ಬೆಂಗಳೂರು: ರಾಜರಾಜೇಶ್ವರಿನಗರದ ಬಿಎಚ್ಇಎಲ್ ಲೇಔಟ್‌ನ ನಂಜುಂಡೇಶ್ವರ ರೆಸಿಡೆನ್ಸಿಗೆ ತ್ಯಾಜ್ಯ ವಿಂಗಡಿಸದ ಕಾರಣ ಬಿಬಿಎಂಪಿ ₹15 ಸಾವಿರ ದಂಡ ವಿಧಿಸಿದ್ದು, ಅನುಚಿತವಾಗಿ ವರ್ತಿಸಿ ನಿಂದಿಸಿದ ನಿವಾಸಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ರಾಮ್ಕೊ ಬಿಎಚ್ಇಎಲ್ ಲೇಔಟ್‌ನ 10ನೇ ಅಡ್ಡರಸ್ತೆಯಲ್ಲಿರುವ ನಂಜುಂಡೇಶ್ವರ ರೆಸಿಡೆನ್ಸಿಯಲ್ಲಿ ತ್ಯಾಜ್ಯವನ್ನು ವಿಂಗಡಿಸದೆ, ಮಿಶ್ರಿತವಾಗಿಡಲಾಗುತ್ತಿತ್ತು. ಡೈಪರ್, ನ್ಯಾಪ್‌ಕಿನ್ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯವನ್ನೂ ಒಂದೇ ಡಬ್ಬದಲ್ಲಿಡಲಾಗುತ್ತಿತ್ತು. ಈ ಬಗ್ಗೆ ವಿಚಾರಿಸಿದಾಗ ವಸತಿ ಸಮುಚ್ಚಯದ ನಿವಾಸಿ ಸತೀಶ್ ಅವರು ಮಾರ್ಷಲ್‌ಗಳನ್ನು ನಿಂದಿಸಿದ್ದಾರೆ.
‘ತ್ಯಾಜ್ಯವನ್ನು ವಿಂಗಡಿಸಿ ನೀಡುವುದಿಲ್ಲ, ಹೀಗೆಯೇ ತೆಗೆದುಕೊಂಡು ಹೋಗಬೇಕು’ ಎಂದು ಸಿಬ್ಬಂದಿ ಮೇಲೆ ಕೂಗಾಡಿದ್ದಾರೆ. ಅವಾಚ್ಯ ಪದಗಳನ್ನೂ ಬಳಸಿದಿದ್ದಾರೆ. ಈ ಬಗ್ಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಆರೋಗ್ಯಾಧಿಕಾರಿಗಳು ವಿಚಾರಿಸಲು ಸ್ಥಳಕ್ಕೆ ಹೋದಾಗಲೂ ಕೂಗಾಡಿದ್ದಾರೆ.
ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳಂತೆ ನೋಟಿಸ್ ಜಾರಿ ಮಾಡಿದ ಬಿಬಿಎಂಪಿ ಅಧಿಕಾರಿಗಳು, ನಂಜುಂಡೇಶ್ವರ ರೆಸಿಡೆನ್ಸಿಗೆ ₹15 ಸಾವಿರ ದಂಡವನ್ನು ವಿಧಿಸಿದ್ದಾರೆ. ಅಲ್ಲಿನ ಅಧ್ಯಕ್ಷರು ಈ ಮೊತ್ತವನ್ನು ಪಾವತಿಸಿದ್ದಾರೆ.
ಬಿಬಿಎಂಪಿ ಸಿಬ್ಬಂದಿಯನ್ನು ನಿಂದಿಸಿ, ಮಿಶ್ರ ತ್ಯಾಜ್ಯವನ್ನೇ ನೀಡುವುದಾಗಿ ಸತೀಶ್ ಕೂಗಾಡಿದ್ದಾರೆ. ಅಲ್ಲದೆ ಮಿಶ್ರಿತ ಕಸವನ್ನು ಬ್ಲ್ಯಾಕ್ ಸ್ಪಾಟ್‌ನಲ್ಲಿ ಎಸೆದಿದ್ದಾರೆ. ಸಿಬ್ಬಂದಿಯನ್ನು ಏಕವಚನದಲ್ಲಿ ನಿಂದಿಸುವ ಜೊತೆಗೆ, ಪರಿಸರ ಹಾನಿಗೂ ಕಾರಣರಾಗಿದ್ದಾರೆ ಎಂದು ಅವರ ಮೇಲೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.