ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕುತೂಹಲ ತಣಿಸಿದ ವಿಜ್ಞಾನ ವಿಹಾರ

ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಂಗಣದಲ್ಲಿ ಮುಕ್ತ ದಿನ * ಉಪನ್ಯಾಸ, ರಸಪ್ರಶ್ನೆ ಸ್ಪರ್ಧೆ
Last Updated 23 ಮಾರ್ಚ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯ ದಿನಗಳಲ್ಲಿ ಮೌನವನ್ನೇ ಹೊದ್ದು ಮಲಗಿದಂತಿರುವ 371 ಎಕರೆಯ ವಿಶಾಲವಿಜ್ಞಾನದ ಪ್ರಯೋಗ ಶಾಲೆ ‘ಭಾರತೀಯ ವಿಜ್ಞಾನ ಸಂಸ್ಥೆ’ (ಐಐಎಸ್‌ಸಿ) ‍ಪ್ರಾಂಗಣ ಶನಿವಾರ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು.

ಅಲ್ಲಿ ಅನಾವರಣಗೊಂಡಿದ್ದ ವಿಜ್ಞಾನ ಲೋಕಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರಿಂದ ಪುಟಾಣಿಗಳಿಂದ ಹಿಡಿದು ವೃದ್ಧರವರೆಗೂಎಲ್ಲ ವಯೋಮಾ ನದವರೂ ದಾಂಗುಡಿ ಇಟ್ಟರು. ವಿಜ್ಞಾನದ ಕೌತುಕಗಳನ್ನು ಬೆರಗು ಗಣ್ಣುಗಳಿಂದ ವೀಕ್ಷಿಸಿದರು. ನಿತ್ಯದಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಣ್ಣ ಪುಟ್ಟ ವಿಚಾರಗಳ ಹಿಂದಿರುವ ವೈಜ್ಞಾನಿಕ ಸಂಗತಿಗಳಿಗೆ ಕಿವಿಯಾದರು.

ವಿದ್ಯಾರ್ಥಿಗಳ ಜೊತೆಗೆ ವಿಜ್ಞಾನದಲ್ಲಿ ಆಸಕ್ತಿ ಇರುವವರನ್ನೂ ಆಕರ್ಷಿಸಿತು.ಉಪನ್ಯಾಸಗಳು, ಭಿತ್ತಿಚಿತ್ರ ಪ್ರಸ್ತುತಿಗಳು, ರಸಪ್ರಶ್ನೆ ಸ್ಪರ್ಧೆ, ವೈಜ್ಞಾನಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಗರದ ಧಾವಂತದ ಬದುಕಿನ ಜಂಜಾಟಗಳನ್ನು ಬದಿಗಿಟ್ಟು, ವಾರಾಂತ್ಯದ ಮೋಜಿಗೆ ವಿದಾಯ ಹೇಳಿ ಕುಟುಂಬ ಸಮೇತರಾಗಿ ಆಗಮಿಸಿದ್ದ ಜನ ವಿಜ್ಞಾನದ ಪ್ರಾತ್ಯಕ್ಷಿಕೆಗಳ ಮೂಲಕ ತಮ್ಮೊಳಗಿನ ಅದೆಷ್ಟೊ ಜಿಜ್ಞಾಸೆಗಳಿಗೆ ಉತ್ತರ ಕಂಡುಕೊಂಡರು.

ನಡೆಯುವ ರೊಬೊಟ್‌:ರಾಬರ್ಟ್ ಬಾಷ್ ಸೆಂಟರ್ ಫಾರ್ ಸೈಬರ್-ಫಿಸಿಕಲ್ ಸಿಸ್ಟಮ್ಸ್ ಮತ್ತು ಕ್ರಿಸ್ಟೆನ್ಡ್ ಕೇಂದ್ರ ಅಭಿವೃದ್ಧಿಪಡಿಸಿದ ನಾಯಿ ನಡಿಗೆಯ ಹಾಗೂ ಕೃತಕ ಬುದ್ದಿಮತ್ತೆಯ ‘ಸ್ಟ್ಯಾಚ್‌’ ಹೆಸರಿನ ರೊಬೊಟ್‌ ಗಮನ ಸೆಳೆಯಿತು. ಅದು 2 ಅಡಿ ಮಾತ್ರ ಉದ್ದವಿತ್ತು. ಅದು ಪ್ರತಿ ಕಾಲಿಗೆ ಮೂರರಂತೆ 12 ಕೀಲುಗಳನ್ನು ಹೊಂದಿತ್ತು. ಇದೇ ಮಾದರಿಯ ಸ್ವಯಂ ಬುದ್ದಿಮತ್ತೆಯುಳ್ಳ ರೊಬೊಟ್‌ ಅನ್ನು ಚಂದ್ರನ ಕುರಿತು ಅಧ್ಯಯನ ನಡೆಸುತ್ತಿರುವರೋವರ್ ಉಪಗ್ರಹದಲ್ಲಿ ಅಳವಡಿಸಲಾಗಿದೆ ಎಂದು ಅಧ್ಯಾಪಕರೊಬ್ಬರು ವಿವರಿಸಿದರು.

ಡ್ರೋನ್ ಚಾರ್ಜಿಂಗ್‌ ಪಾಯಿಂಟ್‌: ಐಐಎಸ್‌ಸಿಯ ತಂತ್ರಜ್ಞಾನ ವಿಭಾಗದ ಸಿಬ್ಬಂದಿಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ಮಾರ್ಟ್ ಸಿಟಿ’ ಯೋಜನೆಗೆ ಪೂರಕವಾಗುವಂತೆ ಡ್ರೋನ್‌ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ರೂಪಿಸಿದ್ದಾರೆ. ಡ್ರೋನ್‌ಗಳಿಗೆ ಬ್ಯಾಟರಿಬ್ಯಾಕಪ್ ಸವಾಲಾಗಿ ಪರಿಣಮಿಸಿದೆ. ಬ್ಯಾಟರಿ ಚಾರ್ಜ್‌ ಮುಗಿದ ಡ್ರೋನ್‌ಗಳು ಮತ್ತೆ ಮೂಲನಿಲ್ದಾಣಕ್ಕೆ ಬರುತ್ತವೆ ಎಂದು ಅರಿತ ತಂಡ ಸಮಸ್ಯೆಯನ್ನು ತಪ್ಪಿಸಲು ಚಾರ್ಜಿಂಗ್‌ ಪಾಯಿಂಟ್‌ ಅಭಿವೃದ್ಧಿಪಡಿಸಿದೆ.

ರಾಬರ್ಟ್ ಬಾಷ್ ಸೆಂಟರ್‌ನಲ್ಲಿ ತಾಂತ್ರಿಕ ತಂಡದ ಸದಸ್ಯ ಡಾ.ವಿ.ಆಶೀಶ್‌ ಜೋಗ್ಲೇಕರ್‌ ಅವರ ಕನಸಿನ ಕೂಸು ಇದು. ಅವರು ವಿಶ್ವಾಸ್‌ ನಾವಡ ಅವರ ಸಹಾಯದೊಂದಿಗೆ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ.ಅವುಗಳನ್ನು ಬೀದಿ ದೀಪ ಕಂಬಗಳಿಗೆ ಅಳವಡಿಸಲು ನಿರ್ಧರಿಸಲಾ ಗಿದೆ. ಅವುಗಳ ಪ್ರಾತ್ಯಕ್ಷಿಕೆ ನಡೆಯಿತು.

ಮಾನವರಹಿತ ವಾಹನ ಪ್ರದರ್ಶನ: ಬಾಹ್ಯಾಕಾಶ ಎಂಜಿನಿಯರಿಂಗ್ ವಿಭಾಗದವರು ಮಾನವರಹಿತ ಅಂತರಿಕ್ಷ ವಾಹನಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ಇದನ್ನು ವೀಕ್ಷಿಸಲು ಭಾರಿ ಜನಜಂಗುಳಿ ಇತ್ತು. ವಾಹನಗಳನ್ನು ಬೆರಗು ಗಣ್ಣಿನಿಂದ ವೀಕ್ಷಿಸಿದರು.

ಆವರಣದ ಬೇರೆ ಬೇರೆ ಕಡೆ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಿದರು. ಸಂಸ್ಥೆಯವಿದ್ಯಾರ್ಥಿಗಳು ಮಕ್ಕಳ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುವ ಮೂಲಕ ಅವರ ಗೊಂದಲಗಳನ್ನು ತಣಿಸಿದರು.

ಕೊನೆಯವರಾಗಿ ಬಹುಮಾನ ಗೆಲ್ಲಿ

ರೇಸ್‌ನಲ್ಲಿ ಭಾಗವಹಿಸಿದವರು, ರೆಡಿ ಒನ್…ಟೂ..ಥ್ರೀ….ಎಂಬ ಶಬ್ದ ಕಿವಿಗೆ ಬಿದ್ದಿದ್ದೇ ತಡ ಗೆಲ್ಲಬೇಕು ಎನ್ನುವ ಆಸೆಯಿಂದ ಓಡುತ್ತಾರಲ್ಲವೇ? ಆದರೆ, ಇಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಎಲ್ಲರೂ ಹಿಂದೆ ಉಳಿಯಲು ಯತ್ನಿಸುತ್ತಿದ್ದರು! ಏಕೆಂದರೆ, ಅದು ನಿಧಾನವಾಗಿ ಸೈಕಲ್‌ ಓಡಿಸುವ ಸ್ಪರ್ಧೆ!

ವಿದ್ಯಾರ್ಥಿಗಳಿಗಾಗಿ ಇಡೀ ದಿನ ನಿಧಾನವಾಗಿ ಸೈಕಲ್‌ ಓಡಿಸುವ ಸ್ಪರ್ಧೆ ನಡೆಯಿತು. ಸೈಕಲ್‌ ನಿಧಾನವಾಗಿ ಸಾಗುವಂತೆ ಮಾಡಲು ಸ್ಪರ್ಧಿಗಳು ನಡೆಸುತ್ತಿದ್ದ ಕಸರತ್ತು ನೋಡುಗರಲ್ಲಿ ನಗೆ ಉಕ್ಕಿಸುತ್ತಿತ್ತು. ಲೇನ್‌ ಬಿಟ್ಟು ಆಚೆ ಹೋಗುವ ಹಾಗಿಲ್ಲ. ನೆಲಕ್ಕೆ ಕಾಲು ಊರುವಂತಿಲ್ಲ. ಸಾಧ್ಯವಾದಷ್ಟು ನಿಧಾನವಾಗಿ ಓಡಿಸಿ, ಕೊನೆಯವರಾಗಿ ಗುರಿ ತಲುಪಬೇಕೆನ್ನುವುದು ನಿಯಮ.

ಪ್ರತಿಯೊಂದು ಸುತ್ತಿನಲ್ಲಿ ಉಸಿರು ಬಿಗಿಹಿಡಿದು ಸೈಕಲ್‌ ನಿಯಂತ್ರಿಸಿ, ಕೊನೆಯದಾಗಿ ಗುರಿ ಮುಟ್ಟಿದವರಿಗೆ ಕೊನೆಗೆ ಉಡುಗೊರೆ ಸಿಕ್ಕಿದ್ದು ‘ಟೋಪಿ’!

ಇ–ರಿಕ್ಷಾಕ್ಕೆ ಬೇಡಿಕೆ

ಐಎಸ್‌ಸಿ ಸಂಸ್ಥೆಯು ಇತ್ತೀಚೆಗೆ ಆರಂಭಿಸಿರುವ ಇ–ರಿಕ್ಷಾಕ್ಕೆ ಭಾರಿ ಬೇಡಿಕೆ ಇತ್ತು. ಉಚಿತ ಸೇವೆ ನೀಡುತ್ತಿದ್ದ ಇ– ರಿಕ್ಷಾಗಳಿಗಾಗಿ ಜನ ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಕೆಲವು ವಿದ್ಯಾರ್ಥಿಗಳು ಹಾಗೂ ಯುವಕರು ಸೈಕಲ್‌ನಲ್ಲಿ ಆವರಣ ಸುತ್ತಿದರು.

***

ಮುಕ್ತದಿನಕ್ಕಾಗಿ ಕಾಯುತ್ತಿದ್ದೆ, ಇದು ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಸಂಶೋಧನೆಗಳ ಸ್ಪಷ್ಟ ಚಿತ್ರಣವನ್ನು ನೀಡಿತು. ನನ್ನ ಶೈಕ್ಷಣಿಕ ಜೀವನಕ್ಕೂ ಇದು ಸಹಕಾರಿ.

- ಎಂ.ಎಸ್‌.ವೈಭವ, ಮೈಸೂರಿನ ಕ್ರೈಸ್ಟ್‌ ಶಾಲೆ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT