ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 20 ಸಾವಿರಕ್ಕೆ ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿ!

ವಿವಿಧ ರಾಜ್ಯಗಳ ವಿ.ವಿ.ಗಳ ಅಂಕಪಟ್ಟಿಯೂ ನಕಲಿ * ನಾಲ್ವರ ಬಂಧಿಸಿದ ಅಮೃತಹಳ್ಳಿ ಪೊಲೀಸರು
Last Updated 29 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪರೀಕ್ಷಾ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಮರಿಯಣ್ಣಪಾಳ್ಯದ ಎಂ. ರಾಕೇಶ್ (37), ಹೆಬ್ಬಾಳ ಕೆಂಪಾಪುರದ ಕೆ. ಕೃಷ್ಣ (27), ಕೊತ್ತನೂರಿನ ಹನುಮಂತಪ್ಪ ಲೇಔಟ್‌ನ ತನ್ವಯ್ ದೇಬ್‌ರಾಯ್ (33) ಹಾಗೂ ಎಚ್‌ಬಿಆರ್ ಲೇಔಟ್‌ನ ಹೈದರ್ ಅಲಿ (37) ಬಂಧಿತರು. ಅವರಿಂದ 682 ನಕಲಿ ಅಂಕಪಟ್ಟಿಗಳು ಹಾಗೂ 18 ನಕಲಿ ಶಾಲಾ ವರ್ಗಾವಣೆ ಪ್ರಮಾಣ ಪತ್ರಗಳನ್ನು (ಟಿ.ಸಿ) ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಡ್ರೀಮ್ ಎಜ್ಯುಕೇಷನ್ ಸರ್ವೀಸಸ್’ ಹೆಸರಿನಲ್ಲಿ ನಗರದ ಹೆಬ್ಬಾಳ ಕೆಂಪಾಪುರದಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು, ದೂರ ಶಿಕ್ಷಣದ ನೆಪದಲ್ಲಿ ಪ್ರಚಾರ ಮಾಡಿ, ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದರು. ನಕಲಿ ಅಂಕಪಟ್ಟಿಗಳನ್ನೇ ಅಸಲಿ ಎಂಬುದಾಗಿ ಹೇಳಿ ನಂಬಿಸಿ ಮಾರುತ್ತಿದ್ದರು. ಈ ಬಗ್ಗೆ ಎಚ್‌.ಎಸ್‌. ಮೋಹನ್‌ಕುಮಾರ್ ಎಂಬುವರು ದೂರು ನೀಡಿದ್ದರು’ ಎಂದೂ ತಿಳಿಸಿದರು.

ಪ್ರತಿಯೊಂದು ಕೋರ್ಸ್‌ಗೂ ದರ ನಿಗದಿ: ‘ಪರೀಕ್ಷಾ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದಿರುವುದಾಗಿ ಸುಳ್ಳು ಹೇಳುತ್ತಿದ್ದ ಆರೋಪಿಗಳು, ಎಲ್ಲ ಬಗೆಯ ಕೋರ್ಸ್‌ಗಳ ಅಂಕಪಟ್ಟಿಗಳನ್ನು ಕೊಡಿಸುವುದಾಗಿ ತಿಳಿಸುತ್ತಿದ್ದರು. ಪ್ರತಿಯೊಂದು ಕೋರ್ಸ್‌ಗೂ ಪ್ರತ್ಯೇಕ ಶುಲ್ಕ ನಿಗದಿ ಮಾಡಿದ್ದರು’ ಎಂದೂ ‍ಪೊಲೀಸ್ ಅಧಿಕಾರಿ ಹೇಳಿದರು.

‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗ ಕುವೆಂ‍ಪು ವಿಶ್ವವಿದ್ಯಾಲಯ ಹಾಗೂ ಹುಬ್ಬಳ್ಳಿ ಬೋರ್ಡ್ ಆಫ್ ಎಕ್ಸಾಮಿನೇಷನ್ ಹೆಸರಿನಲ್ಲಿರುವ ನಕಲಿ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ.’

‘ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿಯನ್ನು ₹ 20 ಸಾವಿರಕ್ಕೆ ಆರೋಪಿಗಳು ಮಾರುತ್ತಿದ್ದರು. ಪಿಯುಸಿ ಅಂಕಪಟ್ಟಿಗೆ ₹ 25 ಸಾವಿರ ಹಾಗೂ ಪದವಿ ಅಂಕಪಟ್ಟಿಗೆ ₹ 40 ಸಾವಿರ ಪಡೆದುಕೊಳ್ಳುತ್ತಿದ್ದರು’ ಎಂದೂ ಅಧಿಕಾರಿ ತಿಳಿಸಿದರು.

ಹೊರ ರಾಜ್ಯಗಳ ಅಂಕಪಟ್ಟಿಗಳೂ ಪತ್ತೆ: 'ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ದೆಹಲಿ ಹಾಗೂ ಇತರೆ ರಾಜ್ಯಗಳ ಪರೀಕ್ಷಾ ಮಂಡಳಿಗಳ ನಕಲಿ ಅಂಕಪಟ್ಟಿಗಳೂ ಆರೋಪಿಗಳ ಬಳಿ ಪತ್ತೆಯಾಗಿವೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಹಿಮಾಚಲ ಪ್ರದೇಶದ ಐಇಸಿ, ಅರ್ನಿ ವಿಶ್ವವಿದ್ಯಾಲಯ, ಮೀರತ್ ಚೌಧರಿ ಚರಣ್‌ಸಿಂಗ್ ವಿಶ್ವವಿದ್ಯಾಲಯ, ಕಾನ್ಪುರದ ಛತ್ರಪತಿ ಸಾಹು ಮಹಾರಾಜ್, ದೆಹಲಿಯ ಮಹಾಮಾಯಿ, ಮೇಘಾಲಯದ ವಿಲಿಯಂ ಕ್ಯಾರಿ, ರಾಯ್‌ಪುರದ ಕಳಿಂಗ, ಪುದುಚೇರಿ ವಿಶ್ವವಿದ್ಯಾಲಯ, ಸಿಕ್ಕಿಂ ರಾಜ್ಯ ವಿಶ್ವವಿದ್ಯಾಲಯ, ಅಲಹಾಬಾದ್ ವಿಶ್ವವಿದ್ಯಾಲಯ, ತಮಿಳುನಾಡಿನ ಪೆರಿಯಾರ್ ಹಾಗೂ ಇತರೆ ರಾಜ್ಯಗಳ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳನ್ನೂ ಜಪ್ತಿ ಮಾಡಲಾಗಿದೆ’ ಎಂದೂ ಅವರು ವಿವರಿಸಿದರು.

‘ಪ್ರತಿಯೊಂದು ವಿಶ್ವವಿದ್ಯಾಲಯ ಹಾಗೂ ಪರೀಕ್ಷಾ ಮಂಡಳಿಗಳ ಹೆಸರಿನಲ್ಲಿ ನಕಲಿ ಸೀಲ್‌ಗಳನ್ನು ಆರೋಪಿಗಳು ತಯಾರಿಸಿಟ್ಟುಕೊಂಡಿದ್ದರು. ಅಸಲಿ ಅಂಕಪಟ್ಟಿಯನ್ನು ಹೋಲುವಂತೆ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಸೀಲ್‌ ಹಾಕುತ್ತಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT