ಗುರುವಾರ , ಮೇ 6, 2021
25 °C

ಮರ ಉಳಿಸಲು ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ‘ಅಭಿವೃದ್ಧಿಯ ಹೆಸರಿನಲ್ಲಿ ಎಚ್ಎಎಲ್ ಮುಖ್ಯ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿ ಕೆಳ ಸೇತುವೆ ನಿರ್ಮಾಣಕ್ಕಾಗಿ ಸಾಲುಮರಗಳಿಗೆ ಪಾಲಿಕೆಯು ಕೊಡಲಿ ಹಾಕುವುದನ್ನು ನಿಲ್ಲಿಸಿ ಮರಗಳಿಗೆ ರಕ್ಷಣೆ ನೀಡಬೇಕು’ ಎಂದು ವೃಕ್ಷ ಬಚಾವೋ ಆಂದೋಲನ ಸಮಿತಿಯ ಸದಸ್ಯರು ಭಾನುವಾರ ಅಭಿಯಾನ ನಡೆಸಿದರು.

ಪಾಲಿಕೆ ಸದಸ್ಯ ಎನ್. ರಮೇಶ್ ನೇತೃತ್ವದಲ್ಲಿ ಮರಗಳಿಗೆ ಬಟ್ಟೆಯ ಪರದೆ ಕಟ್ಟುವ ಮೂಲಕ ಮರ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಎಚ್ಎಎಲ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ‘ನಮ್ಮ ಮರ ನಮ್ಮ ಉಸಿರು’,  ‘ಇದು ನನ್ನ ಕಣ್ಣೀರು, ರಕ್ತ ಕಣ್ಣೀರು’, ‘ಮರಕ್ಕೂ ಜೀವವಿದೆ ಅಳಲು ಬಿಡಬೇಡಿ’ ಎಂಬ ಘೋಷವಾಕ್ಯಗಳನ್ನು ಕೂಗಿದರು.

ಎನ್. ರಮೇಶ್, ‘ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಮೆಟ್ರೊ, ಮೇಲ್ಸೇತುವೆ, ಕೆಳಸೇತುವೆ ಎಂದು ಹೇಳಿಕೊಂಡು 150 ರಿಂದ 200 ವರ್ಷಗಳ ಮರಗಳನ್ನು ರಾತ್ರೋ ರಾತ್ರಿ ಕಡಿಯಲು ಮುಂದಾಗಿದೆ.  ಮರಗಳನ್ನು ಕೊಡಲಿ ಹಾಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

‘ಮುಖ್ಯ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ವಿಸ್ತರಣೆಗೆ ಸರ್ವೀಸ್‌ ರಸ್ತೆ ಮಾಡಿಕೊಂಡು ಈ ಮರಗಳ ಬದಲಾಗಿ ಬೇರೆ ಗಿಡಗಳನ್ನು ನೆಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ ಮರಗಳಿಗೆ ಕಟ್ಟರ್, ಕೊಡಲಿ, ಇಂಜೆಕ್ಷನ್ ಕೊಡುವುದು, ಆಸಿಡ್‌ ಹಾಕುವುದನ್ನು ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೃಕ್ಷ ಬಚಾವೋ ಆಂದೋಲನ ಸಮಿತಿಯ ಮುಖ್ಯಸ್ಥ ಪರಿಸರ ಮಂಜು, ‘ಎಚ್ಎಎಲ್ ಮುಖ್ಯ ರಸ್ತೆಯ ಕೆಳ ಸೇತುವೆ ನಿರ್ಮಾಣಕ್ಕೆ ಅಡ್ಡಲಾಗಿರುವ ಮರಗಳನ್ನು ತೆರವುಗೊಳಿಸಲು ಒಟ್ಟು 48 ಮರಗಳ ಪೈಕಿ 25 ಕ್ಕೆ ಕೊಡಲಿ ಏಟು ನೀಡಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ 8 ಬೃಹತ್ ಮರಗಳನ್ನು ಕತ್ತರಿಸಲಾಗಿದ್ದು ಇನ್ನುಳಿದ ಹದಿನೇಳು ಮರಗಳ ರಕ್ಷಣೆಗೆ ಮುಂದಾಗಿದ್ದೇವೆ’ ಎಂದರು.

ವನ್ಯಜೀವಿ ಸಂರಕ್ಷಕ ಸಿಂಹಾದ್ರಿ ಕಿರಣ್ ಕುಮಾರ್, ಲಕ್ಷ್ಮೀನಾರಾಯಣ, ಹರೀಶ್, ಶಿವಪ್ಪ ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು