದ ಮೆಜೆಸ್ಟಿಕ್ ನಿಲ್ದಾಣದಲ್ಲಿದ್ದ ಪ್ರತಿಭಟನೆಯಲ್ಲಿ ನಿರತರಾಗಿದ್ದ ಬಿಎಂಟಿಸಿಯ ಏಳು ನೌಕರರನ್ನು ಪೊಲೀಸರು ವಶಕ್ಕೆ ಪಡೆದು ಸಂಜೆ ಬಿಡುಗಡೆ ಮಾಡಿದರು.

ನಿಲ್ದಾಣದಲ್ಲಿ ನೌಕರರು, ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಮಧ್ಯಪ್ರವೇಶಿಸಿದ್ದ ಪೊಲೀಸರು, ‘ಪ್ರತಿಭಟನೆಗೆ ಅವಕಾಶವಿಲ್ಲ. ಭಾಷಣ ಮಾಡಿ ಮತ್ತಷ್ಟು ಪ್ರಚೋದನೆ ನೀಡಬೇಡಿ’ ಎಂದರು.

ಅಷ್ಟಕ್ಕೆ ಮಾತಿಗೆ ಮಾತು ಬೆಳೆದು ಏಳು ಮಂದಿಯನ್ನು ಪೊಲೀಸರು, ಠಾಣೆಗೆ ಕರೆದೊಯ್ದರು.

ದುಪ್ಪಟ್ಟು ದರ; ಆಟೊ ಚಾಲಕರಿಗೆ ಎಚ್ಚರಿಕೆ

ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿಯದ್ದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಟೊ ಚಾಲಕರು, ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಿಭಾಗದ ಪೊಲೀಸರು, ಶನಿವಾರ ನಗರದಲ್ಲಿ ಆಟೊಗಳ ತಪಾಸಣೆ ನಡೆಸಿದರು.

ಆಯಾ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಪಿಎಸ್‌ಐಗಳ ನೇತೃತ್ವದಲ್ಲಿ ಪೊಲೀಸರು, ಆಟೊಗಳನ್ನು ತಡೆದು ಪರಿಶೀಲನೆ ನಡೆಸಿದರು. ಚಾಲಕರು ಹಾಗೂ ಅದರಲ್ಲಿದ್ದ ಪ್ರಯಾಣಿಕರಿಂದ ಮಾಹಿತಿ ಪಡೆದು ದಾಖಲಿಸಿಕೊಂಡರು. ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ 100ಕ್ಕೂ ಹೆಚ್ಚು ಆಟೊಗಳ ಚಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT