ಶುಕ್ರವಾರ, ಸೆಪ್ಟೆಂಬರ್ 17, 2021
22 °C
81 ವಿದ್ಯಾರ್ಥಿಗಳಿಗೆ ₹25 ಲಕ್ಷ ವೇತನ

ವಿಐಟಿ: ಇಬ್ಬರಿಗೆ ವಾರ್ಷಿಕ ₹75 ಲಕ್ಷದ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೆಲ್ಲೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ವಿಐಟಿ) ಇಬ್ಬರು ವಿದ್ಯಾರ್ಥಿಗಳು ವಾರ್ಷಿಕ ₹75 ಲಕ್ಷ ಹಾಗೂ 81 ವಿದ್ಯಾರ್ಥಿಗಳು ವಾರ್ಷಿಕ ₹25 ಲಕ್ಷ ವೇತನದ ಉದ್ಯೋಗಗಳಿಗೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.

ವಿಐಟಿಯ ಈ ಸಾಲಿನ ಪದವೀಧರರಿಗೆ ಜುಲೈ 15ರಂದು ಮೊದಲ ಹಂತದ ಕ್ಯಾಂಪಸ್‌ ಸಂದರ್ಶನ ನಡೆದಿತ್ತು. ಇದರಲ್ಲಿ ಮೈಕ್ರೊಸಾಫ್ಟ್‌, ಡೈಟ್, ಅಮೆಜಾನ್, ಮೋರ್ಗನ್‌ ಸ್ಟಾನ್ಲಿ ಸೇರಿದಂತೆ ಎಂಟು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.

ಆನ್‌ಲೈನ್‌ ಮೂಲಕ ನಡೆದ ಸಂದರ್ಶನ ಪ್ರಕ್ರಿಯೆಗಳಲ್ಲಿ ವಿಐಟಿಯ ವೆಲ್ಲೂರು, ಚೆನ್ನೈ, ಭೋಪಾಲ್ ಹಾಗೂ ಆಂಧ್ರಪ್ರದೇಶದ ಅಮರಾವತಿ ಕ್ಯಾಂಪ‍ಸ್‌ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ವಿಐಟಿ ಕುಲಪತಿ ಡಾ.ಜಿ.ವಿಶ್ವನಾಥನ್‌, ‘ಮೈಕ್ರೊಸಾಫ್ಟ್‌ ಸಂಸ್ಥೆ 21 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ. ಪೇಪಾಲ್ 13, ಉಡಾನ್ 3, ಡೈಟ್ 6, ವರ್ಕ್‌ಇಂಡಿಯಾ 8, ಡಿ.ಇ.ಶಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2, ಮೋರ್ಗನ್‌ ಸ್ಟಾನ್ಲಿ 10 ಹಾಗೂ ಅಮೆಜಾನ್‌ 13 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿದೆ. ಈ ಪೈಕಿ ಡೈಟ್‌ ಕಂಪನಿ ಇಬ್ಬರು ವಿದ್ಯಾರ್ಥಿಗಳಿಗೆ ವಾರ್ಷಿಕ ₹75 ಲಕ್ಷ ವೇತನದ ಉದ್ಯೋಗ ನೀಡಿದ್ದು, ಇದು ಈ ಸಾಲಿನ ಗರಿಷ್ಠ ವೇತನದ ಉದ್ಯೋಗ’ ಎಂದು ತಿಳಿಸಿದರು.

‘ಸಂಸ್ಥೆಯ 129 ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ತಮ್ಮ ಇಂಟರ್ನ್‌ಶಿಪ್ ಅವಧಿಯಲ್ಲೇ ಉದ್ಯೋಗಗಳಿಗೆ ಪೂರ್ವ ನಿಯೋಜನೆಗೊಂಡಿದ್ದಾರೆ. ಆಗಸ್ಟ್‌ ಅಂತ್ಯದವರೆಗೆ ವಿವಿಧ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನಗಳು ಮುಂದುವರಿಯಲಿವೆ’ ಎಂದರು.

‘ವಾಲ್‌ಮಾರ್ಟ್‌, ನೀಲ್ಸನ್, ಹೆಲ್ತ್‌ಆರ್‌ಎಕ್ಸ್‌ನಂತಹ ಸಂಸ್ಥೆಗಳು ವಾರ್ಷಿಕ ₹10 ಲಕ್ಷಕ್ಕೂ ಹೆಚ್ಚು ವೇತನದ ಉದ್ಯೋಗಗಳಿಗೆ ಮುಂದಿನ ವಾರಗಳಲ್ಲಿ ನೇಮಕಾತಿ ನಡೆಸಲಿವೆ. ಎಂಜಿನಿಯರಿಂಗ್ ಮತ್ತು ಐಟಿ ಕ್ಷೇತ್ರದ ಕಂಪನಿಗಳು ಮುಂದಿನ ತಿಂಗಳಲ್ಲಿ ನೇಮಕಾತಿ ನಡೆಸುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು