ಮಂಗಳವಾರ, ಅಕ್ಟೋಬರ್ 20, 2020
21 °C

ಅಪರಾಧ ಸುದ್ದಿಗಳು: ದ್ವಿಚಕ್ರ ವಾಹನ ಕದ್ದು ಮಾರಾಟ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಆರೋಪದಡಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಉತ್ತರಹಳ್ಳಿಯ ಸತೀಶ್ (22) ಹಾಗೂ ಜೆ.ಪಿ.ನಗರ 2ನೇ ಹಂತದ ಕೆಎಸ್‌ಆರ್‌ಟಿಸಿ ಲೇಔಟ್‌ನ ಮಣಿಕಂಠ ಅಲಿಯಾಸ್ ಅಪ್ಪಿ (25) ಬಂಧಿತರು. ಅವರಿಂದ ₹ 8 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕದ್ದ ವಾಹನಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣ ಹಂಚಿಕೊಳ್ಳುತ್ತಿದ್ದರು. ಹಣ ಖಾಲಿಯಾಗುತ್ತಿದ್ದಂತೆ ಪುನಃ ಕೃತ್ಯ ಎಸಗುತ್ತಿದ್ದರು.’ ‘ಮೈಕೊ ಲೇಔಟ್, ಹುಳಿಮಾವು, ಜೆ.ಪಿ.ನಗರ, ನಂದಿನಿ ಲೇಔಟ್, ಕೋಣನಕುಂಟೆ, ಸುಬ್ರಹ್ಮಣ್ಯಪುರ, ಅನ್ನಪೂರ್ಣೇಶ್ವರಿನಗರ ಹಾಗೂ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದೂ ಪೊಲೀಸರು ತಿಳಿಸಿದರು.

ಕ್ರಿಕೆಟ್ ಬೆಟ್ಟಿಂಗ್; ₹ 1.90 ಲಕ್ಷ ಜಪ್ತಿ

ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ ಸಂತೋಷ್‌ಕುಮಾರ್ (36) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ ₹1.90 ಲಕ್ಷ ಜಪ್ತಿ ಮಾಡಿದ್ದಾರೆ.

‘ರಾಮಮೂರ್ತಿನಗರದ ಮುನಿಬಸಪ್ಪ ಕಾಂಪೌಂಡ್ ನಿವಾಸಿಯಾದ ಸಂತೋಷ್‌ಕುಮಾರ್, ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ. ಅ. 12ರಂದು ರಾತ್ರಿ ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸ
ಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು. 'ಖಾಸಗಿ ಕಂಪನಿಯೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ವೇಳೆ ಕೆಲಸ ಹೋಗಿತ್ತು. ಐಪಿಎಲ್ ಕ್ರಿಕೆಟ್ ಆರಂಭವಾಗುತ್ತಿದ್ದಂತೆ, ಬೆಟ್ಟಿಂಗ್ ನಡೆಸಲಾರಂಭಿಸಿದ್ದ. ತಂಡಗಳ ಸೋಲು– ಗೆಲುವು ಲೆಕ್ಕಾಚಾರದಲ್ಲಿ ಆರೋಪಿ ಹಣ ಕಟ್ಟಿಸಿಕೊಳ್ಳುತ್ತಿದ್ದ. ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆಯಲ್ಲೂ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಹಣ ಸಂಗ್ರಹಿಸಿದ್ದ’ ಎಂದೂ ತಿಳಿಸಿದರು.

₹ 23.97 ಲಕ್ಷ ಮೌಲ್ಯದ ಸಿಗರೇಟ್ ಜಪ್ತಿ

ಅಕ್ರಮವಾಗಿ ಸಾಗಿಸುತ್ತಿದ್ದ ₹ 23.97 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.

‘ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರ್ಜಾದಿಂದ ಕಾರ್ಗೊದಲ್ಲಿ 8 ಬಾಕ್ಸ್‌ಗಳು ಬಂದಿದ್ದವು. ಅವುಗಳನ್ನು ಪರಿಶೀಲಿಸಿದಾಗ 1.59 ಲಕ್ಷ ವಿದೇಶಿ ಸಿಗರೇಟ್‌ಗಳು ಪತ್ತೆಯಾಗಿವೆ’ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

‘ಸಿಗರೇಟ್‌ ಸಾಗಣೆ ವಿಳಾಸದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ನಿವೃತ್ತ ಐಪಿಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್

‘ಇಂದಿರಾನಗರ ಕ್ಲಬ್‌ ಅಧ್ಯಕ್ಷರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಬಿ.ಎನ್‌.ಎಸ್ ರೆಡ್ಡಿ ಹಾಗೂ ನಾಗೇಂದ್ರ ಎಂಬುವರು, ಕ್ಲಬ್‌ ಹಣ ದುರುಪಯೋಗಪಡಿಸಿಕೊಂಡು ಸದಸ್ಯರಿಗೆ ವಂಚಿಸಿದ್ದಾರೆ’ ಎಂದು ಆರೋಪಿಸಿ ಕ್ಲಬ್ ಸದಸ್ಯ ರಾಮ್ ಮೋಹನ್ ಮೆನನ್ ಎಂಬುವರು ದೂರು ನೀಡಿದ್ದಾರೆ.

‘ಇದೇ 8ರಂದು ಮೆನನ್ ಅವರು ದೂರು ಕೊಟ್ಟಿದ್ದಾರೆ. ಬಿ.ಎನ್‌.ಎಸ್. ರೆಡ್ಡಿ ಹಾಗೂ ನಾಗೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಇಂದಿರಾನಗರ ಠಾಣೆ ಪೊಲೀಸರು ಹೇಳಿದರು. ‘ಕ್ಲಬ್‌ನಲ್ಲಿ 13 ಸದಸ್ಯರಿದ್ದಾರೆ. ಬ್ಯಾಂಕ್ ಖಾತೆಗಳ ವಹಿವಾಟು ನಡೆಸಲು ವ್ಯವಸ್ಥಾಪಕ ಮಂಡಳಿ ಸದಸ್ಯರ ಸಹಿಯನ್ನು ಆರೋಪಿಗಳು ನಕಲು ಮಾಡಿದ್ದಾರೆ. ಅದನ್ನು ಪ್ರಶ್ನಿಸಿದ ಸದಸ್ಯರನ್ನು ಅಕ್ರಮವಾಗಿ ಹುದ್ದೆಯಿಂದ ಅಮಾನತು ಮಾಡಿದ್ದಾರೆ. ಅದನ್ನು ಕೇಳಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಮೆನನ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿಯರ ಹೆಸರಿನಲ್ಲಿ ಅಶ್ಲೀಲ ಸಂದೇಶ; ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪಿ ಜಗದೀಶ್ (32) ಎಂಬಾತನನ್ನು ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಾಡುಗೋಡಿ ನಿವಾಸಿ ಜಗದೀಶ್, ಖಾಸಗಿ ಕಂಪನಿ ಉದ್ಯೋಗಿ. ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಆತನ ವಿರುದ್ಧ ಯುವತಿಯರಿಬ್ಬರು ಇತ್ತೀಚೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು. ‘ಯುವತಿಯರ ಫೋಟೊ ಬಳಸಿಕೊಂಡು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ಯುವತಿಯರ ಸ್ನೇಹ ಸಂಪಾದಿಸುತ್ತಿದ್ದ. ನಂತರ, ಅವರ ಜೊತೆ ಚಾಟಿಂಗ್ ಮಾಡಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಆತನಿಂದ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು