ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ವೈಟ್‌ ಟಾಪಿಂಗ್‌ ರಸ್ತೆ ಕುಸಿತ: ಕಾರಣ ನಿಗೂಢ!

Published 12 ಡಿಸೆಂಬರ್ 2023, 17:30 IST
Last Updated 12 ಡಿಸೆಂಬರ್ 2023, 17:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವೈಟ್‌ಟಾಪಿಂಗ್‌ ಮಾಡಿದ್ದ ರಸ್ತೆ ಕುಸಿತವಾಗಿದ್ದು, ಇದಕ್ಕೆ ಕಾರಣವನ್ನು ‌ಜಲಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ಜೊತೆ ಸೇರಿ ಪರಿಶೀಲಿಸಿದರೂ ಸಮಸ್ಯೆಯ ಅರಿವಾಗಿಲ್ಲ.

ನಗರದ ಹಲಸೂರು ಕೆರೆಯ ಬಳಿಯ ಕೆನ್ಸಿಂಗ್ಟನ್ ಜಂಕ್ಷನ್ ಸಮೀಪದ ವೈಟ್‌ಟಾಪಿಂಗ್‌ ರಸ್ತೆಯಲ್ಲಿ ಶನಿವಾರ ರಾತ್ರಿ ಸಣ್ಣದಾಗಿ ಗುಂಡಿ ಕಾಣಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ವೇಳೆಗೆ ಸುಮಾರು ಏಳು ಅಡಿ ಆಳಕ್ಕೆ ಮಣ್ಣು ಕುಸಿತವಾಗಿದೆ. 

ರಸ್ತೆಯಲ್ಲಿ ಮಣ್ಣು ಕುಸಿತ ಕಂಡ ಸಂಚಾರ ಪೊಲೀಸರು ವಾಹನ ಸಂಚಾರದ ಮಾರ್ಗ ಬದಲಿಸಿ, ಬ್ಯಾರಿಕೇಡ್‌ ಅಳವಡಿಸಿದ್ದರು.

ಬಿಬಿಎಂಪಿ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿ, ಜಲಮಂಡಳಿಯ ಪೈಪ್‌ ಸೋರಿಕೆಯಾಗಿ ಭೂ ಕುಸಿತವಾಗಿದೆ. ಅವರು ದುರಸ್ತಿ ಮಾಡಬೇಕು ಎಂದಿದ್ದಾರೆ. ನಂತರ ಜಲಮಂಡಳಿ ಎಂಜಿನಿಯರ್‌ಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಗಳಲ್ಲಿ ಸೋರಿಕೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡರು. ಜೆಸಿಬಿ ಯಂತ್ರದಿಂದ  ರಸ್ತೆಯನ್ನು ಅಗೆದು, ಹಳ್ಳವನ್ನು ಮಣ್ಣು, ಕಲ್ಲುಗಳಿಂದ ತುಂಬಿದ್ದಾರೆ. ಬಿಬಿಎಂಪಿ ಎಂಜಿನಿಯರ್‌ಗಳು ಇದರ ಮೇಲೆ ಕಾಂಕ್ರೀಟ್‌ ಹಾಕುವ ಭರವಸೆ ನೀಡಿದ್ದಾರೆ.

‘ನಗರದ ರಸ್ತೆಗಳು ಯಾವ ಕಾರಣಕ್ಕೆ ಏಕಾಏಕಿ ಕುಸಿಯುತ್ತಿವೆ. ರಸ್ತೆ ಕುಸಿಯಲು ಏನು ಕಾರಣ ಎಂಬುದು ಮಾತ್ರ ನಿಗೂಢವಾಗಿದೆ. ಒಂದು ವರ್ಷದ ಹಿಂದೆಯೇ ಇಲ್ಲಿನ ರಸ್ತೆಗೆ ವೈಟ್‌ ಟಾಪಿಂಗ್‌ ಮಾಡಲಾಗಿತ್ತು. ಮಂಗಳವಾರ ರಸ್ತೆ ಕುಸಿದಿದೆ. ಆ ಸಂದರ್ಭದಲ್ಲಿ ವಾಹನಗಳು ಸಂಚಾರ ವಿರಳವಾಗಿತ್ತು. ಆದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ’ ಎಂದು ಸ್ಥಳೀಯರು ತಿಳಿಸಿದರು.

‘ಕೆನ್ಸಿಂಗ್ಟನ್ ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಬುಧವಾರ ಸಂಜೆಯೊಳಗೆ ಮುಚ್ಚಲಾಗುವುದು. ನಮ್ಮ ಪೈಪ್‌ಗಳಿಂದ ಯಾವುದೇ ರೀತಿಯ ಸೋರಿಕೆಯಾಗಿಲ್ಲ. ಯಾವ ಕಾರಣಕ್ಕೆ ರಸ್ತೆ ಕುಸಿದಿದೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಬಿಡಬ್ಲ್ಯಎಸ್‌ಎಸ್‌ಬಿ  ಮುಖ್ಯ ಎಂಜಿನಿಯರ್‌ ಗಂಗಾಧರ್‌ ಹೇಳಿದರು.

‘ಜಲಮಂಡಳಿಯ ಪೈಪಿನ ಸೋರಿಕೆಯಿಂದ ಮಣ್ಣು ಕುಸಿದಿದೆ. ಸುಮಾರು ಏಳು ಅಡಿ ಆಳವಾಗಿದ್ದು, ಜಲಮಂಡಳಿಯವರು ಇದನ್ನು ದುರಸ್ತಿಪಡಿಸಬೇಕು. ಮಣ್ಣು ಸವಕಳಿ ಹಾಗೂ ಮಣ್ಣು ಸರಿದಿರುವುದರಿಂದ ಈ ಹಳ್ಳ ಆಗಿರಬೇಕು. ನಿಖರವಾದ ಕಾರಣ ಗೊತ್ತಿಲ್ಲ. ಜಲಮಂಡಳಿಯವರು ಅದನ್ನು ದುರಸ್ತಿ ಪಡಿಸಿದ ಮೇಲೆ ಕಾಂಕ್ರೀಟ್‌ ಹಾಕಲಾಗುತ್ತದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದರು.

‘ಶನಿವಾರವೇ ಗುಂಡಿ ಬಿದ್ದಿತ್ತು!’

‘ಕೆನ್ಸಿಂಗ್ಟನ್ ಜಂಕ್ಷನ್ ಸಮೀಪದ ರಸ್ತೆಯಲ್ಲಿ ಶನಿವಾರ ತಡರಾತ್ರಿ ಚಿಕ್ಕ ಗುಂಡಿ ಬಿದ್ದಿತ್ತು. ಸೋಮವಾರದಿಂದ ಗುಂಡಿ ದೊಡ್ಡದಾಗುತ್ತಾ ಹೋಯಿತು. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೋಮವಾರವೇ ಮಾಹಿತಿ ನೀಡಲಾಗಿತ್ತು’ ಎಂದು ಹಲಸೂರು ವಾರ್ಡ್‌ ಕಮಿಟಿ ಸದಸ್ಯ ಮೋಹನ್‌ ರಾಜ್ ಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ರಸ್ತೆಯಲ್ಲಿ ಸಣ್ಣದಾಗಿದ್ದಾಗ ಗುಂಡಿಯನ್ನು ಯಾರು ದುರಸ್ತಿ ಮಾಡಬೇಕು ಎಂದು ನಿರ್ಧರಿಸಲು ಎಂಜಿನಿಯರ್‌ಗಳು ಒಂದು ದಿನ ಕಳೆದರು. ಬಿಬಿಎಂಪಿ ಹಾಗೂ ಜಲಮಂಡಳಿ ಮಧ್ಯದ ಗೊಂದಲದಿಂದಲೇ ದುರಸ್ತಿ ಕಾಮಗಾರಿ ವಿಳಂಬವಾಗಿದೆ ’ ಎಂದು ಅವರು ವಿವರಿಸಿದರು.

ಭಾನುವಾರ ಬೆಳಿಗ್ಗೆ ಕಂಡಿದ್ದ ಗುಂಡಿ
ಭಾನುವಾರ ಬೆಳಿಗ್ಗೆ ಕಂಡಿದ್ದ ಗುಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT