ಬೆಂಗಳೂರು: ನಗರದ ಎರಡು ಕಡೆ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಮಾದನಾಯಕನಹಳ್ಳಿ ನಿವಾಸಿ ಯಶೋಧಮ್ಮ (70) ಹಾಗೂ ಜೆ.ಪಿ. ನಗರ ನಿವಾಸಿ ಅಜಿತ್‌ಕುಮಾರ್ (23) ಮೃತರು. ಎರಡೂ ಅಪಘಾತ ಸಂಬಂಧ ಪೀಣ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
‘ವೃದ್ಧೆ ಯಶೋಧಮ್ಮ, ಗುರುವಾರ ನಸುಕಿನಲ್ಲಿ ಹಾಸನಕ್ಕೆ ಹೊರಟಿದ್ದರು. ಹಾಸನ ಬಸ್‌ಗಾಗಿ ಬೆಳಿಗ್ಗೆ 6.15ರ ಸುಮಾರಿಗೆ 8ನೇ ಮೈಲಿ ಬಳಿ ಬಂದಿದ್ದರು. ಇದೇ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದಾಗ, ಕ್ಯಾಂಟರ್ ಡಿಕ್ಕಿ ಹೊಡೆದಿತ್ತು’ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ಹೇಳಿದರು.
ಬೈಕ್‌ಗೆ ಕಾರು ಡಿಕ್ಕಿ: ‘ಕಂಪನಿಯೊಂದರಲ್ಲಿ ಮೇಲ್ವಿಚಾರಕ ರಾಗಿರುವ ಅಜಿತ್ ಕುಮಾರ್, ನೈಸ್ ರಸ್ತೆಯ ಬೇಗೂರು ಕೊಪ್ಪ ಮೇಲ್ಸೇತುವೆ ಬಳಿ ಬೈಕ್‌ನಲ್ಲಿ ಬುಧವಾರ ಮಧ್ಯಾಹ್ನ ಹೊರಟಿದ್ದರು. ಇದೇ ಸಂದರ್ಭದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ತಿಳಿಸಿದರು.