ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಸಖ್ಯ ಬೆಳೆಸಿದ್ದ ಯುವಕನ ಕೊಂದ ತಂದೆ

ವಿ.ವಿ. ಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಆಟೊ ಚಾಲಕ ಬಂಧನ
Last Updated 5 ಡಿಸೆಂಬರ್ 2021, 16:32 IST
ಅಕ್ಷರ ಗಾತ್ರ

ಬೆಂಗಳೂರು: ವಿ.ವಿ. ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಿವೇಶ್‌ ಕುಮಾರ್ (19) ಎಂಬುವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿ ವಿ. ನಾರಾಯಣ (39) ಎಂಬಾತನನ್ನು ಬಂಧಿಸಿದ್ದಾರೆ.

‘ವಿನೋಭಾನಗರ ನಿವಾಸಿ ನಾರಾಯಣ, ಆಟೊ ಚಾಲಕ. ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ವಾಸವಿದ್ದ. ಕಲಾಸಿಪಾಳ್ಯದ ಮಾರುಕಟ್ಟೆಯಲ್ಲಿ ತರಕಾರಿ ಸಾಗಿಸುವ ಕೆಲಸ ಮಾಡುತ್ತಿದ್ದ. ತನ್ನ ಮಗಳ ಜೊತೆ ಸಲುಗೆ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆಂಬ ಕಾರಣಕ್ಕೆ ನಿವೇಶ್‌ ಕುಮಾರ್‌ನನ್ನು ಕೊಲೆ ಮಾಡಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಮಿಳುನಾಡಿನ ನಿವೇಶ್‌ ಕುಮಾರ್, ಕೆಲಸ ಹುಡುಕಿಕೊಂಡು ಎರಡು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ತಮ್ಮ ದೊಡ್ಡಪ್ಪನ ಮನೆಯಲ್ಲಿ ನೆಲೆಸಿದ್ದರು. ಅದೇ ಮನೆ ಬಳಿಯ ಮತ್ತೊಂದು ಮನೆಯಲ್ಲಿ ಆರೋಪಿ ನಾರಾಯಣ ಕುಟುಂಬ ವಾಸವಿತ್ತು. ಆತನ ಮಗಳ ಜೊತೆ ಸ್ನೇಹ ಬೆಳೆಸಿದ್ದ ನಿವೇಶ್‌, ಸಲುಗೆ ಇಟ್ಟುಕೊಂಡಿದ್ದರು. ಯುವತಿಯನ್ನು ಆಗಾಗ ಭೇಟಿಯಾಗುತ್ತಿದ್ದರು. ಯಾರೂ ಇಲ್ಲದಿದ್ದಾಗ ಮನೆಗೂ ಹೋಗಿ ಬರುತ್ತಿದ್ದರೆಂದು ಗೊತ್ತಾಗಿದೆ’ ಎಂದೂ ತಿಳಿಸಿದರು.

‘ನಿವೇಶ್ ಮನೆಗೆ ಬಂದು ಹೋಗುತ್ತಿದ್ದ ಸಂಗತಿ ನಾರಾಯಣನಿಗೆ ಗೊತ್ತಾಗಿತ್ತು. ಇತ್ತೀಚೆಗೆ ಮನೆಗೆ ಹೋಗಿ ಬರುತ್ತಿದ್ದಾಗಲೇ ನಾರಾಯಣ ಕಣ್ಣಿಗೆ ಬಿದ್ದಿದ್ದರು. ಮಗಳ ಜೊತೆ ಸಲುಗೆ ಇಟ್ಟುಕೊಂಡಿದ್ದಕ್ಕಾಗಿ ನಿವೇಶ್‌ ಮೇಲೆ ನಾರಾಯಣ ಕೋಪಗೊಂಡಿದ್ದರು’ ಎಂದೂ ಹೇಳಿದರು.

ದೊಣ್ಣೆಯಿಂದ ಹೊಡೆದು ಆಸ್ಪತ್ರೆಗೆ ಬಿಟ್ಟು ಹೋದ: ‘ನಿವೇಶ್‌ ಕುಮಾರ್ ಅವರ ದೊಡ್ಡಪ್ಪ ಹಾಗೂ ಮಕ್ಕಳು, ಪೂಜೆ ನಿಮಿತ್ತ ತಮಿಳುನಾಡಿಗೆ ಹೋಗಿದ್ದರು. ಒಬ್ಬರೇ ಇದ್ದ ನಿವೇಶ್, ನ. 28ರಂದು ರಾತ್ರಿ ಯುವತಿ ಮನೆಗೆ ಹೋಗಿ ಅವರ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ. ಅದೇ ಸಮಯಕ್ಕೆ ಆರೋಪಿ ನಾರಾಯಣ ಮನೆಗೆ ಬಂದಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಕೋಪಗೊಂಡ ನಾರಾಯಣ, ನಿವೇಶ್‌ ಜೊತೆ ಜಗಳ ತೆಗೆದಿದ್ದ. ಮರದ ದೊಣ್ಣೆಯಿಂದ ತಲೆಗೆ ಹೊಡೆದಿದ್ದ. ರಕ್ತ ಸೋರಲಾರಂಭಿಸಿತ್ತು. ತಲೆ ಹಿಡಿದುಕೊಂಡೇ ನಿವೇಶ್, ಮನೆಯಿಂದ ಹೊರಬಂದಿದ್ದರು. ನರಳುತ್ತ ರಸ್ತೆಯಲ್ಲಿ ಕುಳಿತಿದ್ದರು.’

‘ನಿವೇಶ್‌ ಸತ್ತರೆ ತನ್ನ ಮೇಲೆಯೇ ಕೊಲೆ ಆರೋಪ ಬರುತ್ತದೆಂದು ತಿಳಿದ ನಾರಾಯಣ, ಆಟೊದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದ. ನಂತರ, ಆಟೊ ಸಮೇತ ಪರಾರಿಯಾಗಿದ್ದ. ಚಿಕಿತ್ಸೆಗೆ ಸ್ಪಂದಿಸದೇ ನಿವೇಶ್ ರಾತ್ರಿಯೇ ತೀರಿಕೊಂಡಿದ್ದ’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

‘ಕೃತ್ಯದ ನಂತರ ಆರೋಪಿ ತಲೆಮರೆಸಿಕೊಂಡಿದ್ದ. ಪೊಲೀಸರ ವಿಶೇಷ ತಂಡ ಆತನನ್ನು ಬಂಧಿಸಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT