ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಯುಗಾದಿ: ವಿಶಿಷ್ಟ ಆಚರಣೆ

Last Updated 3 ಏಪ್ರಿಲ್ 2022, 20:17 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ‘ಬೇವು-ಬೆಲ್ಲ ತಿಂದು ಭಾವೈಕ್ಯ ಬೆಸೆಯೋಣ, ಸಹಬಾಳ್ವೆಯನ್ನು ಸಂಭ್ರಮಿಸೋಣ’ ಎಂಬ ಘೋಷಣೆಯಡಿ ಮುಸ್ಲಿಂ ಹಾಗೂ ಕ್ರೈಸ್ತ ಬಾಂಧವರ ಜೊತೆ ಆಚರಿಸಿದ ಸೌಹಾರ್ದ ಯುಗಾದಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ಸ್ಥಳೀಯ ಘಟಕ ಶನಿವಾರ ಗಾರ್ವೆಬಾವಿಪಾಳ್ಯದ ಲಕ್ಷ್ಮಿ ಬಡಾವಣೆಯಲ್ಲಿ ಸೌಹಾರ್ದ ಯುಗಾದಿ ಕಾರ್ಯಕ್ರಮ ಆಯೋಜಿಸಿತ್ತು.

ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸ್ವತಃ ಬೇವು-ಬೆಲ್ಲ ಹಂಚಿ ಪರಸ್ಪರ ಶುಭಾಶಯ ಹಂಚಿಕೊಂಡರು. ರಸ್ತೆಯಲ್ಲಿನ ಅಂಗಡಿಗಳ ಬಳಿ ತೆರಳಿ ಒಬ್ಬಟ್ಟು ಕೊಟ್ಟು ‘ಪ್ರೀತಿ ವಿಶ್ವಾಸದಿಂದ ಬಾಳೋಣ’ ಎಂಬ ಸಂದೇಶ ಸಾರಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ್, ‘ನಮ್ಮದು ಶ್ರಮ ಸಂಸ್ಕೃತಿ. ದುಡಿಮೆ ನಂಬಿ ಬದುಕು ಸಾಗಬೇಕು. ದುಡಿಮೆಗೆ ಯಾವ ಭೇದ-ಭಾವವೂ ಇಲ್ಲ. ಆದರೆ, ದುಡಿಮೆಯ ಪಾಲು ದುಡಿಮೆಗಾರನಿಗೆ ಸಿಗದಂತೆ ಮಾಡಿ, ಸಂಪತ್ತನ್ನು ಲೂಟಿ ಮಾಡುವ ಸಲುವಾಗಿ ಶ್ರಮಜೀವಿಗಳ ನಡುವೆ ಕೋಮು ವಿಭಜನೆ ತರುವ ಪ್ರಯತ್ನ ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಲ್ಲಿ ಜನ ತತ್ತರಿಸುತ್ತಿರುವಾಗ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಕ್ಷುಲ್ಲಕ ವಿಚಾರಗಳನ್ನು ಮುಂದುಮಾಡಿ, ವಿಷ ಬೀಜಗಳನ್ನು ಬಿತ್ತಿ, ಸೌಹಾರ್ದ ಮನಸುಗಳನ್ನು ಒಡೆಯುವ ಷಡ್ಯಂತ್ರ ನಡೆದಿದೆ. ಆಳವಾಗಿ ಬೇರೂರಿರುವ ಸಹಬಾಳ್ವೆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ’ ಎಂದರು. ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವೀಂದ್ರ, ‘ವಿವಿಧತೆಯಲ್ಲಿ ಏಕತೆ ಎಂಬುದೇ ನಿಜವಾದ ಭಾರತೀಯ ಸಂಸ್ಕೃತಿ. ಬೇಗೂರು ನಾಗನಾಥಸ್ವಾಮಿ ತೇರು ಬಾಬಯ್ಯನ ಗುಡಿ ಬಳಿ ಹೋಗಿ ಬರುವುದು ಈಗಲೂ ರೂಢಿಯಲ್ಲಿದೆ. ಇದು ಸೌಹಾರ್ದ ಸಂಸ್ಕೃತಿಯ ಪ್ರತೀಕ. ಇದಕ್ಕೆ ಧಕ್ಕೆ ತರುವ ಮತೀಯವಾದ
ವನ್ನು ನಿಗ್ರಹಿಸಬೇಕಿದೆ’ ಎಂದರು.

ಪಾಲಿಕೆ ಮಾಜಿ ಸದಸ್ಯ ಎಂ.ಆಂಜನಪ್ಪ, ಕಾಂಗ್ರೆಸ್ ಸ್ಥಳೀಯ ಮುಖಂಡ ಸಯ್ಯದ್ ಸರ್ದಾರ್, ಪಾದ್ರಿ ನಟರಾಜನ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ರಂ ಪಾಷಾ, ಸಿಪಿಎಂ ಮುಖಂಡರಾದ ಎನ್.ದಯಾನಂದ, ಸಿ.ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT