ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಫ್ಟ್‌ವೇರ್‌ ಕಂಪನಿ ಖಾತೆಗಳಿಗೆ ನಿಗಮದ ಹಣ

Published 29 ಮೇ 2024, 0:40 IST
Last Updated 29 ಮೇ 2024, 0:40 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಲ್ಲಿದ್ದ ₹87 ಕೋಟಿಯನ್ನು ಸಾಫ್ಟ್‌ವೇರ್‌ ಕಂಪನಿಯೊಂದರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಕಂಡುಬಂದಿದೆ.

ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆಯ ಶಾಖೆಯಲ್ಲಿ ನಿಗಮದ ಬ್ಯಾಂಕ್‌ ಖಾತೆ ಇದೆ. ಆ ಖಾತೆಯಲ್ಲಿ ನಿಗಮವು ₹ 187 ಕೋಟಿ ಇರಿಸಿತ್ತು. ಮಾರ್ಚ್‌ 1 ರಿಂದ ಮಾರ್ಚ್‌ 31ರ ಅವಧಿಯಲ್ಲಿ ₹ 87 ಕೋಟಿ ಮೊತ್ತವನ್ನು ಯೂನಿಯನ್‌ ಬ್ಯಾಂಕ್‌ನ ಬೇರೆ ಶಾಖೆಗಳ ಕೆಲವು ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ಸಾಫ್ಟ್‌ವೇರ್‌ ಕಂಪನಿಯೊಂದರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರಿಗೆ ನಿಗಮದ ಅಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿದೆ.

ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಮೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಅವರು, ಯೂನಿಯನ್‌ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೆದಿದ್ದ ಪತ್ರದ ಸಮೇತ ಕಿರು ವರದಿಯೊಂದನ್ನು ಮಂಗಳವಾರ ಸಲ್ಲಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಮ್ಮ ಸಹಿಯನ್ನು ಫೋರ್ಜರಿ ಮಾಡಿ ಬ್ಯಾಂಕ್‌ಗೆ ಪತ್ರವೊಂದನ್ನು ಸಲ್ಲಿಸಿ, ನಿಗಮದ ಹೆಸರಿನಲ್ಲಿ ಚೆಕ್‌ ಪುಸ್ತಕ ಪಡೆಯಲಾಗಿದೆ. ಚೆಕ್‌ಗಳಿಗೂ ಫೋರ್ಜರಿ ಸಹಿ ಮಾಡಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಆರ್ಥಿಕ ವರ್ಷದ ಅಂತ್ಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು ವೆಚ್ಚ ಮಾಡದೇ ಉಳಿಸಿಕೊಳ್ಳುವ ಅನುದಾನವನ್ನು ಹಣಕಾಸು ಇಲಾಖೆಗೆ ಮರಳಿಸಬೇಕಾಗುತ್ತದೆ. ಅದನ್ನು ತಪ್ಪಿಸುವ ನೆಪದಲ್ಲಿ ಸಂಚು ನಡೆಸಿ ಸಾಫ್ಟ್‌ವೇರ್‌ ಕಂಪನಿ ಖಾತೆಗೆ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನೂ ₹100 ಕೋಟಿ ವರ್ಗಾವಣೆಗೆ ಯತ್ನ: ನಿಗಮದ ಖಾತೆಯಲ್ಲಿರುವ ಇನ್ನೂ ₹100 ಕೋಟಿಯನ್ನು ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಆ ಹಂತದಲ್ಲಿ ನಿಗಮದ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕ್‌ ಅಧಿಕಾರಿಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು. ಇದರಿಂದಾಗಿ ₹100 ಕೋಟಿ ವರ್ಗಾವಣೆ ಯತ್ನಕ್ಕೆ ಹಿನ್ನಡೆ ಆಗಿತ್ತು ಎಂಬ ಮಾಹಿತಿ ಇಲಾಖೆಯೊಳಗೆ ಚರ್ಚೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT