ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆಗಳ ಡಾಂಬರೀಕರಣಕ್ಕೆ ವಾರದ ಗಡುವು

ಹೆಬ್ಬಾಳ– ಕೆ.ಆರ್.ಪುರ ಹೊರವರ್ತುಲ ರಸ್ತೆ ಕಾಮಗಾರಿ ಪರಿಶೀಲನೆ
Last Updated 27 ಅಕ್ಟೋಬರ್ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳದಿಂದ ಕೆ.ಆರ್.ಪುರವರೆಗಿನ ಹೊರವರ್ತುಲ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗಿದ್ದು, ಇಲ್ಲಿನ ಮೂರು ಮೇಲ್ಸೇತುವೆಗಳ ಡಾಂಬರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಮೂರೂ ಮೇಲ್ಸೇತುವೆಗಳ ಡಾಂಬರೀಕರಣವನ್ನುವಾರದ ಒಳಗೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ತಾಕೀತು ಮಾಡಿದರು.

ಹೊರವರ್ತುಲ ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕೆಲಸ ನಡೆಸಿದ ಕಡೆ ಸರ್ವೀಸ್ ರಸ್ತೆಗಳ ಡಾಂಬರೀಕರಣವನ್ನೂ ಕೂಡಲೇ ಪ್ರಾರಂಭಿಸುವಂತೆಯೂ ಸೂಚಿಸಿದರು. ಬಿಬಿಎಂಪಿಯು ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಅವರು ಮಂಗಳವಾರ ನಡೆಸಿದರು.

ಬಿಬಿಎಂಪಿಯು 68 ರಸ್ತೆಗಳ ವೈಟ್‌ಟಾಪಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ಗುಪ್ತ ತರಾಟೆಗೆ ತೆಗೆದುಕೊಂಡರು.

‘ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರೋಪಾಯ ಇದ್ದೇ ಇರುತ್ತದೆ. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ತಕ್ಷಣವೇ ಪ್ರಾರಂಭಿಸಬೇಕು’ ಎಂದು ಸೂಚಿಸಿದರು.

ವೈಟ್‌ಟಾಪಿಂಗ್ ಕಾಮಗಾರಿಗೆ ಗೊತ್ತುಪಡಿಸಲಾದ ಕೆಲವು ರಸ್ತೆಗಳಲ್ಲಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಆದರೆ, ಈ ರಸ್ತೆಗಳು ಗುಂಡಿಗಳಿಂದ ಕೂಡಿವೆ. ‘ಈ ಗುಂಡಿಗಳನ್ನು ಮುಚ್ಚಲು ತಕ್ಷಣ ಕ್ರಮಕೈಗೊಳ್ಳಬೇಕು. ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಅನನುಕೂಲವಾಗಬಾರದು’ ಎಂದು ಆಡಳಿತಾಧಿಕಾರಿ ಆದೇಶಿಸಿದರು.

ಭಾಸ್ಕರನ್ ರಸ್ತೆಯಲ್ಲಿ (ಟ್ರ‍್ರಿನಿಟಿ ವೃತ್ತದಿಂದ ಹಳೇ ಮದ್ರಾಸು ರಸ್ತೆವರೆಗೆ) ಜಲಮಂಡಳಿಯು ಕೊಳವೆಗಳನ್ನು ಅಳವಡಿಸುತ್ತಿದ್ದು, ಇಲ್ಲಿ ಸದಾ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಜಲಮಂಡಳಿ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಆಡಳಿತಾಧಿಕಾರಿ, ‘ಕೊಳವೆ ಜೋಡಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ವೈಟ್ ಟಾಪಿಂಗ್ ಅಳವಡಿಸಲು ಅನುವು ಮಾಡಿಕೊಡಬೇಕು’ ಎಂದು ಕೋರಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮಾಗಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಬದಲಾಗಿ ಡಾಂಬರೀಕರಣ ಮಾಡಲು ಸರ್ಕಾರದ ಅನುಮೋದನೆ ದೊರೆತಿದ್ದು, ಕೂಡಲೇ ಕೆಲಸ ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.

ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ವಾಹನಗಳ ಮಾರ್ಗ ಬದಲಾವಣೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಂಚಾರ ಪೊಲೀಸ್ ಇಲಾಖೆ ಜೊತೆ ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು. ವೈಟ್‌ಟಾಪಿಂಗ್‌ ನಡೆಯಲಿರುವ ರಸ್ತೆಗಳ ಪಟ್ಟಿಯನ್ನು ಕೊಟ್ಟರೆ ಸಂಚಾರ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿಯ ತ್ವರಿತ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಎಂಜಿನಿಯರ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಎನ್.ರಮೇಶ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT