ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಂತ್ಯ ಕರ್ಫ್ಯೂ: ಒಳ ಮಾರ್ಗಗಳ ಮೂಲಕ ರಸ್ತೆಗಿಳಿದ ವಾಹನಗಳು

ಪ್ರಮುಖ ರಸ್ತೆ, ಮುಖ್ಯ ವೃತ್ತಗಳಿಗಷ್ಟೇ ಸೀಮಿತವಾದ ತಪಾಸಣೆ: ನೆಪ ಹೇಳಿಕೊಂಡು ಓಡಾಡಿದ ಜನ
Last Updated 9 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಾರಾಂತ್ಯ ಕರ್ಫ್ಯೂ ಜಾರಿ ಇದ್ದರೂ ಕೂಡ ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿದ್ದ ದೃಶ್ಯ ಭಾನುವಾರ ನಗರದ ಬಹುತೇಕ ಭಾಗಗಳಲ್ಲಿ ಕಂಡುಬಂತು.

ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದವರನ್ನು ತಡೆದು ಗುರುತಿನ ಚೀಟಿ ಪರಿಶೀಲಿಸುತ್ತಿದ್ದರು. ಮುಖ್ಯ ರಸ್ತೆಯ ಮೂಲಕ ಸಾಗಿದರೆಪೊಲೀಸರು ತಡೆಯಬಹುದೆಂಬುದನ್ನು ಅರಿತಿದ್ದ ನಾಗರಿಕರು ಒಳ ಮಾರ್ಗಗಳ ಮೂಲಕ ವಾಹನಗಳಲ್ಲಿ ಓಡಾಡುತ್ತಿದ್ದರು.

ಸೀತಾ ವೃತ್ತ, ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ಸೇರಿದಂತೆ ಬಹುತೇಕ ಕಡೆ ಮೈದಾನಗಳು ಯುವಕರು ಹಾಗೂ ಮಕ್ಕಳಿಂದ ತುಂಬಿದ್ದವು. ಅವರು ಮುಖಗವಸು ಧರಿಸದೆಯೇ ಕ್ರಿಕೆಟ್‌ ಆಡುತ್ತಿದ್ದ ದೃಶ್ಯಗಳೂ ಕಂಡವು. ಭಾನುವಾರವಾಗಿದ್ದರಿಂದ ಹಲವೆಡೆ ಮಾಂಸ ಹಾಗೂ ಮೀನು ಖರೀದಿಗೆ ಜನ ಮುಗಿ ಬಿದ್ದಿದ್ದರು.

ಔಷಧ, ದಿನಸಿ, ತರಕಾರಿ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳೂ ಕಾರ್ಯನಿರ್ವಹಿಸುತ್ತಿದ್ದವು. ಕುಂಟು ನೆಪಗಳನ್ನು ಹೇಳಿಕೊಂಡು ನಾಗರಿಕರು ರಸ್ತೆಗಳಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಮ್ಮನಹಳ್ಳಿಯಿಂದ ತಾಯಿಯ ಆರೋಗ್ಯ ವಿಚಾರಿಸಲು ಬಂದಿದ್ದ ಗಣಪತಿ ಎಂಬುವರನ್ನು ಪೊಲೀಸರು ತಡೆದು, ವಾಹನ ಜಪ್ತಿ ಮಾಡಿದರು. ‘ತಾಯಿಯ ಆರೋಗ್ಯ ವಿಚಾರಿಸಲು ಬಂದಿದ್ದೆ. ತಪ್ಪಾಗಿದೆ ದಂಡ ಕಟ್ಟುತ್ತೇನೆ ಎಂದು ಹೇಳಿದರೂ ಪೊಲೀಸರು ಕೇಳುತ್ತಿಲ್ಲ. ವಾಹನವನ್ನೂ ಕೊಡುತ್ತಿಲ್ಲ’ ಎಂದು ಅವರು ಕಣ್ಣೀರಿಟ್ಟರು.

ಮೆಜೆಸ್ಟಿಕ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಭಾನುವಾರವೂ ಬಿಕೊ ಎನ್ನುತ್ತಿದ್ದವು. ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಕೆಲವೊಂದು ಬಸ್‌ಗಳಷ್ಟೇ ರಸ್ತೆಗಿಳಿದಿದ್ದವು. ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆ ಕಂಡುಬಂತು. ತಮ್ಮ ಊರುಗಳಿಗೆ ಹೊರಟಿದ್ದವರು ಬ್ಯಾಗ್‌ಗಳನ್ನು ಹಿಡಿದು ನಿಲ್ದಾಣದತ್ತ ಸಾಗುತ್ತಿದ್ದುದು ಕಂಡುಬಂತು. ಮುಖಗವಸು ಧರಿಸದೆ ಬೈಕ್‌ನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಜಾಲಹಳ್ಳಿ ಬಳಿ ತಡೆದ ಪೊಲೀಸರು ಸ್ಥಳದಲ್ಲಿಯೇ ದಂಡ ಕಟ್ಟಿಸಿಕೊಂಡರು.ಕೆ.ಆರ್.ಮಾರುಕಟ್ಟೆಯಲ್ಲಿ ಬೀದಿಬದಿ ವ್ಯಾಪಾರ ನಿರ್ಬಂಧಿಸಲಾಗಿತ್ತು. ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು.

ಒಟ್ಟು 944 ವಾಹನಗಳ ಜಪ್ತಿ

ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ಒಟ್ಟು 944 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಎರಡು ದಿನಗಳಲ್ಲಿ 864 ದ್ವಿಚಕ್ರ, 26 ತ್ರಿಚಕ್ರ ಹಾಗೂ 54 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ (414), ದಕ್ಷಿಣ (171), ಉತ್ತರ (147) ಹಾಗೂ ಪೂರ್ವ (91) ವಿಭಾಗಗಳಲ್ಲಿ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT