ಬೆಂಗಳೂರು: ಸೋಲದೇವನಹಳ್ಳಿ ಹಾಗೂ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಹಾಗೂ ಮನೆ ಎದುರು ನಿಲುಗಡೆ ಮಾಡುತ್ತಿದ್ದ ವಿವಿಧ ಮಾದರಿಯ ವಾಹನ ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೋಲದೇವನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಹರೀಂದ್ರ(30), ಮುನಿಪ್ರಸಾದ್ ಅಲಿಯಾಸ್ ಮುನಿ(34) ಹಾಗೂ ಸಂಜಯ್ ಅಲಿಯಾಸ್ ಬ್ಲಾಕಿ(29) ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ₹17 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬರ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳವು ಮಾಡಲಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಸಿಕ್ಕಿದ್ದ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಜಂಕ್ಷನ್ ಬಳಿ ಎರಡು ದ್ವಿಚಕ್ರ ವಾಹನ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದರು.
ಆರೋಪಿಗಳು ದುಶ್ಚಟಗಳ ದಾಸರಾಗಿದ್ದು, ತಮ್ಮ ಮೋಜು- ಮಸ್ತಿಗೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಆಟೊ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವಿಶ್ವನಾಥ್ ಹಾಗೂ ಮಹಮ್ಮದ್ ನಯಾಜ್ ಎಂಬುವವರನ್ನು ಬ್ಯಾಡರಹಳ್ಳಿಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.