ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಮೇಲ್ಸೇತುವೆಯಲ್ಲಿ ದೋಷ: ವಾಹನ ಸಂಚಾರ ಒಂದು ವಾರ ನಿರ್ಬಂಧ

ಸರ್ವಿಸ್‌ ರಸ್ತೆಗಳಲ್ಲಿ ದಟ್ಟಣೆ ಕಿರಿಕಿರಿ
Last Updated 25 ಡಿಸೆಂಬರ್ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಂತ ವಾಹನ ದಟ್ಟಣೆ ಇರುವ ತುಮಕೂರು ರಸ್ತೆಯ ಎಲಿವೇಟೆಡ್‌ ಕಾರಿಡಾರ್‌ನ (ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಎರಡು ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ನಲ್ಲಿ ಸಣ್ಣ ದೋಷ ಕಂಡು ಬಂದಿದ್ದು, ಶನಿವಾರ ಮಧ್ಯಾಹ್ನದಿಂದ ಒಂದು ವಾರದವರೆಗೆ ಇದರಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಕ್ರಿಸ್‌ಮಸ್ ರಜೆಯಿಂದ ವಾಹನ ದಟ್ಟಣೆ ಹೆಚ್ಚಾಗಿದ್ದ ಸಂದರ್ಭದಲ್ಲೇ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿದ್ದು, ಸರ್ವೀಸ್‌ ರಸ್ತೆಗಳಲ್ಲಿ ಕಿಲೋ ಮಿಟರ್‌ ಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು.‌

8ನೇ ಮೈಲಿ ಜಂಕ್ಷನ್‌ನ ಸ್ವಾತಿ ಪೆಟ್ರೋಲ್ ಬಂಕ್ ಮುಂಭಾಗದ 102 ಮತ್ತು 103ನೇ ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ ಸಣ್ಣದಾಗಿ ಸವೆದಿದ್ದು, ಅದನ್ನು ಬದಲಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್ಎಐ) ಮೂಲಗಳು ತಿಳಿಸಿವೆ. 20 ಕೇಬಲ್‌ಗಳಲ್ಲಿ 2 ಕೇಬಲ್‌ಗಳಲ್ಲಿ ಸಮಸ್ಯೆ ಇರುವುದನ್ನು ಸ್ಥಳಕ್ಕೆ ಭೇಟಿ ನೀಡಿದ್ದ ಎನ್‌ಎಚ್‌ಎಐ ಅಧಿಕಾರಿಗಳು ಪತ್ತೆ ಹಚ್ಚಿದರು. ದುರಸ್ತಿಗಾಗಿ ಒಂದು ವಾರದ ಮಟ್ಟಿಗೆ ಮೇಲ್ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದರು.

‘ಪ್ರತಿ ಮಳೆಗಾಲದ ಬಳಿಕ ಸಾಮಾನ್ಯವಾಗಿ ಮೇಲ್ಸೇತುವೆ ಸ್ಥಿತಿಗತಿ ಪರಿಶೀಲನೆ ನಡೆಸುತ್ತೇವೆ. ಕಂಬಗಳ ನಡುವಿನ ಎರಡು ಕೇಬಲ್‌ಗಳು ತುಕ್ಕು ಹಿಡಿದಿರುವುದನ್ನು ಗಮನಿಸಿದ್ದೇವೆ. ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ದುರಸ್ತಿ ಕಾರ್ಯ ನಿರ್ಧರಿಸಲು ತಜ್ಞರ ಸಮಿತಿ ಮೇಲ್ಸೇತುವೆಯನ್ನು ಭಾನುವಾರ ಪರಿಶೀಲಿಸಲಿದೆ. ಆ ಸಮಿತಿಯ ಅಭಿಪ್ರಾಯ ಆಧರಿಸಿ ವಾಹನ ಸಂಚಾರಕ್ಕೆ ಅನುವು ಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ. ದುರಸ್ತಿ ಕಾರ್ಯ ಆರಂಭಿಸಿದರೆ ಪೂರ್ಣಗೊಳಿಸಲು ನಾಲ್ಕು ದಿನಗಳು ಬೇಕಾಗಬಹುದು’ ಎಂದು ವಿವರಿಸಿದರು.

ಮೇಲ್ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿದ ಬಳಿಕ ಸಂಚಾರ ದಟ್ಟಣೆ ನಿಭಾಯಿಸಲು ಸಂಚಾರ ಪೊಲೀಸರು ಕೂಡಲೇ ಮಾರ್ಗ ಬದಲಾವಣೆಯ ಅಧಿಸೂಚನೆ ಹೊರಡಿಸಿದರು. ತುಮಕೂರು ರಸ್ತೆಯಿಂದ ಬೆಂಗಳೂರು ಪ್ರವೇಶಿಸುವ ಎಲ್ಲಾ ವಾಹನಗಳು ಮಾದಾವರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೈಸ್ ರಸ್ತೆಯನ್ನು ಬಳಸಿ ಬೆಂಗಳೂರು ಪ್ರವೇಶಿಸಬೇಕು. ಅದೇ ರೀತಿ, ಹೊರಹೋಗುವ ವಾಹನಗಳು ಗೊರಗುಂಟೆಪಾಳ್ಯ ಸಿಎಂಟಿಐ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ರಿಂಗ್‌ ರಸ್ತೆ ಮೂಲಕ ಸುಮನಹಳ್ಳಿ ಮೂಲಕ ನೈಸ್ ರಸ್ತೆ ಪ್ರವೇಶಿಸಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT