ಬುಧವಾರ, ಜನವರಿ 19, 2022
24 °C
ಎರಡು ವರ್ಷದಿಂದ ವಿಲೇವಾರಿಯಾಗದ ನಗರಾಭಿವೃದ್ಧಿ ಇಲಾಖೆಯ ಕಾಮಗಾರಿಗಳು

ಬೆಂಗಳೂರು | ಸಚಿವರ ಕ್ಷೇತ್ರದ ಕಡತಗಳೂ ಕದಲುತ್ತಿಲ್ಲ!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್‌ಕುಮಾರ್ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಕೋರಿದ್ದ ಕಡತ 327 ದಿನಗಳಿಂದ ಬಾಕಿ ಇದೆ. ಸಚಿವರಾಗಿದ್ದ ಅರವಿಂದ ಲಿಂಬಾವಳಿ ತಮ್ಮ ಕ್ಷೇತ್ರದ ರಸ್ತೆ, ಮಳೆ ನೀರು ಚರಂಡಿ ಅಭಿವೃದ್ಧಿಗೆ ಅನುದಾನ ಕೋರಿದ್ದ ಕಡತ 345 ದಿನಗಳಿಂದ ಹಾಗೇ ಉಳಿದಿದೆ. ಶೂನ್ಯ ವೇಳೆಯಲ್ಲಿ ಚರ್ಚಿಸಲು ಶಾಸಕ ಆರ್.ಮಂಜುನಾಥ್ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡುವ ಕಡತ 722 ದಿನಗಳಿಂದ ಬಾಕಿ ಇದೆ...

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು, ತ್ವರಿತಗತಿಯಲ್ಲಿ ಕಡತ ವಿಲೇವಾರಿ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಅವರ ಅಧೀನದಲ್ಲೇ ಇರುವ ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ) ಇಲಾಖೆಯ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದಲೂ ಕಡತಗಳು ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ.

‘ಮುಖ್ಯಮಂತ್ರಿ ನವ ಬೆಂಗಳೂರು’ ಯೋಜನೆಯಡಿ ಅನುಮೋದನೆ ನೀಡಲಾಗಿದ್ದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಕೋರಿದ್ದ ಕಡತ 722 ದಿನಗಳಿಂದ ಇದ್ದಲ್ಲೇ ಇದ್ದರೆ, ತೀರಾ ಹಿಂದುಳಿದ ಪ್ರದೇಶವಾಗಿರುವ ವಿ. ನಾಗೇನಹಳ್ಳಿಯಲ್ಲಿ ನಗರೋತ್ಥಾನ ಅನುದಾನದ ಅಡಿಯಲ್ಲಿ ಕೈಗೊಳ್ಳಬೇಕಿದ್ದ ಕಾಮಗಾರಿ ವಿಭಜಿಸುವ ಕಡತವೂ 722 ದಿನಗಳಿಂದ ಅಲುಗಾಡಿಲ್ಲ.

ಘನತಾಜ್ಯ ವಿಲೇವಾರಿ ಸಂಬಂಧ ಸಾರ್ವಜನಿಕರಿಂದ ಬಂದ ದೂರುಗಳಿಗೆ ಸಂಬಂಧಿಸಿದ ಆದೇಶಗಳು, ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಕುರಿತ ಮಾಹಿತಿ ಮತ್ತು ದಾಖಲೆ ನೀಡುವಂತೆ ನಿವೃತ್ತ ಐಎಎಸ್‌ ಅಧಿಕಾರಿ ಜಿ.ವಿ. ಕೃಷ್ಣರಾವ್ ಕೋರಿದ್ದರು. ಈ ಸಂಬಂಧ ಕಡತ 714 ದಿನಗಳಿಂದ ಬಾಕಿ ಇದೆ. ವಿಧಾನಸಭೆಯ ಭರವಸೆ ಸಂಖ್ಯೆ 15/2018ಕ್ಕೆ ಉತ್ತರ ನೀಡುವ ಕಡತ 678 ದಿನಗಳಿಂದ ಕದಲಿಲ್ಲ.

ಮುಖ್ಯಮಂತ್ರಿ ವಿವೇಚನಾ ಕೋಟಾದ ಅಡಿಯಲ್ಲಿ ಬಿಬಿಎಂಪಿಗೆ ₹5 ಕೋಟಿ ಅನುದಾನ ಕೋರಿದ್ದ ಕಡತ 506 ದಿನಗಳಿಂದ, ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಬದಲಿ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಕಡತ 372 ದಿನಗಳಿಂದ, ಮಾಹಿತಿ ಹಕ್ಕು ಕಾಯ್ದೆಯಡಿ ಕಿರಣ್‌ ಸಿ. ನಾರಂಗ್, ವಕೀಲ ಕೆ.ಬಿ. ವಿಜಯಕುಮಾರ್ ಮಾಹಿತಿ‌ ಕೋರಿರುವ ಕಡತ 192 ದಿನಗಳಿಂದ ಬಾಕಿ ಉಳಿದುಕೊಂಡಿದೆ.

ಕೋವಿಡ್ ಎರಡನೇ ಅಲೆ ನಿರ್ವಹಣೆಗೆ ಬಿಬಿಎಂಪಿ ಕೋರಿರುವ ಅನುದಾನದ ಕಡತ 185 ದಿನಗಳಿಂದ, ಸಚಿವ ಸಿ.ಎನ್. ಅಶ್ವತ್ಥನಾರಾಯಣ ಪ್ರತಿನಿಧಿಸುವ ಮಲ್ಲೇಶ್ವರ ಕ್ಷೇತ್ರದಲ್ಲಿ 2019ರಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಬದಲಾಗಿ ₹10.95 ಕೋಟಿ ಮೊತ್ತದ ಬದಲಿ ಕಾಮಗಾರಿಗೆ ಅನುಮೋದನೆ ನೀಡುವ ಕಡತ 83 ದಿನಗಳಿಂದ, ಮುಖ್ಯಮಂತ್ರಿ ವಿವೇಚನಾ ಕೋಟಾದಲ್ಲಿ ಬಿಬಿಎಂಪಿಗೆ ₹10 ಕೋಟಿ ಅನುದಾನ ನೀಡುವ ಕಡತ 82 ದಿನಗಳಿಂದ ಇದ್ದಲ್ಲೇ ಇವೆ.

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಕರೆಯಲಾಗಿದ್ದ ಟೆಂಡರ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 24.10ರಷ್ಟು ಮೀಸಲಾತಿ ಕಾಯ್ದಿರಿಸುವ ತಾಂತ್ರಿಕ ಬಿಡ್‌ಗಳನ್ನು ತೆರೆದಿರುವುದಕ್ಕೆ ಸಂಬಂಧಿಸಿದ ಕಡತ 82 ದಿನಗಳಿಂದ, ಮಲ್ಲೇಶ್ವರದ ಸುವರ್ಣ ಭವನದ ಪಕ್ಕದಲ್ಲಿನ ಖಾಲಿ ಸ್ಥಳದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲು ಅನುಕೂಲ ಆಗುವಂತೆ ಹೆಚ್ಚುವರಿಯಾಗಿ ₹10 ಕೋಟಿ ಬಿಡುಗಡೆ ಮಾಡುವಂತೆ ಕೋರಿರುವ ಕಡತ 79 ದಿನಗಳಿಂದ ಹಾಗೇ ಇವೆ.

‘ಕುಂಭಕರ್ಣ ನಿದ್ರೆಯಲ್ಲಿ ಸರ್ಕಾರ’

‘ಪ್ರಸ್ತುತ ಸರ್ಕಾರ ಕುಂಭಕರ್ಣನಂತೆ ನಿದ್ರೆ ಮಾಡುತ್ತಿದ್ದು, ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಹೇಳಿದರು.

‘ಭ್ರಷ್ಟಾಚಾರ ಎಲ್ಲೆ ಮೀರಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಭ್ರಷ್ಟಾಚಾರದ ಕಾರಣದಿಂದಾಗಿಯೇ ಸರ್ಕಾರಿ ಇಲಾಖೆಗಳಲ್ಲಿ ಕಡತಗಳು ತಿಂಗಳುಗಟ್ಟಲೆ ಒಂದೇ ಸ್ಥಳದಲ್ಲೇ ಉಳಿಯುತ್ತಿವೆ. ಬೆಂಗಳೂರು ವಿಚಾರವು ನೇರವಾಗಿ ಮುಖ್ಯಮಂತ್ರಿ ಅವರ ಅಧೀನದಲ್ಲೇ ಇದ್ದು, ತಕ್ಷಣವೇ ಅವರು ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು