ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಎಸ್‌ಎಸ್‌ವೈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೋವಿಡ್‌ಗೆ

ಇತರೆ ರೋಗಿಗಳಿಗೆ ಎದುರಾಗಲಿದೆ ಸಂಕಷ್ಟ
Last Updated 24 ಏಪ್ರಿಲ್ 2021, 20:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ (ಪಿಎಂಎಸ್‌ಎಸ್‌ವೈ) ನಿರ್ಮಿಸಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರದಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗುತ್ತಿದೆ. ಇದಕ್ಕೆ ಸಿದ್ಧತೆಗಳೂ ನಡೆಯುತ್ತಿವೆ. ಆದರೆ, ಇದೇ ಆಸ್ಪತ್ರೆಯನ್ನು ಅವಲಂಬಿಸಿರುವ ಇತರೆ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವೈದ್ಯರೇ ಹೇಳುತ್ತಾರೆ.

‘ಕ್ಯಾನ್ಸರ್, ಹೃದಯ ರೋಗ, ಮನೋರೋಗ ಸೇರಿದಂತೆ ಆರು ಪ್ರಮುಖ ರೋಗಗಳ ಚಿಕಿತ್ಸೆಗೆ ರಾಜ್ಯದಲ್ಲಿ ಇರುವುದು ಇದೊಂದೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ. ಎರಡು–ಮೂರು ಕಾಯಿಲೆಯಿಂದ ಬಳಲುತ್ತಿರುವವರು ಹಲವು ಆಸ್ಪತ್ರೆಗೆ ತಿರುಗಬೇಕಾಗುತ್ತದೆ. ಆ ಎಲ್ಲ ಸಮಸ್ಯೆಗೆ ಒಂದೇ ಸೂರಿನಡಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಈ ಆಸ್ಪತ್ರೆಯನ್ನೂ ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟರೆ ಉಳಿದವರಿಗೆ ತೀವ್ರ ತೊಂದರೆಯಾಗುತ್ತದೆ’ ಎಂದು ವೈದ್ಯರೊಬ್ಬರು ಕಳವಳ ವ್ಯಕ್ತಪಡಿಸಿದರು.

‘ರಾಜ್ಯದ ಹಲವು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಎರಡು–ಮೂರು ಕಾಯಿಲೆ ಹೊಂದಿರುವ ಇಂತಹ ರೋಗಿಗಳು ಈ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಪಡೆಯಲು ಕೊನೆಗೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕು. ಅಲ್ಲಿಯ ದುಬಾರಿ ವೆಚ್ಚ ಭರಿಸುವುದು ಅವರಿಗೆ ಸಾಧ್ಯವಾಗುವುದಿಲ್ಲ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

‘ಕಳೆದ ಮಾರ್ಚ್‌ನಲ್ಲಿಯೂ ಈ ಆಸ್ಪತ್ರೆಯನ್ನು ಕೋವಿಡ್‌ಗೆ ಮೀಸಲಾಗಿ ಇಟ್ಟಿದ್ದರಿಂದ ಸುಮಾರು ಆರು ತಿಂಗಳು ಇಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಅಕ್ಟೋಬರ್‌ನಿಂದಷ್ಟೇ ಇದು ಮರು ಆರಂಭವಾಗಿತ್ತು. ಈಗ ಮತ್ತೆ ಇತರೆ ರೋಗಿಗಳಿಗೆ ಈ ಆಸ್ಪತ್ರೆಯ ಬಾಗಿಲು ಮುಚ್ಚುವುದು ಸರಿಯಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.

ಪ್ರತ್ಯೇಕ ವ್ಯವಸ್ಥೆ:‘ಸದ್ಯ 28 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನೆಲ್ಲ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಿ, ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ ನಂತರವೇ ಈ ಆಸ್ಪತ್ರೆಯನ್ನು ಕೋವಿಡ್‌ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಪ್ರಾರಂಭಿಸಲಾಗುತ್ತದೆ’ ಎಂದು ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ಪಿ.ಜಿ. ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಆಸ್ಪತ್ರೆಯ ಒಟ್ಟು ಹಾಸಿಗೆ ಸಾಮರ್ಥ್ಯ 180. ಅದರಲ್ಲಿ 30 ಐಸಿಯು, 30 ವೆಂಟಿಲೇಟರ್‌ ಸೌಲಭ್ಯ ಹೊಂದಿರುವ ಹಾಸಿಗೆಗಳು ಇವೆ. ಇನ್ನೂ 30 ಹಾಸಿಗೆಗಳನ್ನು ವೆಂಟಿಲೇಟರ್‌ ಹಾಸಿಗೆಗಳಾಗಿ ಪರಿವರ್ತಿಸಬಹುದಾಗಿದೆ. ಇತರೆ ರೋಗಿಗಳಿಗೆ ತೊಂದರೆಯಾಗುತ್ತದೆ ಎಂಬುದು ನಿಜ. ಆದರೆ, ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೂ ಸ್ಪಂದಿಸಬೇಕಾದ ತುರ್ತು ಇದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT