ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಮುಗಿದರೂ ಸಂಚಾರಕ್ಕೆ ಮುಕ್ತವಾಗಿಲ್ಲ ರಸ್ತೆ

ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆವರೆಗಿನ ವೈಟ್‌ ಟಾಪಿಂಗ್‌ ಸಂಪನ್ನ
Last Updated 24 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಸ್ತೆಯಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆವರೆಗಿನ ವೈಟ್‌ ಟಾಪಿಂಗ್‌ ಕಾಮಗಾರಿ ಬಹುತೇಕ ಸಂಪನ್ನಗೊಂಡಿದೆ. ಕಾಮಗಾರಿ ಪೂರ್ಣಗೊಂಡರೂ ರಸ್ತೆಯನ್ನು ಸಾರ್ವಜನಿಕರ ವಾಹನ ಸಂಚಾರಕ್ಕೆ ಮುಕ್ತಗೊಳಿಸಿಲ್ಲ.

ಒಂದು ಪಾರ್ಶ್ವದ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಹಾಗಾಗಿ ಕಬ್ಬನ್‌ ರಸ್ತೆ, ಎಂ.ಜಿ.ರಸ್ತೆ ಮತ್ತು ಶಿವಾಜಿನಗರ ರಸ್ತೆಯಲ್ಲಿ ವಾಹನ ದಟ್ಟಣೆಗೆ ಇದು ಕಾರಣವಾಗಿದೆ. ಈ ರಸ್ತೆಯನ್ನು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ರಾಜಕಾರಣಿಗಳನ್ನು ಕರೆಸಿರಸ್ತೆಯ ಉದ್ಘಾಟನೆ ನಡೆಸುವುದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಹಾಗಾಗಿ ಬಿಬಿಎಂಪಿಯು ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಮೀನಮೇಷ ಎಣಿಸುತ್ತಿದೆ’ ಎಂಬ ದೂರುಗಳು ಕೇಳಿಬಂದಿವೆ.

ಇದನ್ನು ಒಪ್ಪಿಕೊಂಡ ಪೂರ್ವ ವಲಯದ ಪಾಲಿಕೆ ಅಧಿಕಾರಿಯೊಬ್ಬರು, ‘ಇನ್ನೂ ಶೇ5ರಷ್ಟು ಕೆಲಸ ಬಾಕಿ ಇದೆ. ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಕೆಲಸ ಮುಗಿಸಲಾಗುತ್ತಿಲ್ಲ. ಹಾಗಾಗಿ ರಸ್ತೆಯನ್ನು ಮುಕ್ತಗೊಳಿಸಿಲ್ಲ. ಚುನಾವಣೆಯ ಬಳಿಕ ರಸ್ತೆಯನ್ನು ಮುಕ್ತಗೊಳಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ರಸ್ತೆಯನ್ನು ಆದಷ್ಟು ಬೇಗ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಿಬಿಎಂಪಿ ಪೂರ್ವ ವಲಯವು ಜನವರಿ 27 ರಂದು ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರದ ಸೆಂಟ್ರಲ್ ಸ್ಟ್ರೀಟ್ ಅನ್ನು ಸಂಪರ್ಕಿಸುವ 270 ಮೀಟರ್ ಉದ್ದದರಸ್ತೆ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಆರಂಭಿಸಿತ್ತು.

‘ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಬಿಬಿಎಂಪಿ ವೈಟ್‌ ಟಾಪಿಂಗ್‌ ಮಾಡಿ ಒಳ್ಳೆ ಕೆಲಸ ಮಾಡಿದೆ. ಆದಷ್ಟು ಬೇಗ ಅದನ್ನು ವಾಹನ ಸವಾರರಿಗೆ ಮುಕ್ತಗೊಳಿಸಬೇಕು’ ಎಂದು ಶಿವಾಜಿನಗರ ನಿವಾಸಿ ಅನುರಾಧಾ ರೈ ಹೇಳಿದರು.

‘ರಸ್ತೆ ಮುಚ್ಚಿರುವುದರಿಂದ ಎಂ.ಜಿ.ರಸ್ತೆ ಮತ್ತು ಕಬ್ಬನ್‌ ರಸ್ತೆಗಳಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಳವಾಗಿದೆ’ ಎಂದು ವಾಹನ ಸವಾರ ಪವನ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT