ಬುಧವಾರ, ಜುಲೈ 6, 2022
22 °C
ವಿಧಾನ ಪರಿಷತ್‌ನಲ್ಲಿ ಸಚಿವ ವಿ. ಸೋಮಣ್ಣ

ಉಪನಗರ ರೈಲು: ಕಾರಿಡಾರ್‌–2 ಕಾಮಗಾರಿಗೆ ಶೀಘ್ರ ಚಾಲನೆ- ವಿ. ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಉಪನಗರ ರೈಲು ಯೋಜನೆಯ ಕಾರಿಡಾರ್‌–2 ಕಾಮಗಾರಿಯನ್ನು ಮಾರ್ಚ್‌ ಅಂತ್ಯದ ವೇಳೆಗೆ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ಕೆ. ರಾಥೋಡ್‌ ಅವರ ಪರವಾಗಿ ಯು.ಬಿ. ವೆಂಕಟೇಶ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾರಿಡಾರ್‌–2 ವ್ಯಾಪ್ತಿಯ ಬೈಯಪ್ಪನಹಳ್ಳಿ–ಚಿಕ್ಕಬಾಣಾವರ 25.01 ಕಿ.ಮೀ ಉದ್ದ ಮಾರ್ಗದ ಸಿವಿಲ್‌ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು, ಮಾರ್ಚ್‌ 1ರಂದು ಟೆಂಡರ್‌ ಬಿಡ್ಡಿಂಗ್‌ ತೆರೆಯಲಾಗಿದೆ’ ಎಂದು ವಿವರಿಸಿದರು.

‘ಟೆಂಡರ್‌ ಕರೆಯುವ ಮುನ್ನ ಭೂಸ್ವಾಧೀನ ಪ್ರಕ್ರಿಯೆ, ವಿನ್ಯಾಸ ರಚನೆಯಂತಹ ಪೂರ್ವಭಾವಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ ಮೂರು ಕಾರಿಡಾರ್‌ಗಳ ಟೆಂಡರ್‌ ಕರೆಯಲು ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, 2026ರ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಉಪನಗರ ರೈಲು ಯೋಜನೆಗೆ ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಮಿತಿಯು 2020ರ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿದೆ. ಈ ಯೋಜನೆಯ ಅಂದಾಜು ವೆಚ್ಚ ₹15,767 ಕೋಟಿಯಾಗಿದೆ. 148.17 ಕಿ. ಮೀ. ಉದ್ದದ ಈ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಸಂಸ್ಥೆಯಾದ ‘ಕೆ–ರೈಡ್‌ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

ಯು.ಬಿ. ವೆಂಕಟೇಶ್‌ ಮಾತನಾಡಿ, ‘ಅನುಮೋದನೆ ದೊರೆತು 500ಕ್ಕೂ ಹೆಚ್ಚು ದಿನಗಳಾದರೂ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿಲ್ಲ. ಈ ಯೋಜನೆ ಬಗ್ಗೆ ಮಲತಾಯಿ ಧೋರಣೆ ಮಾಡಬೇಡಿ’ ಎಂದು ಹೇಳಿದರು.

 

l ಕೆಎಸ್‌ಆರ್‌ ಬೆಂಗಳೂರು ನಗರ– ದೇವನಹಳ್ಳಿ (41.40 ಕಿ.ಮೀ.)

l ಬೈಯಪ್ಪನಹಳ್ಳಿ–ಚಿಕ್ಕಬಾಣವಾರ (25.01 ಕಿ.ಮೀ)

l ಕೆಂಗೇರಿ– ವೈಟ್‌ ಫೀಲ್ಡ್‌ (35.52 ಕಿ.ಮೀ)

lಹೀಲಲಿಗೆ–ರಾಜನಕುಂಟೆ
(46.24 ಕಿ.ಮೀ.)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು