ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು ಬಳಕೆ: ಪಂಚಸೂತ್ರಕ್ಕೆ ‘ಗ್ರೀನ್‌ ಸ್ಟಾರ್‌’

ಜಲಕ್ಷಾಮದ ವಿರುದ್ಧ ತಂತ್ರಜ್ಞಾನದ ಅಸ್ತ್ರ: ಜಲಮಂಡಳಿ ಅಧ್ಯಕ್ಷ
Published 22 ಮಾರ್ಚ್ 2024, 23:43 IST
Last Updated 22 ಮಾರ್ಚ್ 2024, 23:43 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಜಲ ದಿನವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ, ಬೆಂಗಳೂರು ಜಲಮಂಡಳಿ ‘ಗ್ರೀನ್‌ ಸ್ಟಾರ್‌ ಚಾಲೆಂಜ್‌’ ಸ್ಪರ್ಧೆ ಆಯೋಜಿಸಿದ್ದು, 30 ದಿನಗಳಲ್ಲಿ ಪಂಚಸೂತ್ರ ಅಳವಡಿಸಿಕೊಂಡ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ‘ಗ್ರೀನ್ ಸ್ಟಾರ್’ ನೀಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದರು.

ಶಾಂಗ್ರಿಲಾ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೀರು ಉಳಿತಾಯ ಮಾಡುವ ಏರಿಯೇಟರ್‌ಗಳನ್ನು ಅಳವಡಿಸುವ ಮೂಲಕ ‘ಗ್ರೀನ್ ಸ್ಟಾರ್ ಚಾಲೆಂಜ್’ಗೆ ಚಾಲನೆ ನೀಡಿದರು.

ಪಂಚ ಸೂತ್ರಗಳು: ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನ ಅಳವಡಿಕೆ, ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಿಸಿಕೊಳ್ಳುವುದು, ಕೊಳವೆಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ, ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸುವುದು– ಈ ಎಲ್ಲ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರು ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವ ಸಾರುವುದು. ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ‘ಫೈವ್ ಸ್ಟಾರ್ ಗ್ರೀನ್ ರೇಟಿಂಗ್‌’ ನೀಡಲಾಗುತ್ತದೆ ಎಂದು ರಾಮಪ್ರಸಾದ್ ಘೋಷಿಸಿದರು.

ತಂತ್ರಜ್ಞಾನದ ಅಸ್ತ್ರ: ಬೆಂಗಳೂರು ಹಾಗೂ ನಾಡಿನ ಎಲ್ಲೆಡೆ ಎದುರಾಗಿರುವ ಜಲಕ್ಷಾಮದ ವಿರುದ್ಧ ಹೊಸ ತಂತ್ರಜ್ಞಾನದ ಅಸ್ತ್ರ ಬಳಸುವಂತೆ ಯುವ ವಿಜ್ಞಾನಿಗಳಿಗೆ ಕರೆ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿರುವ ಸತೀಶ್‌ ಧವನ್‌ ಸಭಾಂಗಣದಲ್ಲಿ ‘ಬೆಂಗಳೂರು ಎಕೊ ಸಮಿಟ್‌– 2024’ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಸಮಸ್ಯೆಯನ್ನು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬಗೆಹರಿಸಲು ಸಾಧ್ಯ ಎನ್ನುವ ಆಲೋಚನೆಗೆ ಪುಷ್ಟಿ ನೀಡಿದ್ದು ಈ ಸಂಸ್ಥೆ. ಜನರು ತಮ್ಮ ದೈನಂದಿನ ನೀರಿನ ಬಳಕೆಯಲ್ಲಿ ಆಗಬಹುದಾದ ಅಪವ್ಯಯವನ್ನು ತಪ್ಪಿಸಬೇಕು. ಅಲ್ಲದೆ ಹೊಸ ತಂತ್ರಜ್ಞಾನಗಳ ಬಳಕೆಯ ಮೂಲಕ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಜ್ಜಾಗಬೇಕು’ ಎಂದರು.

‘ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಮಿತಗೊಳಿಸುವ ಮೂಲಕ ಮುಂದಿನ ಪೀಳಿಗೆಗೂ ಅವುಗಳು ಲಭ್ಯವಾಗುವ ನಿಟ್ಟಿನಲ್ಲಿ ಜನರು ಜಾಗೃತಿಗೊಳ್ಳಬೇಕು. ನಗರದಲ್ಲಿ ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಸಾಗಿದೆ. ನೀರಿನ ಮರುಪೂರಣ ಹೆಚ್ಚಿಸುವಲ್ಲಿ ಯುವ ವಿಜ್ಞಾನಿಗಳು ಹೊಸ ತಂತ್ರಜ್ಞಾನ ಆವಿಷ್ಕಾರಿಸಬೇಕು’ ಎಂದು ಹೇಳಿದರು.‌

ನೀರಿನ ಸಮಸ್ಯೆ ಇಳಿಕೆ
‘ನಗರದ ಹೃದಯ ಭಾಗದಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿದ್ದ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊದಲ ಹಂತದಲ್ಲಿ ಪ್ರತಿನಿತ್ಯ 300ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 100ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ನೀರು ಸರಬರಾಜು ಮಾಡುವ ಮೂಲಕ ದೂರು ಮತ್ತು ಸಮಸ್ಯೆಗಳ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಲಾಗುತ್ತದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ಹೇಳಿದರು.
‘ರೈನ್‌ ಡ್ಯಾನ್ಸ್‌’: ಹೋಟೆಲ್‌ಗೆ ನೋಟಿಸ್‌
ಹೋಳಿ ಆಚರಣೆಗೆ ರೈನ್‌ ಡ್ಯಾನ್ಸ್‌ ಆಯೋಜಿಸುವುದಾಗಿ ಪ್ರಕಟಿಸಿದ್ದ ಮೈಸೂರು ರಸ್ತೆಯ ಜೆ.ಕೆ. ಗ್ರ್ಯಾಂಡ್‌ ಅರೆನಾ ಹಾಗೂ ಜಯಮಹಲ್‌ ಪ್ಯಾಲೆಸ್‌ ಹೋಟೆಲ್‌ಗಳಿಗೆ ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ‘ರೈನ್‌ ಡ್ಯಾನ್ಸ್‌’ಗೆ ಕಾವೇರಿ ಹಾಗೂ ಕೊಳವೆಬಾವಿ ನೀರು ಬಳಸದಂತೆ ನೊಟೀಸ್‌ ನೀಡಿದರು. ‘ಸಾಂಸ್ಕೃತಿಕ ಹಬ್ಬವಾಗಿ ಆಚರಣೆಗೆ ಯಾವುದೇ ನಿಷೇಧ ಇಲ್ಲ. ಆದರೆ ವಾಣಿಜ್ಯ ಉದ್ದೇಶಗಳಿಗಾಗಿ ರೈನ್‌ ಡ್ಯಾನ್ಸ್‌ ಹಾಗೂ ಪೂಲ್‌ ಡ್ಯಾನ್ಸ್‌ ಆಯೋಜಿಸುವುದರಿಂದ ನೀರು ಪೋಲಾಗುತ್ತದೆ. ಇದನ್ನು ತಡೆಯಬೇಕು’ ಎಂದು ಹೋಟೆಲ್‌ ಸಿಬ್ಬಂದಿಗೆ ಹೇಳಿದರು. ‘ಇದಕ್ಕೆ ಪೂರಕವಾಗಿ ಸ್ಪಂದಿಸಿದ ಹೋಟೆಲ್‌ ಸಿಬ್ಬಂದಿ ಮಂಡಳಿಯ ನಿರ್ದೇಶನದಂತೆ ‘ರೈನ್‌ ಡ್ಯಾನ್ಸ್‌ ಹಾಗೂ ಪೂಲ್‌ ಡ್ಯಾನ್ಸ್‌ ಮಾಡುವುದಿಲ್ಲ’ ಎಂದು ಹೇಳಿದರು’ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT