ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೋಡಿ, ಗುಂಜೂರು ಪ್ರದೇಶದಲ್ಲಿ ರೂಪುಗೊಳ್ಳುತ್ತಿದೆ ‘ಮರಗಳ ಉದ್ಯಾನ’

Last Updated 29 ಮೇ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಮಿಷನ್‌- 2022’ ಯೋಜನೆ ಅಡಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಡುಗೋಡಿ ಹಾಗೂ ಗುಂಜೂರಿನಲ್ಲಿ ಮರಗಳ ಉದ್ಯಾನ ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಿದೆ.

ಕಾಡುಗೋಡಿಯಲ್ಲಿ ಬೆಂಗಳೂರು– ಚಿಕ್ಕತಿರುಪತಿ ರಸ್ತೆಗೆ ಹೊಂದಿಕೊಂಡಂತೆ ಇರುವ ಅರಣ್ಯ ಇಲಾಖೆ ಜಾಗದಲ್ಲಿ ನೆಡುತೋಪು ಬೆಳೆಸಲಾಗಿದೆ. ಇಲ್ಲಿ ಕೆಲವು ಸರ್ಕಾರೇತರ ಸಂಸ್ಥೆಗಳ ನೆರವಿನಿಂದ ನಡಿಗೆ ಪಥ, ಪುಟ್ಟ ಗುಡಿಸಲುಗಳು (ಗಾಜೆಬೊ) ಹಾಗೂಮುಖ್ಯದ್ವಾರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಉದ್ಯಾನದ ಸುತ್ತ ಕಲ್ಲಿನ ಆವರಣ ಗೋಡೆ ಇರಲಿದೆ.

ಕಲ್ಲಿನಿಂದ ನಿರ್ಮಿಸಿದ 22 ಆಸನಗಳನ್ನು ಕಾಂಡ್ಯೂಯೆಂಟ್‌ ಸಂಸ್ಥೆಯು ಕೊಡುಗೆಯಾಗಿ ನೀಡಿದೆ. ಅಲ್ಲದೇ ಹಕ್ಕಿಗಳನ್ನು ಸೆಳೆಯುವುದಕ್ಕೆ ಪುಟ್ಟ ಕೊಳ, ಪ್ರಾಣಿಗಳನ್ನು ಸೆಳೆಯಲು ಮೂರು ಕಿರುಗೊಳಗಳು ಹಾಗೂ ಕರ್ಬ್‌ ಸ್ಟೋನ್‌ ಅಳವಡಿಸಿರುವ 500 ಮೀ. ಉದ್ದದ ನಡಿಗೆ ಪಥವನ್ನು ನಿರ್ಮಿಸಿಕೊಟ್ಟಿದೆ.

ರೋಟರಿ ಸಂಸ್ಥೆಯು ಒಂದು ಪುಟ್ಟ ಗುಡಿಸಲನ್ನು ಒದಗಿಸಿದೆ. ಎರಡು ಕೊಳವೆಬಾವಿಗಳನ್ನು ಕೊರೆಯುವ ವೆಚ್ಚವನ್ನು ಭರಿಸಿದೆ. 80 ಮೀ. ಉದ್ದದ ಆವರಣ ಗೋಡೆ ಹಾಗೂ 2 ಕಿ.ಮೀ. ಉದ್ದದ ಕಚ್ಚಾ ರಸ್ತೆ, ಪ್ರವೇಶದ್ವಾರ ಹಾಗೂ ಟಿಕೆಟ್‌ ಕೌಂಟರ್‌ಗಳನ್ನು ನಿರ್ಮಿಸಲಿದೆ. ಸುಮಧುರ ಪ್ರತಿಷ್ಠಾನವು ಐದು ವೀಕ್ಷಣಾ ಗೋಪುರ, ಹುಲ್ಲುಹಾಸು ಹಾಗೂ ಸೌರ ದೀಪಗಳನ್ನು ಒದಗಿಸಲಿದೆ.

ವಾಹನ ನಿಲುಗಡೆ ತಾಣ, ಕಲ್ಲಿನ 20 ಆಸನಗಳು, ಮಕ್ಕಳ ಆಟದ ಮೈದಾನ, ಆಟದ ಸಾಮಗ್ರಿ ಅಳವಡಿಕೆ, ಕರ್ಬ್‌ ಸ್ಟೋನ್‌ ಅಳವಡಿಸಿದ ನಡಿಗೆ ಪಥ, ಶೌಚಾಲಯ, ಬಯಲು ವ್ಯಾಯಾಮ ಶಾಲೆ, ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ ಮುಂತಾದ ಕಾಮಗಾರಿಗಳನ್ನು ಸರ್ಕಾರದ ಅನುದಾನದಲ್ಲಿ ನಡೆಸಲಾಗುತ್ತದೆ.

ವರ್ತೂರು ಹೋಬಳಿಯ ಗುಂಜೂರು ಪ್ರದೇಶದ ಡೀಮ್ಡ್‌ ಅರಣ್ಯದಲ್ಲಿ ಮರಗಳ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದ್ದು, ನೆಡುತೋಪು ಬೆಳೆಸಲಾಗಿದೆ. ಇಲ್ಲಿ ವಾಹನ ನಿಲುಗಡೆ ತಾಣ, ಕಲ್ಲಿನ ಆಸನಗಳು, ಆಟದ ಸಲಕರಣೆಗಳನ್ನು ಒಳಗೊಂಡ ಮಕ್ಕಳ ಉದ್ಯಾನ ನಿರ್ಮಾಣವಾಗಲಿದೆ. ಇಲ್ಲೂ ಕರ್ಬ್‌ ಸ್ಟೋನ್‌ ಬಳಸಿ ನಡಿಗೆ ಪಥ ನಿರ್ಮಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸ್ಥಳ ಪರಿಶೀಲಿಸಿದ ಸಚಿವ ಲಿಂಬಾವಳಿ
ಕಾಡುಗೋಡಿ ಹಾಗೂ ಗುಂಜೂರುಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಮರಗಳ ಉದ್ಯಾನಗಳಿಗೆಅರಣ್ಯ ಸಚಿವ ಹಾಗೂ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡರು.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ,) ಆರ್.ಕೆ. ಸಿಂಗ್, ಹೆಚ್ಚುವರಿ ‌ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಯೋಜನೆ) ಅನಿತಾ ಅರೆಕ್ಕಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ವೆಂಕಟೇಶ್ ಅವರು ಕಾಮಗಾರಿಗಳ ವಿವರ ಮತ್ತು ಅನುಷ್ಠಾನದ ಬಗ್ಗೆ ಸಚಿವರಿಗೆ ಮಾಹಿತಿ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT