ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮನಹಳ್ಳಿಯಲ್ಲಿ ತುಂಬಿದ ಕೆರೆ: ಕೊಳವೆಬಾವಿಗಳಿಗೆ ಮರುಜೀವ

Last Updated 2 ನವೆಂಬರ್ 2020, 18:50 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಸತತವಾಗಿ ಸುರಿದ ಮಳೆಯಿಂದಾಗಿ ಕೆರೆಗಳು ಮೈದುಂಬಿಕೊಂಡಿದ್ದು, ಇದರಿಂದ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿರುವುದು ಬೇಗೂರು – ಬೊಮ್ಮನಹಳ್ಳಿ ಭಾಗದ ಜನರಿಗೆ ಖುಷಿ ತಂದಿದೆ.

ಎರಡು ವರ್ಷಗಳಿಂದ ಬೇಗೂರು ಕೆರೆಯಲ್ಲಿ ನೀರಿಲ್ಲದೇ, ಅಂತರ್ಜಲ ಕುಸಿತವಾಗಿ ಕೊಳವೆಬಾವಿಗಳು ಬತ್ತಿ ಹೋಗಿದ್ದವು. ಬೇಗೂರು ಸುತ್ತಮುತ್ತಲ ಜನರು ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಿದ್ದರು. ಬೇಗೂರು ಕೆರೆ ತುಂಬಿದ್ದರಿಂದ ಅಂತರ್ಜಲ ಹೆಚ್ಚಿ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಸಿಗುತ್ತಿದೆ.

ಟ್ಯಾಂಕರ್ ನೀರಿಗಾಗಿ ದುಬಾರಿ ದುಡ್ಡು ತೆತ್ತು ಹೈರಾಣಾಗಿದ್ದ ಜನರ ಮೊಗದಲ್ಲಿ ಹರುಷ ತಂದಿದೆ. ರಸ್ತೆಗಳಲ್ಲಿ ಟ್ಯಾಂಕರ್ ಗಾಡಿಗಳ ಓಡಾಟವೂ ಕಡಿಮೆಯಾಗಿದೆ. ಹಣ ಕೊಟ್ಟರೂ ಸರಿಯಾದ ಸಮಯಕ್ಕೆ ಸರಿಯಾಗಿ ನೀರು ಸಿಗುವುದು ಕಷ್ಟವಾಗುತ್ತಿತ್ತು. ಆದರೆ, ಈಗ ಸತತವಾಗಿ ಸುರಿದ ಮಳೆ, ನಿವಾಸಿಗಳು ನೆಮ್ಮದಿಯಿಂದಿರುವಂತೆ ಮಾಡಿದೆ.

‘ನಮ್ಮ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ತಿಂಗಳಿಗೆ ಟ್ಯಾಂಕರ್ ನೀರಿಗಾಗಿ ಕನಿಷ್ಠ ₹40 ಸಾವಿರ ಖರ್ಚು ಮಾಡುತ್ತಿದ್ದೆವು. ಕೆರೆ ತುಂಬಿದ್ದರಿಂದ ಬತ್ತಿ ಹೋಗಿದ್ದ ಕೊಳವೆಬಾವಿ ಪರೀಕ್ಷಿಸಿದೆವು. ನೀರು ಇರುವುದು ಖಾತ್ರಿ ಆಯಿತು. ನಮಗೆ ಅಗತ್ಯವಿರುವಷ್ಟು ನೀರು ಸಿಗುತ್ತಿದೆ’ ಎನ್ನುತ್ತಾರೆ ಮೈಕೋ ಲೇಔಟ್ ನಿವಾಸಿ ಕಿರಣ್ ಕುಮಾರ್.

‘ದಿನಕ್ಕೆ 25 ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದೆವು. ಇದೀಗ 9 ಟ್ಯಾಂಕರ್ ನೀರನ್ನಷ್ಟೇ ಪೂರೈಕೆ ಮಾಡುತ್ತಿದ್ದೇವೆ. ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿರುವುದರಿಂದ ಹಾಗೂ ಕಾವೇರಿ ನೀರು ಅಗತ್ಯವಿರುವಷ್ಟು ಸಿಗುತ್ತಿರುವುದರಿಂದ ಬೇಡಿಕೆ ಕುಗ್ಗಿದೆ, ಬೇಸಿಗೆ ಬಂದಲ್ಲಿ ಬೇಡಿಕೆ ಬರಬಹುದು’ ಎನ್ನುತ್ತಾರೆ ಟ್ಯಾಂಕರ್ ನೀರು ಮಾರಾಟಗಾರ ಮುರಳಿ.

‘ಕೆರೆ ಅಭಿವೃದ್ಧಿಗೆ ಕೈಗೊಂಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿ ವಿರುದ್ಧ ಕೆಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಾಲಯದ ಸೂಚನೆಯಂತೆ ಕಾಮಗಾರಿ ನಿಲ್ಲಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಇನ್ನಷ್ಟು ಹೆಚ್ಚು ನೀರು ಸಂಗ್ರಹವಾಗಲಿದ್ದು, ಈ ಭಾಗದ ನೀರಿನ ಬವಣೆ ನೀಗಲಿದೆ’ ಎನ್ನುತ್ತಾರೆ ಪಾಲಿಕೆಯ ಮಾಜಿ ಸದಸ್ಯ ಎಂ.ಆಂಜನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT