ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ ಜಲಾಶಯದಲ್ಲಿ ಕಡಿಮೆಯಾದ ನೀರು ಸಂಗ್ರಹ: ಒಣಗುತ್ತಿರುವ ಬೆಳೆಗಳು

Published 11 ಅಕ್ಟೋಬರ್ 2023, 1:53 IST
Last Updated 11 ಅಕ್ಟೋಬರ್ 2023, 1:53 IST
ಅಕ್ಷರ ಗಾತ್ರ

–ಬೈಲಮೂರ್ತಿ ಜಿ.

ಹೆಸರಘಟ್ಟ: ಕಳೆದ ವರ್ಷ ಅಕ್ಟೋಬರ್‌ ಹೊತ್ತಿಗೆ ಕೋಡಿ ಬೀಳುವ ಹಂತಕ್ಕೆ ತಲುಪಿದ್ದ ಹೆಸರಘಟ್ಟ ಜಲಾಶಯದಲ್ಲಿ ಈ ವರ್ಷ ಅರ್ಧದಷ್ಟೂ ನೀರಿಲ್ಲ. ಮುಂಗಾರು ವೈಫಲ್ಯದಿಂದ ಹೀಗಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಇದು ಅರ್ಕಾವತಿ ನದಿ ಪಾತ್ರಕ್ಕೆ ಸೇರಿದೆ. ಈ ಪ್ರದೇಶದಲ್ಲಿ ಉತ್ತಮ ಮಳೆಯಾಗಿ, ಮೇಲ್ಭಾಗದ ಕೆರೆಗಳಾದ ಚನ್ನಾಪುರ, ಮಳೆಕೋಟೆ, ಕೋಡಿಹಳ್ಳಿ, ಕೋನಘಟ್ಟ, ಶಿವಪುರ, ನಾಗರಕೆರೆ, ಮಧುರೆ, ದೊಡ್ಡತುಮಕೂರು, ಬ್ಯಾತ, ಕಾಕೋಳು ಮುಂತಾದ ಕೆರೆಗಳು ತುಂಬಿ ಕೋಡಿ ಬಿದ್ದರಷ್ಟೇ ಹೆಸರಘಟ್ಟ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಈ ಬಾರಿ ಅರ್ಕಾವತಿ ಪಾತ್ರದಲ್ಲಿ ಉತ್ತಮ ಮಳೆಯಾಗದೇ, ಕೆರೆಗಳೂ ತುಂಬಿಲ್ಲ.

ಹೆಸರಘಟ್ಟ ಹೋಬಳಿಯಲ್ಲಿ ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗಿವೆ. ಜಲಾಶಯದಲ್ಲಿಯೂ ನೀರಿನ ಸಂಗ್ರಹ ಕುಸಿದರೆ ಅಂತರ್ಜಲದ ಮೇಲೂ ಪರಿಣಾಮ ಬೀರಲಿದೆ. ಬೇಸಿಗೆ ಹೊತ್ತಿಗೆ ಕೊಳವೆಬಾವಿಗಳು ಬತ್ತಿ ಹೋಗಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸ್ಥಳೀಯವಾಗಿ ಕುಡಿಯುವ ನೀರಿಗೂ ತೊಂದರೆ ಎದುರಾಗುತ್ತದೆ ಎಂದು ಸ್ಥಳೀಯ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಜಲಾಶಯಕ್ಕೆ 190ಕ್ಕೂ ಹೆಚ್ಚು ಕೆರೆಗಳಿಂದ ನೀರು ಹರಿದು ಬರುತ್ತದೆ. ಜಲಾಶಯದ ಗರಿಷ್ಠ ಮಟ್ಟ 71 ಅಡಿಯಾಗಿದ್ದು, ನೀರಿನ ಸಂಗ್ರಹ ಸಾಮರ್ಥ್ಯ 1.1 ಟಿಎಂಸಿ ಅಡಿ. ಸದ್ಯ ಜಲಾಶಯದಲ್ಲಿ 0.54 ಟಿಎಂಸಿ
ಅಡಿ ನೀರು ಸಂಗ್ರಹವಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗೆ ನೀರು ಕೊಟ್ಟ ಕೆರೆ

1894ರಲ್ಲಿ ಹೆಸರಘಟ್ಟ ಜಲಾಶಯವನ್ನು ಅಂದಿನ ಮೈಸೂರು ಸಂಸ್ಥಾನದ ದಿವಾನ ಕೆ. ಶೇಷಾದ್ರಿ ಅಯ್ಯರ್‌ ನಿರ್ಮಿಸಿದ್ದರು. ಈ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸಲಾಗುತ್ತಿತ್ತು. ಬೆಂಗಳೂರಿನ ಜನಸಂಖ್ಯೆ ಬೆಳೆದಂತೆಲ್ಲ ಹೆಸರಘಟ್ಟದ ನೀರು ನಗರಕ್ಕೆ ಸಾಲದಂತಾಯಿತು. 1983ರ ನಂತರ ಹೆಸರಘಟ್ಟದಿಂದ ಬೆಂಗಳೂರಿಗೆ ನೀರು ಪೂರೈಸುವುದನ್ನು ನಿಲ್ಲಿಸಲಾಯಿತು.

1994 ರಲ್ಲಿ ಜಲಾಶಯ ಕೋಡಿ ಬಿದ್ದಿತ್ತು. ಅದಾದ ನಂತರ 2022ರಲ್ಲಿ ನೀರು 70 ಅಡಿ ಸಮೀಪಕ್ಕೆ ಬಂದಿತ್ತು. ಕೋಡಿ ಬೀಳಲು 1 ಅಡಿಯಷ್ಟೇ ಕಡಿಮೆ ಇತ್ತು ಎಂದು ಸ್ಥಳೀಯರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT