ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಾಂಗಿಯಾಗಿ ಬಾವಿ ತೋಡಿದ್ದ ಗೌರಿ ನಾಯ್ಕಗೆ ಸನ್ಮಾನ

Published 13 ಮಾರ್ಚ್ 2024, 16:05 IST
Last Updated 13 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಏಕಾಂಗಿಯಾಗಿ 70 ಅಡಿ ಆಳದ ಬಾವಿ ತೋಡಿ ತೋಟ ಉಳಿಸಿದ್ದ ಹಾಗೂ ಬಾವಿ ತೋಡಿ ಅಂಗನವಾಡಿಗೂ ನೀರಿನ ವ್ಯವಸ್ಥೆ ಮಾಡಿದ್ದ ಶಿರಸಿಯ ಗೌರಿ ನಾಯ್ಕ ಅವರನ್ನು ಕೆಎಸ್‌ಆರ್‌ಟಿಸಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಗೌರಿ ನಾಯ್ಕ ಅವರ ಸಮಾಜಮುಖಿ ಸೇವೆ ಮಾದರಿಯಾದುದು. ಅವರು ಬಾವಿ ತೋಡಿ ಅಂಗನವಾಡಿಗೆ ನೀರು ಒದಗಿಸಿದ್ದರು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಆ ಬಾವಿಗೆ ಕಟ್ಟೆ ಕಟ್ಟಲು ನಿಗಮದಿಂದ ₹1 ಲಕ್ಷವನ್ನು ಅಲ್ಲಿನ ಜಿಲ್ಲಾಧಿಕಾರಿಗೆ ನೀಡಲಾಗುವುದು’ ಎಂದು ತಿಳಿಸಿದರು.

‘ಎಲ್ಲ ರಂಗಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ತಾಂತ್ರಿಕ ಸಿಬ್ಬಂದಿಯಲ್ಲಿ ಪುರುಷರಿಗಿಂತ ಹೆಚ್ಚಿನ ಕಾರ್ಯಕ್ಷಮತೆಯಿಂದ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ವಿ. ಅನ್ಬುಕುಮಾರ್‌ ಮಾತನಾಡಿ, ‘ನಿಗಮದಲ್ಲಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಆಡಳಿತ ಸಿಬ್ಬಂದಿ ಸೇರಿ ಒಟ್ಟು 3,068 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ತಪ್ಪಿಸಲು ಮಹಿಳಾ ನೌಕರರ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆ. ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆ ನೀಡಲಾಗುತ್ತಿದೆ. 6 ತಿಂಗಳು ಶಿಶುಪಾಲನಾ ರಜೆ, ತಿಂಗಳಿಗೆ ₹1250 ಶಿಶು ಪಾಲನಾ ಭತ್ಯೆ ನೀಡಲಾಗುತ್ತಿದೆ’ ಎಂದು ವಿವಿಧ ಯೋಜನೆಗಳನ್ನು ವಿವರಿಸಿದರು.

ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಕೆಎಸ್‌ಆರ್‌ಟಿಸಿ ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ನಂದಿನಿದೇವಿ ಕೆ. ಉಪಸ್ಥಿತರಿದ್ದರು.

Cut-off box - ಆರು ಪ್ರಶಸ್ತಿ ಕೆಎಸ್‌ಆರ್‌ಟಿಸಿಗೆ ಐದು ರಾಷ್ಟ್ರೀಯ ಮತ್ತು ಒಂದು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ತಿಳಿಸಿದ್ದಾರೆ. ಬಸ್ ಬ್ರಾಂಡ್ ನಿರ್ವಹಣೆಗಾಗಿ ‘ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿ’ ಮಾನವ ಸಂಪನ್ಮೂಲ ಉಪ ಕ್ರಮಕ್ಕಾಗಿ ‘ಪಂಜಾಬ್ ನಾಯಕತ್ವ ಪ್ರಶಸ್ತಿ’ ಅತ್ಯುತ್ತಮ ಗ್ರಾಹಕ ಸೇವಾ ಉಪಕ್ರಮಕ್ಕಾಗಿ ‘ಸ್ಟಾರ್ ಆಫ್‌ ಎಕ್ಸಲೆನ್ಸ್’ ಪ್ರಶಸ್ತಿ ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಸತತ ವಿನೂತನ ಉಪಕ್ರಮಗಳಿಗಾಗಿ ‘ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿ’ ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ ’ಗೌವರ್ನೆನ್ಸ್‌ ನೌ’ 10ನೇ ಸಾರ್ವಜನಿಕ ಉದ್ದಿಮೆ ಪ್ರಶಸ್ತಿ ಹಾಗೂ ಅತ್ಯುತ್ತಮ ವಿನೂತನ ವಾಹನ ಸಮೂಹ ನಿರ್ವಹಣೆಗಾಗಿ ‘ಈಶಾನ್ಯ ಭಾರತ ನಾಯಕತ್ವ ಪ್ರಶಸ್ತಿ’ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT