ಬೆಂಗಳೂರು: ಮನೆ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ರಾತ್ರಿ ವೇಳೆ ಕಳವು ಮಾಡಿ, ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿ ನಗರ ನಿವಾಸಿ ಶಹಬಾಜ್ ಖಾನ್ (26) ಹಾಗೂ ದೊಡ್ಡಮಂಗಲ ನಿವಾಸಿ ಓಂ (20) ಎಂಬುವರನ್ನು ಬಂಧಿಸಿ, ₹ 12.5 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಠಾಣಾ ವ್ಯಾಪ್ತಿಯ ಎಇಸಿಎಸ್ ಲೇಔಟ್‌ನ ಸಿಂಗಸಂದ್ರ ನಿವಾಸಿಯೊಬ್ಬರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಆರೋಪಿಗಳು ಇತ್ತೀಚೆಗೆ ಕಳವು ಮಾಡಿದ್ದರು. ಆರೋಪಿಗಳ ಪೈಕಿ ಶಹಬಾಜ್, ಮನೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು, ವೈರ್ ಡೈರೆಕ್ಟ್ ಮಾಡಿ ಕಳವು ಮಾಡುತ್ತಿದ್ದ. ಓಂ ಯಾವ ಸ್ಥಳಗಳಲ್ಲಿ ಹೆಚ್ಚು ಬೈಕ್‌ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ಶಹಬಾಜ್‌ಗೆ ನೀಡುತ್ತಿದ್ದ. ಇಬ್ಬರೂ ಸೇರಿ ಬೈಕ್‌ಗಳ ಕಳವು ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.
‘ಕಳವು ಮಾಡಿದ ದ್ವಿಚಕ್ರ ವಾಹನಗಳ ಪೋಟೊಗಳನ್ನು ಓಂ ತನ್ನ ಓಎಲ್‌ಎಕ್ಸ್ ಖಾತೆಯಲ್ಲಿ ಹಾಕಿ, ಗ್ರಾಹಕರನ್ನು ಸಂಪರ್ಕಿಸಿ, ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಹೀಗೆ ಸಂಪಾದನೆ ಮಾಡಿದ ಹಣದಲ್ಲಿ ಇಬ್ಬರು ಮೋಜು-ಮಸ್ತಿ ಮಾಡುತ್ತಿದ್ದರು. ಹೊಸ ರೋಡ್‌ನಲ್ಲಿರುವ ಶಿವನ ದೇವಸ್ಥಾನದ ಖಾಲಿ ಜಾಗ ಹಾಗೂ ಸಿಪ್‌ಕಾಟ್ ಪೊಲೀಸ್ ಠಾಣೆ ಬಳಿ ಯಾರಿಗೂ ಅನುಮಾನ ಬಾರದಂತೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾಯಿತು’ ಎಂದು ಹೇಳಿದರು.
ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಪರಪ್ಪನ ಅಗ್ರಹಾರ, ಆರ್.ಟಿ.ನಗರ, ಕೆ.ಆರ್.ಪುರ, ಬ್ಯಾಟರಾಯನಪುರ ಠಾಣೆಗಳಲ್ಲಿ ಈ ಹಿಂದೆಯೇ ಒಂಬತ್ತು ಪ್ರಕರಣಗಳು ದಾಖಲಾಗಿವೆ.