ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,097 ಗ್ರಾಮಗಳಲ್ಲಿ ನೀರಿನ ಕೊರತೆ ಸಾಧ್ಯತೆ: ಕೃಷ್ಣ ಬೈರೇಗೌಡ

ನಗರ ಪ್ರದೇಶಗಳ 1,186 ವಾರ್ಡ್‌ಗಳಲ್ಲೂ ಜಲ ಕ್ಷಾಮದ ಅಂದಾಜು
Published 19 ಜನವರಿ 2024, 16:32 IST
Last Updated 19 ಜನವರಿ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ದಿನಗಳಲ್ಲಿ ರಾಜ್ಯದ 6,097 ಗ್ರಾಮಗಳು ಮತ್ತು 1,186 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವವಾಗಬಹುದು ಎಂಬ ಅಂದಾಜು ವರದಿ ಲಭ್ಯವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ನೋಂದಣಿ ಮತ್ತು ಮುದ್ರಾಂಕ, ಭೂ ದಾಖಲೆಗಳು ಹಾಗೂ ಭೂಮಾಪನ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರಗಾಲದಿಂದ ಎದುರಾಗಬಹುದಾದ ಜಲ ಕ್ಷಾಮದ ಕುರಿತು ಗ್ರಾಮಗಳ ಹಂತದಿಂದಲೇ ವರದಿ ಪಡೆಯಲಾಗಿದೆ’ ಎಂದರು.

ಈಗ ಒಟ್ಟು 165 ಗ್ರಾಮಗಳಲ್ಲಿ ನೀರಿನ ಕೊರತೆ ಇದೆ. 36 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 139 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. 6,052 ಗ್ರಾಮಗಳಲ್ಲಿ ಬಾಡಿಗೆಗೆ ಪಡೆಯುವುದಕ್ಕೆ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. 2,404 ಕೊಳವೆ ಬಾವಿಗಳ ಮಾಲೀಕರ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ತುಂಗ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ನೀರು ಹರಿಸುವ ವೇಳೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪರಿಹಾರ ವಿತರಣೆಗೆ ಚಾಲನೆ: ರೈತರ ಜಮೀನುಗಳ ವಿಸ್ತೀರ್ಣದ ಮಾಹಿತಿಯನ್ನು ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ’ಯಲ್ಲಿ (ಫ್ರೂಟ್ಸ್‌) ದಾಖಲಿಸುವ ಪ್ರಕ್ರಿಯೆ ಶೇಕಡ 75ರಷ್ಟು ಪೂರ್ಣಗೊಂಡಿದೆ. 30 ಲಕ್ಷ ರೈತರಿಗೆ ಮೊದಲ ಹಂತದ ಬರ ಪರಿಹಾರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವಾರದೊಳಗೆ ಅವರ ಖಾತೆಗೆ ಹಣ ತಲುಪಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಅಭಿಯಾನದ ಅವಧಿಯಲ್ಲಿ 7.7 ಲಕ್ಷ ರೈತರ 30 ಲಕ್ಷ ಜಮೀನುಗಳ ವಿಸ್ತೀರ್ಣದ ವಿವರವನ್ನು ಫ್ರೂಟ್ಸ್‌ನಲ್ಲಿ ದಾಖಲಿಸಲಾಗಿದೆ. ಅರ್ಹ ರೈತರ ವಿವರ ಮತ್ತು ಜಮೀನುಗಳ ವಿಸ್ತೀರ್ಣದ ಮಾಹಿತಿ ದಾಖಲಿಸಲು ಇನ್ನೂ ಅವಕಾಶವಿದೆ ಎಂದರು.

‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ್ದ ಬೆಳೆ ಹಾನಿಗೆ ಪರಿಹಾರ ನೀಡುವಾಗ ಭಾರಿ ಅಕ್ರಮ ನಡೆದಿತ್ತು. ಕಡೂರು ತಾಲ್ಲೂಕಿನಲ್ಲಿ ₹6 ಕೋಟಿ ಅಕ್ರಮವಾಗಿ ಪಾವತಿಯಾಗಿದೆ. ಹಾನಗಲ್‌, ಶಿಗ್ಗಾಂವಿ ತಾಲ್ಲೂಕಿನಲ್ಲೂ ಅವ್ಯವಹಾರ ನಡೆದಿದೆ. ಈ ಕುರಿತ ಪ್ರಾಥಮಿಕ ತನಿಖಾ ವರದಿಗಳು ಇಲಾಖೆಯ ಬಳಿ ಇದ್ದು, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT