ಮಂಗಳವಾರ, ಮಾರ್ಚ್ 9, 2021
31 °C
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 10 ದಿನಗಳ ಗಡುವು ನೀಡಿದ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ

ವೃಷಭಾವತಿ ಮಾಲಿನ್ಯ ತಡೆಗೆ ಯೋಜನೆ ರೂಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃಷಭಾವತಿ ಕಣಿವೆ ಹಾಗೂ ಬೈರಮಂಗಲ ಕೆರೆ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಸಮಗ್ರ ಯೋಜನೆ ಸಿದ್ಧಪಡಿಸಲು ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 10 ದಿನಗಳ ಗಡುವು ನೀಡಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮತ್ತು ಖ್ಯಾತ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಲೋಕಾಯುಕ್ತರು ಈ ಗಡುವು ವಿಧಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌, ತಮಗೆ 10 ದಿನಗಳ ಕಾಲಾವಕಾಶ ನೀಡಿದರೆ ಸಂಬಂಧಪಟ್ಟ ಇಲಾಖೆಗಳ ಜೊತೆ ಚರ್ಚಿಸಿ, ಕೈಗಾರಿಕೆಗಳು ಹಾಗೂ ವಿವಿಧ ಬಡಾವಣೆಗಳಿಂದ ಬಿಡುಗಡೆಯಾಗುತ್ತಿರುವ ಕಲುಷಿತ ನೀರನ್ನು ನಿಯಂತ್ರಿಸುವ ಹಾಗೂ ಶುದ್ಧೀಕರಿಸುವ ಸಂಬಂಧ ಸಮಗ್ರ ಯೋಜನೆ ಸಿದ್ಧಪಡಿಸುವುದಾಗಿ ಮನವಿ ಮಾಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಹತ್ತು ದಿನದೊಳಗೆ ಯೋಜನೆ ಸಿದ್ಧಪಡಿಸಬೇಕು. ಅದನ್ನು ಸಲ್ಲಿಸುವ ಮುನ್ನ ಸಂಬಂಧಪಟ್ಟ ಅರ್ಜಿದಾರರಿಗೆ ನೀಡಬೇಕು. ಯೋಜನಾ ವರದಿ ಕುರಿತಂತೆ ಸಹಾಯಕ ರಿಜಿಸ್ಟ್ರಾರ್‌ (ವಿಚಾರಣೆ) ಅವರು ಸಂಬಂಧಪಟ್ಟವರ ಪ್ರತಿಕ್ರಿಯೆ ಪಡೆಯಬೇಕು. ಬಳಿಕ ಅದರ ಮೇಲೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಕುರಿತು ಉಲ್ಲೇಖಿಸಬೇಕು. ಇದಾದ ಒಂದು ವಾರದೊಳಗೆ ಅರ್ಜಿದಾರರು ಯೋಜನಾ ವರದಿ ಕುರಿತು ತಮ್ಮ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಅವರು  ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳ ಸಭೆಯೊಂದನ್ನು ಕರೆದು ಸಮಿತಿ ರಚನೆ ಮಾಡಲು ಜನವರಿ 31ರಂದು ನೀಡಿದ್ದ ತಮ್ಮ ಆದೇಶದಲ್ಲಿ ತಿಳಿಸಲಾಗಿತ್ತು. ಜೂನ್‌ 15ರೊಳಗೆ ಈ ಸಭೆಯನ್ನು ಕರೆದು ಚರ್ಚಿಸಿ ಯೋಜನೆಯನ್ನು ಸಿದ್ಧಪಡಿಸಲು ನಿರ್ದೇಶಿಸಲಾಗಿತ್ತು. ಆದರೆ, ಇಂಥ ಸಭೆಯನ್ನು ಕರೆಯಲು ಜಲ ಮಂಡಳಿ ಅಧ್ಯಕ್ಷರು ವಿಫಲರಾಗಿರುವ ಕುರಿತು ಲೋಕಾಯುಕ್ತರು ತಮ್ಮ ಈ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ತಕ್ಷಣ ಈ ಸಭೆ ಕರೆಯಬೇಕು. ಜಲ ಮಂಡಳಿ ಅಧ್ಯಕ್ಷರು, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬಿಬಿಎಂಪಿ ಕಮಿಷನರ್‌, ಕೆಐಎಡಿಬಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ  ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಒಳಗೊಂಡಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಬೇಕು ಎಂದೂ ಸೂಚಿಸಿದ್ದಾರೆ.

ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಸೂಚನೆ

ಜಲ ಮಾಲಿನ್ಯ ಹಾಗೂ ವಾಯು ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಹೊಣೆ ಮಾಲಿನ್ಯ ನಿಯಂತ್ರಣ ಮಂಡಳಿಯದ್ದು. ಇತರ ಇಲಾಖೆಗಳ ಜತೆಗೂಡಿ ನೀರು ಮತ್ತು ಗಾಳಿಯನ್ನು ಮಾಲಿನ್ಯ ಮಾಡುತ್ತಿರುವ ಕೈಗಾರಿಕೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ. 

ಸಂವಿಧಾನ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಜೀವಿಸುವ ಹಕ್ಕನ್ನು ನೀಡಿದೆ. ಇದಕ್ಕೆ ಭಂಗ ತಂದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಲು ಹಿಂಜರಿಯಬಾರದು ಎಂದು ಲೋಕಾಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ವೃಷಭಾವತಿ ಕಣಿವೆ ಹಾಗೂ ಬೈರಮಂಗಲ ಕೆರೆ ಪ್ರದೇಶದಲ್ಲಿರುವ ರೈತರ ರಕ್ಷಣೆ ಮಾಡುವಂತೆಯೂ ಅವರು ಸೂಚಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು