ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ನಡೆಯದ ಮರಗಣತಿ:ಪ್ರತಿ ವರ್ಷ ಲಕ್ಷಾಂತರ ಸಸಿ ನೆಡುತ್ತಿದ್ದರೂ ತಗ್ಗದ ತಾಪಮಾನ

Published 4 ಜೂನ್ 2023, 20:38 IST
Last Updated 4 ಜೂನ್ 2023, 20:38 IST
ಅಕ್ಷರ ಗಾತ್ರ

ಬೆಂಗಳೂರು: ಮತ್ತೊಂದು ಪರಿಸರ ದಿನ ಆಚರಣೆಗೆ ‘ಹಸಿರಿನ ನಗರಿ’ ಬೆಂಗಳೂರು ಸಜ್ಜಾಗುತ್ತಿದೆ. ಸರ್ಕಾರದ ಇಲಾಖೆಗಳು ಸೇರಿದಂತೆ ನೂರಾರು ಸಂಘ–ಸಂಸ್ಥೆಗಳು ಲಕ್ಷಾಂತರ ಸಸಿಗಳನ್ನು ನೆಡುತ್ತಿವೆ. ಆದರೆ, ಹೈಕೋರ್ಟ್‌ನ ಸೂಚನೆಯ ನಂತರವೂ ನಗರದಲ್ಲಿರುವ ಗಿಡ–ಮರಗಳ ಗಣತಿ ಇನ್ನೂ ಆರಂಭವಾಗಲಿಲ್ಲ.

ಉದ್ಯಾನ ನಗರಿ ಎಂದೂ ಕರೆಯಲಾಗುವ ರಾಜಧಾನಿಯಲ್ಲಿ ಮರಗಳ ಗಣತಿ ಮಾಡಿ, ಸಾರ್ವಜನಿಕವಾಗಿ ಪ್ರಕಟಿಸಬೇಕು. ಮೂರು ತಿಂಗಳಲ್ಲಿ ಪ್ರಕ್ರಿಯೆ ಆರಂಭಿಸಬೇಕು ಎಂದು ಹೈಕೋರ್ಟ್‌ 2019ರಲ್ಲಿ ಬಿಬಿಎಂಪಿಗೆ ಸೂಚಿಸಿತ್ತು. ಈವರೆಗೆ ಪ್ರಾಯೋಗಿಕ ಕೆಲಸವಷ್ಟೇ ಆಗಿದೆ. ಆರು ಸಂಪುಟದಲ್ಲಿ ವರದಿ ತಯಾರಿಸಲಾಗಿದ್ದು, 46,593 ಮರಗಳ ಮಾಹಿತಿಯನ್ನು ಬಿಬಿಎಂಪಿ ಸದ್ಯಕ್ಕೆ ಹೊಂದಿದೆ.

‘ಮರಗಳ ವಿಜ್ಞಾನ ಮತ್ತು ತಂತಜ್ಞಾನ ಸಂಸ್ಥೆ (ಐಡಬ್ಲ್ಯುಎಸ್‌ಟಿ) ಸಹಯೋಗದೊಂದಿಗೆ ಬಿಬಿಎಂಪಿ ಅಂದಾಜು ₹4 ಕೋಟಿ ವೆಚ್ಚದಲ್ಲಿ ಮರಗಳ ಗಣತಿ ನಡೆಸಿದೆ. ಆದರೆ, ಅದು ಸಮಗ್ರವಾಗಿಲ್ಲ. ಹೊಸ ತಂತ್ರಜ್ಞಾನ, ಆ್ಯಪ್‌ ಸೇರಿದಂತೆ ಹಲವು ರೀತಿಯಲ್ಲಿ ಗಣತಿ ಕಾರ್ಯ ಕೈಗೊಳ್ಳುವುದಾಗಿ ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದರೂ, ನಾಲ್ಕು ವರ್ಷಗಳಿಂದ ಏನು ಆಗಿಲ್ಲ. ಗಣತಿಯಲ್ಲಿ ಮರಗಳ ಜಾತಿ, ಉಪಯೋಗ, ಪರಿಸರ ಮೇಲಿನ ಪರಿಣಾಮ ಕುರಿತ ವಿವರಗಳಿರಲಿವೆ. ಮುಂದೆ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲು ಅನುಕೂಲವಾಗಲಿದೆ’ ಎಂದು ಮರಗಳ ಗಣತಿಗೆ ಆದೇಶಿಸಬೇಕು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್‌ನ ದತ್ತಾತ್ರೇಯ ಟಿ.ದೇವರೆ ಮಾಹಿತಿ ನೀಡಿದರು.

‘ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯಲಾಗುತ್ತಿದೆ. ಬದಲಿಗೆ ಸಸಿಗಳನ್ನು ನೆಟ್ಟು ಪೋಷಿಸಬೇಕೆಂಬ ಕಾನೂನಿದೆ. ಆದರೆ, ‘ನಮ್ಮ ಮೆಟ್ರೊ’ದಂತಹ ಬೃಹತ್‌ ಕಾಮಗಾರಿಗಳು ನಡೆದಾಗ ಮರ ಕಡಿದ ಸುತ್ತಮುತ್ತ ಸಸಿಗಳನ್ನು ನೆಟ್ಟ ಉದಾಹರಣೆಗಳೇ ಇಲ್ಲ. ಹೊರವಲಯ ಅಥವಾ ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟ ದಾಖಲೆ ತೋರಿಸಲಾಗುತ್ತಿದೆ. ಇದರಿಂದ ಉಪಯೋಗವಾಗುವುದಿಲ್ಲ. ಕಾಮಗಾರಿಗೆ ಮರ ಕಡಿದರೆ, ಆ ಸುತ್ತಮುತ್ತ, ರಸ್ತೆ ಬದಿಯೇ ಸಸಿಗಳನ್ನು ನೆಟ್ಟು ಪೋಷಿಸಿ, ಮರಗಳನ್ನಾಗಿಸಬೇಕು’ ಎಂದರು.

20 ಲಕ್ಷ?: ‘ಬೆಂಗಳೂರಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡಲಾಗುತ್ತಿದೆ. ಅದರಲ್ಲೂ ಪರಿಸರ ದಿನಾಚರಣೆ ಸಂದರ್ಭದಲ್ಲಿ ಹಲವು ಸಂಘ–ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್ಎಸ್‌ಬಿ, ಬಿಎಂಆರ್‌ಸಿಎಲ್‌ ಕೂಡ ಸಸಿಗಳನ್ನು ನೆಡುತ್ತವೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳ ಸಂಖ್ಯೆ 20 ಲಕ್ಷವನ್ನೂ ಮೀರಿಲ್ಲ. ಹೀಗಾಗಿ ನಗರದ ಉಷ್ಣಾಂಶ ಹೆಚ್ಚಾಗುತ್ತಲೇ ಇದೆ’ ಎಂದು ಪ್ರೊ. ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.

ಉಳಿದವೆಷ್ಟು?: ‘ಪರಿಸರ ದಿನಾಚರಣೆ ಸಂದರ್ಭದಲ್ಲಿ ‘ಕೋಟಿ ವೃಕ್ಷ’, ‘ಲಕ್ಷ ಸಸಿ’ ಎಂಬ ಹೆಸರಿನಲ್ಲಿ ಅಭಿಯಾನ ನಡೆಸಿ ಸಸಿಗಳನ್ನು ನೆಟ್ಟಿದ್ದೇವೆ ಎಂದು ಪ್ರಚಾರ ಪಡೆಯಲಾಗುತ್ತದೆ. ಅವುಗಳಲ್ಲಿ ಮುಂದಿನ ವರ್ಷ ಉಳಿದವೆಷ್ಟು ಎಂದು ಯಾರೂ ನೋಡುವುದಿಲ್ಲ. ಕಳೆದ ಐದಾರು ವರ್ಷಗಳಿಂದ ನೆಟ್ಟಿರುವ ಸಸಿಗಳಲ್ಲಿ ಶೇ 50ರಷ್ಟು ಉಳಿದಿದ್ದರೂ ಈ ವೇಳೆಗೆ ಕನಿಷ್ಠ 50 ಲಕ್ಷ ಮರಗಳಿರಬೇಕಿತ್ತು. ಸಸಿ ನೆಡುವುದಷ್ಟೇ ಅಲ್ಲ, ಪೋಷಿಸಿ ಮರವಾಗಿಸುವ ಬದ್ಧತೆಯೂ ಇರಬೇಕು’ ಎಂದು ಪರಿಸರ ಕಾರ್ಯಕರ್ತ ರಾಂಪ್ರಸಾದ್‌ ಹೇಳಿದರು.

Cut-off box - ಗಣತಿಗೆ ಸದ್ಯದಲ್ಲಿಯೇ ನಿರ್ಧಾರ: ಡಿಸಿಎಫ್‌ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗಿಡ–ಮರಗಳ ಗಣತಿ ಕಾರ್ಯವನ್ನು ‘ಪೈಲಟ್‌ ಪ್ರಾಜೆಕ್ಟ್‌’ನಲ್ಲಿ ಕೈಗೊಳ್ಳಲಾಗಿದೆ. ಸಂಪೂರ್ಣವಾಗಿ ಗಣತಿ ಪ್ರಕ್ರಿಯೆ ನಡೆದಿಲ್ಲ. ಜಿಕೆವಿಕೆ ಸೇರಿ ಹಲವು ಸಂಸ್ಥೆಗಳೊಂದಿಗೆ ಚರ್ಚೆ ನಡೆದಿದೆ. ಸರ್ಕಾರದ ಅನುಮತಿ ಪಡೆದು ಶೀಘ್ರ ಗಣತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು. ‘ಹೈಕೋರ್ಟ್‌ಗೆ ಮತ್ತೆ ಮೇಲ್ಮನವಿ’ ‘2019ರಲ್ಲಿ ಹೈಕೋರ್ಟ್‌ ಆದೇಶ ನೀಡಿದ್ದರೂ ಈವರೆಗೆ ಮರಗಣತಿ ಆರಂಭವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಸಾಕಷ್ಟು ಬಾರಿ ವಿಚಾರಿಸಿದ್ದೇವೆ. ಏನೇನೋ ಸಬೂಬು ಹೇಳುತ್ತಾರೆ.  ಇಂದಿಗೂ ಯೋಜನೆ ಅನುಷ್ಠಾನಗೊಳಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಹೈಕೋರ್ಟ್‌ಗೆ ಮತ್ತೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ದತ್ತಾತ್ರೇಯ ಟಿ.ದೇವರೆ ತಿಳಿಸಿದರು.

Cut-off box - ಕಾಯಿದೆಯಂತೆ ಪ್ರತಿ ಮನೆಗೆ 2 ಮರ ಕರ್ನಾಟಕ ಮರಗಳ ಸಂರಕ್ಷಣೆ ಕಾಯಿದೆಯ ನಿಯಮಗಳ ಪ್ರಕಾರ ನಗರ ಪ್ರದೇಶಗಳಲ್ಲಿ 222 ಚದರ ಮೀಟರ್‌ (2389 ಚದರ ಅಡಿ) ಮನೆ–ಕಟ್ಟಡಗಳ ನಿವೇಶನಗಳಲ್ಲಿ ಎರಡು ಮರಗಳಿರಬೇಕು. 892 ಚದರ ಮೀಟರ್‌ (9600 ಚದರ ಅಡಿ) ಒಳಗಿನ ಕಟ್ಟಡ–ನಿವೇಶನಗಳಲ್ಲಿ ಮೂರು ನಂತರ ವಿಸ್ತೀರ್ಣದಲ್ಲಿ ನಾಲ್ಕು ಮರಗಳಿರಬೇಕು. ಕೈಗಾರಿಕೆ ಹಾಗೂ ಸಂಸ್ಥೆಗಳ ಆವರಣದಲ್ಲಿ ಪ್ರತಿ ಹೆಕ್ಟೇರ್‌ಗೆ 25 ಮರಗಳಿರಬೇಕು. ‘ಆದರೆ 1.30 ಕೋಟಿ ಜನಸಂಖ್ಯೆಯ ಬೆಂಗಳೂರಿನಲ್ಲಿ ಏಳು ಜನರಿಗೆ ಒಂದು ಮರವಿದೆ. ಚಂಡೀಗಡ ಮತ್ತು ಗಾಂಧಿನಗರಗಳಲ್ಲಿ ಪ್ರತಿ ವ್ಯಕ್ತಿಗೆ ನಾಲ್ಕು ಗಿಡಗಳಿವೆ ನಾಸಿಕ್‌ನಲ್ಲಿ ಪ್ರತಿಯೊಬ್ಬರಿಗೆ ಎರಡು ಗಿಡಗಳಿವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ.ವಿ. ರಾಮಚಂದ್ರ ಹೇಳಿದರು.

Cut-off box - ಬಿಬಿಎಂಪಿ ಪ್ರಾಯೋಗಿಕವಾಗಿ ನಡೆಸಿರುವ ಗಣತಿ ವಿವರ ವರದಿ;ಮರಗಳ ಸಂಖ್ಯೆ 1;1991 2;5454 3;3333 4;6032 5;4176 6;8988 7;8007 8;8612

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT