ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಕೋಟಿ ನಗದು, 15 ಕೆ.ಜಿ ಚಿನ್ನಕ್ಕೆ ಬೇಡಿಕೆ

ಉದ್ಯಮಿ ಪುತ್ರನ ಅಪಹರಣ ಪ್ರಕರಣ: ವಿಕಾಸ್‌ ಬೋರಾ ರಕ್ಷಿಸಿದ ಪೊಲೀಸರು
Last Updated 25 ಅಕ್ಟೋಬರ್ 2022, 15:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅಕ್ಕಿಪೇಟೆಯ ಉದ್ಯಮಿ ಮಹೇಂದ್ರ ಕುಮಾರ್‌ (65) ಅವರ ಪುತ್ರ ವಿಕಾಸ್‌ ಬೋರಾನನ್ನು ಅಪಹರಿಸಿ ಹಣ ಹಾಗೂ ಚಿನ್ನಾಭರಣಕ್ಕೆ ಬೇಡಿಕೆಯಟ್ಟಿದ್ದ ಇಬ್ಬರು ಆರೋಪಿಗಳನ್ನು ವಿಜಯನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆನಂದ್‌ಕುಮಾರ್‌ ಹಾಗೂ ಅಜರ್ ಪಾಷಾ ಬಂಧಿತರು. ಪ್ರಮುಖ ಸೂತ್ರಧಾರ ಅಸ್ಗರ್‌ ಹಾಗೂ ತನ್ವೀರ್ ತಲೆಮರೆಸಿಕೊಂಡಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ವಿಕಾಸ್‌ ಬೋರಾನನ್ನು ಪೊಲೀಸರು ರಕ್ಷಿಸಿದ್ದಾರೆ.

‘ಆರೋಪಿಗಳ ಸುಳಿವು ಹಾಗೂ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ, ಅಪಹರಣ ನಡೆದ 12 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

‘ಮಹೇಂದ್ರಕುಮಾರ್‌ ಅವರು ಅಕ್ಕಿಪೇಟೆಯಲ್ಲಿ ಫರ್ನಿಚರ್‌ ವ್ಯಾಪಾರ ನಡೆಸುತ್ತಿದ್ದರು. ಅ.23ರಂದು (ಭಾನುವಾರ) ಅಂಗಡಿಗೆ ರಜೆಯಿತ್ತು. ಎಲ್ಲರೂ ಮನೆಯಲ್ಲಿದ್ದರು. ಆಗ ವಿಕಾಸ್ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಫರ್ನಿಚರ್‌ಗೆ ಆರ್ಡರ್‌ ಕೊಡುವುದಾಗಿ ಆರೋಪಿಗಳು ಹೇಳಿದ್ದರು. ಅದನ್ನೇ ನಂಬಿದ ವಿಕಾಸ್‌ ಕಾರಿನಲ್ಲಿ ಉತ್ತರಹಳ್ಳಿಗೆ ತೆರಳಿದ್ದರು. ಅಲ್ಲಿಂದ ಆರೋಪಿಗಳು ವಿಕಾಸ್‌ ಅವರನ್ನು ಅಪಹರಿಸಿದ್ದರು’ ಎಂದು ಅವರು ವಿವರಿಸಿದರು.

‘ಆರೋಪಿಗಳು ತಮ್ಮದೇ ಕಾರಿನಲ್ಲಿ ಅಪಹರಿಸಿ ಮಹೇಂದ್ರಕುಮಾರ್‌ಗೆ ಕರೆ ಮಾಡಿ ₹ 1 ಕೋಟಿ ನಗದು ಹಾಗೂ 15 ಕೆ.ಜಿ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು. ತಾವು ಹೇಳಿದ ಜಾಗಕ್ಕೆ ಹಣ, ಚಿನ್ನಾಭರಣ ತಲುಪಿಸಿದರೆ ಮಾತ್ರ ಮಗನನ್ನು ಬಿಡುಗಡೆ ಮಾಡಲಾಗುವುದೆಂದು ಬೆದರಿಕೆ ಒಡ್ಡಿದ್ದರು’ ಎಂದು ತಿಳಿಸಿದರು.

‘ವಿಜಯನಗರ ಠಾಣೆಯ ಇನ್‌ಸ್ಪೆಕ್ಟರ್‌ ಡಿ.ಸಂತೋಷ್‌ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಬಂಧಿತರಿಂದ ಒಂದು ಕಾರು ಹಾಗೂ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

ವ್ಯವಹಾರ ತಿಳಿದಿದ್ದ ಆರೋಪಿಗಳು: ‘ಆಸ್ಗರ್‌ ಹಾಗೂ ಮಹೇಂದ್ರಕುಮಾರ್‌ಗೆ ಮೊದಲೇ ಪರಿಚಯವಿತ್ತು. ಮಹೇಂದ್ರ ಅವರ ವಹಿವಾಟು ತಿಳಿದಿತ್ತು. ತನ್ವೀರ್‌ ಸಹಾಯದಿಂದ ಮೂವರೂ ಸೇರಿಕೊಂಡು ವಿಕಾಸ್‌ನನ್ನು ಅಪಹರಿಸಿ, ಕೊಳ್ಳೇಗಾಲ ರಸ್ತೆಯ ತೋಟದಲ್ಲಿ ಮನೆಯಲ್ಲಿ ಬಂಧಿಸಿಟ್ಟಿದ್ದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT