ಶುಕ್ರವಾರ, ಡಿಸೆಂಬರ್ 2, 2022
20 °C
ಜೆ.ಸಿ.ನಗರದಲ್ಲಿ ವಿಜೃಂಭಣೆಯ ದಸರಾ

ವಿಜಯದಶಮಿ: ಬೆಂಗಳೂರು ಎಲ್ಲೆಡೆ ಸಂಭ್ರಮದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಜಯದಶಮಿ ಹಬ್ಬವನ್ನು ನಗರದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಎರಡು ವರ್ಷಗಳಿಂದ ಕಳೆಗುಂದಿದ್ದ ಜೆ.ಸಿ.ನಗರ ದಸರಾ ಬುಧವಾರ ಮತ್ತೊಮ್ಮೆ ಕಳೆಗಟ್ಟಿ ಭಕ್ತರನ್ನು ಪುಳಕಿತಗೊಳಿಸಿತು.

ಜೆ.ಸಿ.ನಗರ ದಸರಾ ಮಹೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ದಸರಾ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಅಲಂಕೃತ 118 ಪಲ್ಲಕ್ಕಿಗಳಲ್ಲಿ ಸಾಲು ಸಾಲಾಗಿ ಬಂದ ಮೂರ್ತಿಗಳನ್ನು ಕಂಡು ಭಕ್ತರು ಸಂಭ್ರಮಿಸಿದರು.

ಶಿವಾಜಿನಗರ, ಆರ್.ಟಿ. ನಗರ, ಲಕ್ಷ್ಮೀದೇವಮ್ಮ ಬ್ಲಾಕ್, ಸಿಬಿಐ ರಸ್ತೆ, ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ಯಶವಂತಪುರ, ಹೆಬ್ಬಾಳ, ಗಂಗಾನಗರಗಳ ದೇವರ ಮೂರ್ತಿಗಳು ಅಲಂಕೃತಗೊಂಡ ರಥಗಳಲ್ಲಿ ಜೆ.ಸಿ.ನಗರದ ದಸರಾ ಮೈದಾನದತ್ತಾ ಸಾಗಿ ಬಂದವು.

ಮಧ್ಯ ರಾತ್ರಿ ಸುಮಾರಿಗೆ ಮೈದಾನಕ್ಕೆ ವಿವಿಧೆಡೆಯ ರಥಗಳು ಬಂದು ತಲುಪಿದ ನಂತರ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಕಣ್ತುಂಬಿಕೊಳ್ಳಲು ಜೆ.ಸಿ.ನಗರ ಮುಖ್ಯರಸ್ತೆ ಹಾಗೂ ಅರಮನೆ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ಹೂವಿನ ಪಲ್ಲಕ್ಕಿ, ಪೂಜಾ ಕುಣಿತ, ಕೀಲು ಕುದುರೆ, ಕರಡಿ ಮೇಳ, ಗೊರವರ ಕುಣಿತ, ಪಟ ಕುಣಿತ, ಡೊಳ್ಳು ಕುಣಿತ ಸೇರಿ ಹಲವು ಜನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು.

ಪಂಜಿನ ಕವಾಯತುಗಳು, ನಾನಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ವಿದ್ಯಾಗಣಪತಿ ದೇವಸ್ಥಾನದ ಬಳಿ ಪಟಾಕಿಗಳನ್ನು ಸಿಡಿಸಲಾಯಿತು.

ವಿಜಯದಶಮಿ ಪ್ರಯುಕ್ತ ಬುಧವಾರ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜನರು ಬನ್ನಿ ಎಲೆಗಳನ್ನು ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ದೇವಸ್ಥಾನಗಳಲ್ಲಿ ನಡೆದ ಪಲ್ಲಕ್ಕಿ ಉತ್ಸವಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. 

ಯಶವಂತಪುರ ವೃತ್ತ ಬಳಿಯ ಗಾಯತ್ರಿ ದೇವಸ್ಥಾನ, ಚಿನ್ನಯ್ಯನಪಾಳ್ಯದ ಮಾರಮ್ಮ ಆಂಜನೇಯಸ್ವಾಮಿ ದೇವಾಲಯ, ಜೆ.ಪಿ ನಗರದ ಬ್ರಹ್ಮ ಮಹೇಶ್ವರ ವಿಷ್ಣು ದೇವಸ್ಥಾನ, ಎಚ್‌ಎಂಟಿ ಬಡಾವಣೆಯ ಚೌಡೇಶ್ವರಿ ದೇವಾಲಯ, ರಾಜರಾಜೇಶ್ವರಿ ದೇವಸ್ಥಾನ, ಶಂಕರಪುರದ ಮಹೇಶ್ವರಮ್ಮ ದೇವಿ ದೇವಾಲಯ, ಕೃಷ್ಣರಾಜಪುರದ ದುರ್ಗಾ ಮಹೇಶ್ವರಮ್ಮ ದೇವಾಲಯ, ಶಂಕರಪುರದ ಶೃಂಗೇರಿ ಶಂಕರ ಮಠ, ಜೆ.ಪಿ ನಗರದ ವಿಜಯಗಣಪತಿ ಮತ್ತು ಶಾರದಾ ಚಂದ್ರಮೌಳೀಶ್ವರ ದೇವಸ್ಥಾನ, ಕೋಣನಕುಂಟೆಯ ಮಾತಾ ಅನ್ನಪೂರ್ಣೇಶ್ವರಿ ದೇವಾಲಯ, ನಂದಿನಿ ಬಡಾವಣೆಯ ದುರ್ಗಾಪರಮೆಶ್ವರಿ ದೇವಾಲಯ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆಗಳು ನಡೆದವು.

 

ಸರತಿ ಸಾಲಿನಲ್ಲಿ ವಾಹನ ಪೂಜೆ

ಬೆಂಗಳೂರು: ಆಯುಧ ಪೂಜೆಯ ದಿನ ವಾಹನಗಳಿಗೆ ಬಾಳೆ ಕಂದು, ಹೂವಿನ ಮಾಲೆ ಹಾಕಿ ಅಲಂಕರಿಸಿ ಪೂಜೆ ಸಲ್ಲಿಸಿದರು.

ದೇವಾಲಯಗಳಲ್ಲಿ ವಾಹನಗಳ ಪೂಜೆಗಾಗಿ ವಿಶೇಷ ಏರ್ಪಾಡು ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ವಾಹನಗಳಿಗೆ ಪೂಜೆ ಮಾಡಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಆಯುಧಪೂಜೆ ದಿನ ವಾಹನಕ್ಕೆ ಪೂಜೆ ಮಾಡಿಸಲು ಸಾಧ್ಯವಾಗದವರು ಬುಧವಾರ ಪೂಜೆ ಮಾಡಿಸಿಕೊಂಡರು.

ಯುದ್ಧದಲ್ಲಿ ಗೆದ್ದ ಸಂಭ್ರಮ

ಒಂದನೇ ಮಹಾಯುದ್ಧದಲ್ಲಿ
(1914–1918) ಜರ್ಮನಿ ವಿರುದ್ಧ ಹೋರಾಡಲು ಮೈಸೂರು ಮಹಾರಾಜರ ನೆರವನ್ನು ಬ್ರಿಟೀಷರು ಪಡೆಯುತ್ತಾರೆ. ಮೈಸೂರು ಮಹರಾಜರು ಯೋಧರು ಮತ್ತು ಕುದುರೆಗಳನ್ನು ಕಳುಹಿಸುತ್ತಾರೆ. ಆ ಯುದ್ಧದಲ್ಲಿ ಗೆದ್ದು ಬಂದ ಸೈನಿಕರು ಹರಕೆ ತೀರಿಸಲು ಆರಂಭವಾದ ಜೆ.ಸಿ.ನಗರ ದಸರಾ ವಾಡಿಕೆಯಾಗಿ ಇಂದಿಗೂ ಮುಂದುವರಿದಿದೆ.

ಯುದ್ಧಕ್ಕೆ ಹೋಗುವ ಮುನ್ನ ಸೈನಿಕರು ಗುಂಡುಮುನೇಶ್ವನ ಬಳಿ ಹರಕೆ ಹೊತ್ತಿದ್ದರು. ಗೆದ್ದು ಬಂದ ಬಳಿಕ ದಸರಾ ಆಚರಣೆ ಮೂಲಕ ಹರಕೆ ತೀರಿಸಿದರು. ಅದು ಈಗಲೂ ಮುಂದುವರಿದಿದೆ ಎಂದು ಜೆ.ಸಿ.ನಗರ ದಸರಾ ಆಚರಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ರಾವ್ ವಿವರಿಸಿದರು.

ವೈಭವದ ದುರ್ಗಾ ಪೂಜೆ

ಎರಡು ವರ್ಷಗಳ ಬಳಿಕ ನಗರದಲ್ಲಿ 150ಕ್ಕೂ ಹೆಚ್ಚು ಕಡೆ ವಿಜೃಂಭಣೆಯಿಂದ ದುರ್ಗಾ ಪೂಜೆ ಆಚರಿಸಿದ ಭಕ್ತರು, ಬುಧವಾರ ವಿಸರ್ಜನೆ ಮಾಡಿದರು.

ಗಣಪತಿ ಮೂರ್ತಿಯಂತೆಯೇ ದುರ್ಗಾ ಮೂರ್ತಿಯನ್ನೂ ಪೆಂಡಾಲ್‌ಗಳಲ್ಲಿ ಪ್ರತಿ
ಷ್ಠಾಪಿಸಲಾಗಿತ್ತು. ‌ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಐದು ದಿನಗಳ ಕಾಲ ಅದ್ಧೂರಿಯಿಂದ ಪೂಜಾ ಕೈಂಕರ್ಯಗಳು ನಡೆದವು. ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಜನ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಬುಧವಾರ ದುರ್ಗಾ ಮೂರ್ತಿಯ ಮೆರವಣಿಗೆಯಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು. ಬಳಿಕ ಹಲಸೂರು ಮತ್ತು ಸ್ಯಾಂಕಿ ಕೆರೆಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು