ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕಕ್ಕೆ ಒತ್ತಾಯ: ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಆಕ್ರೋಶ

‘ವಾಯ್ಸ್‌ ಆಫ್‌ ಪೇರೆಂಟ್ಸ್‌’ನಿಂದ ಪ್ರತಿಭಟನೆ
Last Updated 20 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ಶುಲ್ಕ ಕಟ್ಟಲು ಒತ್ತಾಯಿಸುವುದಲ್ಲದೆ, ಆರ್‌ಟಿಇ ಅಡಿ ದಾಖಲಾದ ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ‘ವಾಯ್ಸ್‌ ಆಫ್‌ ಪೇರೆಂಟ್ಸ್‌’ ಸಂಘಟನೆಯ ಅಡಿ ನೂರಾರು ಪೋಷಕರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

‘ಈ ಬಾರಿ ಪರಿಸ್ಥಿತಿಯೇ ಬೇರೆ ಇದೆ. ಹಾಗಿದ್ದ ಮೇಲೆ ಕಳೆದ ವರ್ಷದಷ್ಟೇ ಏಕೆ ಶುಲ್ಕ ನೀಡಬೇಕು’, ‘ಬೇರೆ ರಾಜ್ಯಗಳ ಹಾದಿಯಲ್ಲಿ ನಮ್ಮ ಸರ್ಕಾರವೂ ನಡೆಯಲಿ’, ‘ಬಜೆಟ್‌ ಶಾಲೆಗಳ ಕಷ್ಟ ಗೊತ್ತು, ನಾನ್‌ ಬಜೆಟ್‌ ಶಾಲೆಗಳ ಕಥೆ ಗೊತ್ತಾ?’, ‘ನೀವು ತೋರಿಸಿ ಶಾಲಾ ಖರ್ಚಿನ ಲೆಕ್ಕ, ನಾವು ಪಾವತಿಸುತ್ತೇವೆ ಸರಿಯಾದ ಶುಲ್ಕ’ ಎಂಬಿತ್ಯಾದಿ ಸಾಲುಗಳನ್ನು ಬರೆದಿದ್ದ ಫಲಕಗಳನ್ನು ಹಿಡಿದು ಪೋಷಕರು ಪ್ರತಿಭಟಿಸಿದರು.

‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಖಾಸಗಿ ಶಾಲೆಗಳು ಮಾತ್ರವಲ್ಲದೆ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಾನು ಕೆಲಸ ಕಳೆದುಕೊಂಡಿದ್ದೇನೆ. ಆದರೂ, ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಮಕ್ಕಳ ಮೊದಲ ಕಂತಿನ ಶುಲ್ಕವನ್ನು ಕಟ್ಟಿದ್ದೇನೆ. ಉಳಿದ ಕಂತುಗಳನ್ನು ಕಟ್ಟಿ ಎಂದು ಪೀಡಿಸುತ್ತಿದ್ದಾರೆ’ ಎಂದು ಪೋಷಕ ಮಂಜುನಾಥ್‌ ಶಾಸ್ತ್ರಿ ದೂರಿದರು.

‘ಮಂಜುನಾಥ ಬಡಾವಣೆಯಲ್ಲಿ ಇದ್ದ ನನ್ನ ನಿವೇಶನವನ್ನು ಮಾರಾಟ ಮಾಡಿ ಶುಲ್ಕ ಕಟ್ಟಲು ಮುಂದಾಗಿದ್ದೆ. ನಿವೇಶನ ಕೊಳ್ಳುವವರು ಕೂಡ ಮೋಸ ಮಾಡಿದ್ದರಿಂದ ತೊಂದರೆಯಾಯಿತು. ಈ ಕಷ್ಟವನ್ನು ಯಾರಲ್ಲಿ ಹೇಳಿಕೊಳ್ಳಬೇಕು’ ಎಂದು ಅವರು ಪ್ರಶ್ನಿಸಿದರು.

‘ಆರ್‌ಟಿಇ ಅಡಿ ದಾಖಲಾದ ಮಕ್ಕಳಿಗೆ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಿರ್ಬಂಧಿಸುತ್ತಿವೆ. ಆ ಮೂಲಕ ಶಿಕ್ಷಣದ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಇಂತಹ ಶಾಲೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಮಾತ್ರ ನಡೆಸುತ್ತಿರುವುದರಿಂದ ವಾಸ್ತವಿಕ ಸಂಬಳದ ವೆಚ್ಚದ ಆಧಾರದ ಮೇಲೆ ಬೋಧನಾ ಶುಲ್ಕವನ್ನು ಶೇ 75ರಷ್ಟು ಕಡಿಮೆ ಮಾಡಬೇಕು. ಮಿಕ್ಕಂತೆ ಬೇರಾವುದೇ ಶುಲ್ಕವನ್ನು ವಿಧಿಸಬಾರದು’ ಎಂದು ಪೋಷಕರು ಹೇಳಿದರು.

‘ಆರ್‌ಟಿಇ ಕಾಯ್ದೆ ಪ್ರಕಾರ ಪ್ರತಿ ಶಾಲೆಯಲ್ಲಿಯೂ ಪೋಷಕರ ಸಂಘವನ್ನು ರಚಿಸಬೇಕು. ಶುಲ್ಕದ ಕುರಿತು ಚರ್ಚಿಸಬೇಕು. ಆದರೆ ಯಾವುದೇ ಶಾಲೆ ಈ ರೀತಿಯ ಸಂಘ ರಚಿಸುತ್ತಿಲ್ಲ. ಪ್ರತಿ ಶಾಲೆಯಲ್ಲಿಯೂ ಪೋಷಕರ ಸಂಘ ರಚಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಪೋಷಕರು–ಶಾಲೆಗಳ ಸಹಕಾರ ಬೇಕು’
‘ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಉತ್ತಮ ಸಂಬಂಧ ಇರಬೇಕು. ಶುಲ್ಕ ಮತ್ತು ಶಿಕ್ಷಕರ ವೇತನಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೋಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಯ ಸಹಕಾರ ಸರ್ಕಾರಕ್ಕೆ ಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಫೇಸ್‌ಬುಕ್‌ನಲ್ಲಿಬರೆದುಕೊಂಡಿದ್ದಾರೆ.

‘ಆರ್ಥಿಕವಾಗಿ ಸಾಕಷ್ಟು ಶಕ್ತಿವಂತರಾಗಿದ್ದ ಕಾಲದಲ್ಲಿ ಕೆಲವು ಪೋಷಕರು ದುಬಾರಿ ಎಂದು ಹೇಳಬಹುದಾದ ಶುಲ್ಕ ತೆಗೆದುಕೊಳ್ಳುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದರು. ಕೋವಿಡ್‌ ಬಿಕ್ಕಟ್ಟಿನಿಂದ ಈಗ ಹಲವರು ಕೆಲಸ ಕಳೆದುಕೊಂಡಿದ್ದರಿಂದ ದುಬಾರಿ ಶುಲ್ಕ ಪಾವತಿಸಲು ಪೋಷಕರಿಗೆ ಕಷ್ಟವಾಗುತ್ತಿದೆ. ಆದರೆ ಶಾಲೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಈಗ ಪೋಷಕರು ಶುಲ್ಕ ಕಟ್ಟುತ್ತಿಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಈ ವರ್ಷ ನಮ್ಮ ಶಾಲೆಯಲ್ಲಿ ಆಡಳಿತಾತ್ಮಕ ವೆಚ್ಚಕ್ಕೆ ಮಾತ್ರ ಶುಲ್ಕ ತೆಗೆದುಕೊಂಡು ಪೋಷಕರ ಜೊತೆಗೆ ನಾವು ನಿಲ್ಲುತ್ತೇವೆ ಎಂಬ ಮಾತು ಶಾಲೆಗಳಿಂದ ಬಂದರೆ ಹಾಗೂ ನಮ್ಮ ಶಾಲೆಯ ಅಸ್ತಿತ್ವಕ್ಕಾಗಿ ನಾವು ಇಷ್ಟು ಶುಲ್ಕವನ್ನು ಕೊಡಲು ಸಿದ್ದ ಎಂದು ಪೋಷಕರು ಘೋಷಿಸಿದರೆ ಆಗ ಸಮಸ್ಯೆಗೆ ಪರಿಹಾರ ಸರಳವಾಗುವುದು’ ಎಂದೂ ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದೆ:ಸಿದ್ದರಾಮಯ್ಯ
ಖಾಸಗಿ ಶಾಲೆಗಳಲ್ಲಿ ಯಾವುದೇ ರೀತಿಯ ತರಗತಿಗಳನ್ನು ನಡೆಸದಿದ್ದರೂ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಬೆದರಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ರಾಜ್ಯ ಸರ್ಕಾರದ ಗೊಂದಲದ ನಿಲುವುಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಸಮಸ್ಯೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೊಣೆಗಾರರು. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಪೋಷಕರ ನಡುವೆ ಜಗಳ ಸೃಷ್ಟಿಸಿದ್ದಾರೆ’ ಎಂದು ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವುದೇ ರೀತಿಯ ನಿಯಂತ್ರಣವೂ ಇಲ್ಲ. ಪೂರ್ಣ ಶುಲ್ಕ ಪಾವತಿಗೆ ಒತ್ತಡ ಹೇರುತ್ತಿರುವ ಶಿಕ್ಷಣ ಸಂಸ್ಥೆಗಳು, ಆನ್‌ಲೈನ್‌ ತರಗತಿಗಳನ್ನು ಕಡಿತಗೊಳಿಸಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ‘ಬ್ಲಾಕ್‌ಮೇಲ್‌’ ಮಾಡುತ್ತಿವೆ. ತರಗತಿಗಳನ್ನು ನಡೆಸದಿದ್ದರೂ ಶುಲ್ಕ ಪಡೆದು ಪೋಷಕರನ್ನು ಸುಲಿಗೆ ಮಾಡಲಾಗುತ್ತಿದೆ. ಶಿಕ್ಷಣ ಸಚಿವರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶಾಲೆಗಳ ಪುನರಾರಂಭದ ವಿಚಾರದಲ್ಲಿಸಚಿವರು ಮತ್ತು ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಶಿಕ್ಷಣ ಸಚಿವರು ತಕ್ಷಣವೇ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತುಪೋಷಕರ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆಪಾರದರ್ಶಕವಾಗಿ ಪ್ರಯತ್ನಿಸಬೇಕು ಎಂದುಆಗ್ರಹಿಸಿದ್ದಾರೆ.

ಇಂದಿನಿಂದ ಆನ್‌ಲೈನ್‌ ತರಗತಿ ಸ್ಥಗಿತ: ರುಪ್ಸ
ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘವು (ರುಪ್ಸ) ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ, ಸೋಮವಾರದಿಂದ (ಡಿ.21) ಆನ್‌ಲೈನ್‌ ತರಗತಿ ನಡೆಸುವುದಿಲ್ಲ ಎಂದು ಹೇಳಿದೆ.

‘ಕೋವಿಡ್ ನೆಪವೊಡ್ಡಿ ಶಾಲೆಗಳ ಮಾನ್ಯತೆ ನವೀಕರಿಸಲು ನಿರಾಕರಿಸಲಾಗುತ್ತಿದೆ. ಇದರಿಂದ ಸಾವಿರಾರು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನ ಕೆಲವು ಆದೇಶಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಇದನ್ನು ವಿರೋಧಿಸಿ ಸಂಘದ 12 ಸಾವಿರ ಸದಸ್ಯ ಶಾಲೆಗಳು ಆನ್‌ಲೈನ್‌ತರಗತಿಗಳನ್ನು ಸ್ಥಗಿತಗೊಳಿಸಲಿವೆ’ ಎಂದು ಸಂಘದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸರ್ಕಾರದ ದ್ವಂದ್ವ ನೀತಿಗಳಿಂದ ಸುಮಾರು 10 ಸಾವಿರ ಶಾಲೆಗಳ ಶಿಕ್ಷಕರು ಬೀದಿ ಪಾಲಾಗಬೇಕಾಗಿದೆ. ಪ್ರತಿಭಟನೆಯ ಮೊದಲ ಹಂತವಾಗಿ ಆನ್‌ಲೈನ್‌ ತರಗತಿ ಸ್ಥಗಿತಗೊಳಿಸುವ ನಿರ್ಧಾರ ಮಾಡಿದ್ದೇವೆ. ನಮ್ಮ ಬೇಡಿಕೆಗಳಿಗೆ ಸರ್ಕಾರವು ಮುಂದೆಯೂ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT