ಭಾನುವಾರ, ಮಾರ್ಚ್ 7, 2021
29 °C
ಅನುಮತಿ ಪಡೆಯದೆಯೇ ಮರಗಳ ಮಾರಣ ಹೋಮ l ಸಾರ್ವಜನಿಕರ ಆಕ್ರೋಶ

ವೈಟ್‌ಫೀಲ್ಡ್‌: ರಸ್ತೆ ವಿಸ್ತರಣೆ ನೆಪ ಮರಗಳಿಗೆ ಕೊಡಲಿ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಸ್ತೆ ವಿಸ್ತರಣೆ ಕಾಮಗಾರಿ ಸಲುವಾಗಿ ವೈಟ್‌ಫೀಲ್ಡ್‌ನ ಜಿ.ಆರ್‌.ಟೆಕ್‌ ಪಾರ್ಕ್‌ ರಸ್ತೆಯ ಇಸಿಸಿ ಸರ್ವಿಸ್‌ ರಸ್ತೆ ಪಕ್ಕದಲ್ಲಿದ್ದ 5 ಮರಗಳನ್ನು ಮಂಗಳವಾರ ಕಡಿಯಲಾಗಿದೆ.

ನೆರಳು ನೀಡುತ್ತಿದ್ದ ಈ ಮರಗಳನ್ನು ಕಡಿದಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮರ ಕಡಿಯುತ್ತಿರುವ ಚಿತ್ರಗಳನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ ಮೂಲಕ ಹಂಚಿಕೊಂಡಿರುವ ಸ್ಥಳೀಯರು, ಇದನ್ನು ಪಾಲಿಕೆ ಅಧಿಕಾರಿ ಗಳು ಹಾಗೂ ಸ್ಥಳೀಯ ಕಾರ್ಪೊರೇಟರ್‌ ಖಾತೆಗಳಿಗೆ ಟ್ಯಾಗ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. 

ಮರ ಕಡಿಯುವಾಗಲೇ ಸ್ಥಳೀಯರು ಪ್ರಶ್ನೆ ಮಾಡಿದಾಗ ಸ್ಥಳದಲ್ಲಿದ್ದ ಅಧಿಕಾರಿ ಯೊಬ್ಬರು, ‘ಅರಣ್ಯ ವಿಭಾಗದ ಅನು ಮತಿ ಪಡೆದೇ ಮರಗಳನ್ನು ಕೊಂಬೆ ಕತ್ತರಿಸುತ್ತಿದ್ದೇವೆ. ಇನ್ನೂ 10 ಮರ ಕಡಿಯಬೇಕಾಗುತ್ತದೆ’ ಎಂದು ಉತ್ತರಿ ಸಿದ್ದರು. ‘ಪ್ರಜಾವಾಣಿ’ ಈ ಬಗ್ಗೆ ಪರಿ ಶೀಲಿಸಿದಾಗ ಈ ಮರಗಳನ್ನು ಕಡಿಯಲು ಅನುಮತಿಯನ್ನೇ ಪಡೆದಿಲ್ಲ ಎಂಬುದು ಗೊತ್ತಾಗಿದೆ. 

‘ಇಲ್ಲಿ ಮರಗಳನ್ನು ಕಡಿಯಲು ಅಥವಾ ಕೊಂಬೆಗಳನ್ನು ಕತ್ತರಿಸಲು ಯಾವುದೇ ಅನುಮತಿ ನೀಡಿಲ್ಲ’ ಎಂದು ಮಹದೇವಪುರ ವಲಯದ ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದರು. 

ಈ ಕುರಿತು ಪ್ರತಿಕ್ರಿಯಿಸಿದ ಮಹ ದೇವಪುರ ವಲಯದ ಪಾಲಿಕೆ ಅಧಿಕಾರಿ ಯೊಬ್ಬರು, ‘ಮರ ಕಡಿಯಲು ಅರಣ್ಯ ವಿಭಾಗಕ್ಕೆ ಅನುಮತಿ ಕೇಳಿದ್ದೆವು. ಆದರೆ, ಅನುಮತಿ ಇನ್ನೂ ಸಿಕ್ಕಿರಲಿಲ್ಲ’ ಎಂದು ಒಪ್ಪಿಕೊಂಡರು.

‘ಈ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಅಡ್ಡಿಯಾಗಿದ್ದ ಎರಡು ಮರಗಳನ್ನು ಮಾತ್ರ ಕಡಿದಿದ್ದೇವೆ. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತ ವಾಗಿದ್ದರಿಂದ ಇನ್ನಾವುದೇ ಮರ ಕಡಿ ಯದಂತೆ ಸೂಚನೆ ನೀಡಿದ್ದೇವೆ’ ಎಂದು ತಿಳಿಸಿದರು. 

 ‘ನಮ್ಮ ವೈಟ್‌ಫೀಲ್ಡ್‌’ ಸಂಘಟನೆಯ ಸ್ವಯಂಸೇವಕ ಸಂದೀಪ್‌ ಅನಿರುಧನ್, ‘ಇದು ಸರ್ವಿಸ್‌ ರಸ್ತೆ. ಅದರ ಪಕ್ಕದಲ್ಲೇ ವಿಶಾಲವಾದ ರಸ್ತೆ ಇದೆ. ಹಾಗಾಗಿ ಸರ್ವಿಸ್‌ ರಸ್ತೆ ವಿಸ್ತರಣೆಯ ಅಗತ್ಯವಿರಲಿಲ್ಲ. ಅಧಿಕಾರಿಗಳು ಅನುಮತಿ ಪಡೆದೇ ಮರ ಕಡಿದಿದ್ದೇವೆ ಎಂದಾಗ ಸುಮ್ಮನಾದೆವು. ಆದರೆ, ಯಾವುದೇ ಅನುಮತಿ ಇಲ್ಲದೇ ಮರ ಕಡಿಯುತ್ತಿದ್ದಾರೆ ಎಂದರೆ ಅದರಲ್ಲೇನೋ ಸಂಚು ಇದೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಈ ರಸ್ತೆಯ ಪಕ್ಕದಲ್ಲಿ ಭಾರಿ ಗಾತ್ರದ ಅನೇಕ ಮರಗಳಿವೆ. ಇವುಗಳನ್ನು
ಉಳಿಸಿಕೊಳ್ಳಬೇಕು. ಸ್ಥಳೀಯರು ಸುಮ್ಮನಿದ್ದರೆ, ನೆರಳು ನೀಡುವ ಈ ಮರಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. 

***

ಇಸಿಸಿ ಸರ್ವಿಸ್‌ ರಸ್ತೆ ಪಕ್ಕದ 5 ಮರಗಳನ್ನು ಕಳೆದು ಕೊಂಡಿದ್ದೇವೆ. ಇಲ್ಲಿರುವ ಯಾವುದೇ ಮರಗಳನ್ನು ಕಡಿಯಬಾರದು. ಇದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ.

- ಸಂದೀಪ್‌ ಅನಿರುಧನ್, ವೈಟ್‌ಫೀಲ್ಡ್‌ ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು