ಭಾನುವಾರ, ಜುಲೈ 3, 2022
24 °C
ತುರಹಳ್ಳಿ ಅರಣ್ಯದಲ್ಲಿ ‘ಟ್ರೀ ಪಾರ್ಕ್‌’ಗೆ ವಿರೋಧ * ಪರಿಸರ ಪ್ರಿಯರಿಂದ ಟ್ವಿಟರ್‌ ಅಭಿಯಾನ

‘ಮರಗಳ ಉದ್ಯಾನ’ಕ್ಕಾಗಿ ಅರಣ್ಯ ನಾಶ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತುರಹಳ್ಳಿ ಅರಣ್ಯಪ್ರದೇಶವನ್ನು ಕಡಿದು ‘ಮರಗಳ ಉದ್ಯಾನ’ ಅಭಿವೃದ್ಧಿ ಪಡಿಸಲು ಮುಂದಾಗಿರುವ ರಾಜ್ಯಸರ್ಕಾರದ ನಿರ್ಧಾರ ಮೂರ್ಖತನದ್ದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಪರಿಸರ ಪ್ರೇಮಿಗಳು ‘ತುರಹಳ್ಳಿ ಅರಣ್ಯಪ್ರದೇಶ ಉಳಿಸಿ’, ‘ಮರಗಳ ಉದ್ಯಾನ ಅಭಿವೃದ್ಧಿ ಕಾಮಗಾರಿ ನಿಲ್ಲಿಸಿ’ ಎಂದು ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

#SaveTurahalliForest ಹ್ಯಾಶ್‌ಟ್ಯಾಗ್‌ ಅಡಿ ಈ ಅಭಿಯಾನ ನಡೆಯುತ್ತಿದೆ. ‘ಅರಣ್ಯ ಇಲಾಖೆ ಈಗಾಗಲೇ ಮರಗಳ ಉದ್ಯಾನ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಅರಣ್ಯನಾಶವೂ ಪ್ರಾರಂಭಗೊಂಡಿದೆ. ತುರಹಳ್ಳಿಯಲ್ಲಿ ಪಕ್ಷಿ ವೀಕ್ಷಣೆಗೆ ಬರುತ್ತಿದ್ದ ಪ್ರತಿಯೊಬ್ಬರೂ ಬುಲ್ಡೋಜರ್‌ಗಳ ಎದುರು ನಿಂತು ಕಾಮಗಾರಿ ತಡೆಯಬೇಕು. ಮರಗಳನ್ನು ಕಡಿಯದಂತೆ ಒತ್ತಾಯಿಸಬೇಕು’ ಎಂದು ಪರಿಸರ ತಜ್ಞ ಲಿಯೊ ಸಲ್ಡಾನಾ ಟ್ವೀಟ್ ಮಾಡಿದ್ದಾರೆ.

‘ಅರಣ್ಯೇತರ ಉದ್ದೇಶಕ್ಕಾಗಿ ಅರಣ್ಯ ಪ್ರದೇಶವನ್ನು ನಾಶ ಮಾಡಲು ಮುಂದಾಗಿರುವ, ಈ ಯೋಜನೆಗೆ ಕೈಜೋಡಿಸಿರುವ ಎಲ್ಲರ ವಿರುದ್ಧವೂ ಕ್ರಿಮಿನಲ್‌ ದೂರು ನೀಡಲಿದ್ದೇವೆ’ ಎಂದು ಎಚ್ಚರಿಸಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಟ್ಯಾಗ್ ಮಾಡಿದ್ದಾರೆ.

‘ಮಂಗಳವಾರ ಬೆಳಿಗ್ಗೆಯಿಂದಲೇ ಕಾಮಗಾರಿ ಆರಂಭಗೊಂಡಿದೆ. ಅರಣ್ಯೇತರ ಚಟುವಟಿಕೆಗೆ ಅರಣ್ಯ ಪ್ರದೇಶವನ್ನು ನಾಶ ಪಡಿಸುವುದು ಅರಣ್ಯಸಂರಕ್ಷಣೆ ಕಾಯ್ದೆ ಸೆಕ್ಷನ್‌ 2ರ ಉಲ್ಲಂಘನೆ ಮಾತ್ರವಲ್ಲದೆ, ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯೂ ಆಗುತ್ತದೆ. ನಾಗರಿಕರು ಇದನ್ನು ಪ್ರತಿಭಟಿಸಬೇಕು’ ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

‘ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಇಲ್ಲಿ ‘ಟ್ರೀ ಪಾರ್ಕ್‌’ ನಿರ್ಮಾಣ ಮಾಡುತ್ತಿರುವುದಾಗಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈಗಾಗಲೇ ಟೆಂಡರ್‌ ಕೂಡ ಆಗಿ ಕಾಮಗಾರಿ ಪ್ರಾರಂಭವಾಗಿದೆ. ನಾಗರಿಕರ ಅಭಿಪ್ರಾಯ ಕೇಳುವವರೇ ಇಲ್ಲ’ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ಅರಣ್ಯದಲ್ಲಿ ನವಿಲುಗಳು ಸೇರಿದಂತೆ 200ಕ್ಕೂ ವಿವಿಧ ಪ್ರಭೇದದ ಪ್ರಾಣಿ, ಪಕ್ಷಿಗಳು ಇವೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಎಲ್ಲರಿಗೂ ಮನವಿ ಸಲ್ಲಿಸಿದರೂ ಕಾಮಗಾರಿ ನಡೆಯುತ್ತಿದೆ. ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಟಿ. ಸೋಮಶೇಖರ್‌ ಅವರಿಗೆ ಕೇಳಿದರೆ, ಈ ಬಗ್ಗೆ ನನಗೇನೂ ಗೊತ್ತೇ ಇಲ್ಲ ಎನ್ನುತ್ತಾರೆ. ಮರಗಳ ಉದ್ಯಾನಕ್ಕೆ ತಡೆ ನೀಡದೇ ಹೋದರೆ ತುರಹಳ್ಳಿ ಅರಣ್ಯವೂ ನಾಶವಾಗುವುದರಲ್ಲಿ ಸಂಶಯವಿಲ್ಲ’ ಎಂದು ಪ್ರತಿಭಟನೆಕಾರ ಡಾ.ಎ. ಭಾನು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು