ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಬೆಂಗಳೂರು ತಾಪಮಾನ: ಹೆಚ್ಚಿದ ಚಳಿ

ಹೊರವಲಯದಲ್ಲಿ ಚಳಿ ಪ್ರಭಾವ ತುಸು ಹೆಚ್ಚು
Published 15 ಡಿಸೆಂಬರ್ 2023, 20:29 IST
Last Updated 15 ಡಿಸೆಂಬರ್ 2023, 20:29 IST
ಅಕ್ಷರ ಗಾತ್ರ

ಬೆಂಗಳೂರು: ಮೋಡಗಳ ಕಣ್ಣಾಮುಚ್ಚಾಲೆ ನಡುವೆ ನಗರಕ್ಕೆ ಚಳಿ ಕಾಲಿರಿಸಿದ್ದು ಎರಡು ದಿನಗಳಿಂದ ತಾಪಮಾನ ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ.

ನಗರದಲ್ಲಿನ ವಾತಾವರಣವು ಜನರಿಗೆ ಥಂಡಿ ಎನಿಸುತ್ತಿದೆ. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಶೀತಗಾಳಿ ಬೀಸುತ್ತಿದ್ದು ಜನರು ಬಿಸಿ ಪಾನೀಯ ಹಾಗೂ ಬೆಚ್ಚಗಿರುವ ಉಡುಪಿನ ಮೊರೆಹೊಗುತ್ತಿದ್ದಾರೆ. ಹಗಲು ವೇಳೆಯಲ್ಲೂ ಚಳಿ ಕಾಣಿಸುತ್ತಿದೆ. ಮಕ್ಕಳು, ವೃದ್ಧರು, ಯುವತಿಯರು ಟೋಪಿ– ಸ್ವೇಟರ್‌ ಧರಿಸಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.

ನಗರದ ಹೊರವಲಯದಲ್ಲಿ ಚಳಿ ಪ್ರಭಾವ ತುಸು ಹೆಚ್ಚಿದೆ. ರಾತ್ರಿ ವೇಳೆ ಬೈಕ್‌ನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಡಿಸೆಂಬರ್‌ 20ರಿಂದ ಜನವರಿ 15ರ ವರೆಗೆ ಉಷ್ಣಾಂಶ ಮತ್ತಷ್ಟು ಕುಸಿಯಲಿದೆ. ಆಗ ಚಳಿ ಪ್ರಭಾವ ಹೆಚ್ಚಿರಲಿದ್ದು ಜನರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

ನಗರದ ಮೂರು ಸ್ಥಳದಲ್ಲಿ ತಾಪಮಾನ ಕೇಂದ್ರಗಳಿವೆ. ಎಚ್‌ಎಎಲ್‌, ಬೆಂಗಳೂರು ನಗರ ಪ್ರದೇಶ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೀಕ್ಷಣಾಲಯವಿದ್ದು, ಕಳೆದ ವಾರ ಮೂರು ಕೇಂದ್ರದಲ್ಲೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ, ಗುರುವಾರ ಹಾಗೂ ಶುಕ್ರವಾರ ಮೂರು ಕೇಂದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ತಾಪಮಾನವು 15ರಿಂದ 17 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ತೇವಾಂಶದ ಪ್ರಮಾಣವು ಹೆಚ್ಚಾಗಿದೆ. ಹಗಲು ವೇಳೆಯಲ್ಲಿ ಮೋಡ ಕವಿದ ವಾತಾವರಣ, ಮಧ್ಯದಲ್ಲಿ ಸೂರ್ಯನ ದರ್ಶನದ ನಡುವೆ ಚಳಿ ಅನುಭವ ಉಂಟಾಗುತ್ತಿದೆ.

‘ಕಳೆದ ವರ್ಷ ನಗರದ ಕೆಲವು ಭಾಗದಲ್ಲಿ ತಾಪಮಾನ ತೀವ್ರವಾಗಿ ಕುಸಿದಿತ್ತು. ಆದರೆ, ಈ ವರ್ಷ ಕನಿಷ್ಠ ತಾಪಮಾನ 14 ಡಿಗ್ರಿಗೆ ಸೆಲ್ಸಿಯಸ್‌ ವರೆಗೆ ಕುಸಿಯಬಹುದು’ ಎಂದು ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿಸೆಂಬರ್‌ 31ಕ್ಕೆ ಹಿಂಗಾರು ಅವಧಿ ಮುಕ್ತಾಯವಾಗಲಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಬೆಂಗಳೂರಿನಲ್ಲೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆ ಹಗುರವಾಗಿ ಮಳೆಯಾಗುವ ಸಾಧ್ಯತೆಯಿದೆ’ ಎಂದೂ ಮಾಹಿತಿ ನೀಡಿದರು.

‘1883ರ ಡಿಸೆಂಬರ್‌ 29ರಂದು ಕನಿಷ್ಠ ಉಷ್ಣಾಂಶ 8.9 ಡಿಗ್ರಿ ಸೆಲ್ಸಿಯಸ್ ಹಾಗೂ 1884ರ ಜನವರಿ 13ರಂದು 7.9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಅದು ಇದುವರೆಗಿನ ಕನಿಷ್ಠ ಉಷ್ಣಾಂಶದ ದಾಖಲೆಯಾಗಿದೆ. ಆ ಪ್ರಮಾಣದಲ್ಲಿ ಈ ವರ್ಷ ತಾಪಮಾನ ಕುಸಿಯುವ ಸಾಧ್ಯತೆ ತೀರ ಕಡಿಮೆ’ ಎಂದು ಎ.ಪ್ರಸಾದ್‌ ಹೇಳುತ್ತಾರೆ.

ಮಾರ್ಚ್‌ ಅಂತ್ಯದ ವರೆಗೆ ‘ಎಲ್‌ ನಿನೊ’ ಪ್ರಭಾವ ಇರಲಿದೆ. ಹೀಗಾಗಿ ಕನಿಷ್ಠ ಮಟ್ಟಕ್ಕೆ ತಾಪಮಾನ ಕುಸಿಯುವ ಸಾಧ್ಯತೆ ತೀರ ಕಡಿಮೆ. 45 ದಿನಗಳ ಕಾಲ ನಗರದಲ್ಲಿ ಸಾಮಾನ್ಯ ಚಳಿ ಇರಲಿದೆ.

–ಎ.ಪ್ರಸಾದ್‌ ವಿಜ್ಞಾನಿ ಹವಾಮಾನ ಇಲಾಖೆ

ಶೀತ ಸಂಬಂಧಿ ಕಾಯಿಲೆಗಳು ಹೆಚ್ಚಳ

ತಾಪಮಾನ ಕುಸಿದ ಬೆನ್ನಲ್ಲೇ ಶೀತ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ನೆಗಡಿ ಕೆಮ್ಮು ಜ್ವರ ಉಸಿರಾಟ ಆಸ್ತಮ ರೋಗಿಗಳು ಆಸ್ಪತ್ರೆಗಳತ್ತ ಬರುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ‘ಚಳಿಗಾಲದಲ್ಲಿ ಜೀರ್ಣಕ್ರಿಯೆ ಕಡಿಮೆ ಇರಲಿದೆ. ಸುಲಭವಾಗಿ ಜೀರ್ಣವಾಗುವ ಪದಾರ್ಥ ಸೇವಿಸಿದರೆ ಒಳ್ಳೆಯದು. ಬಿಸಿನೀರನ್ನೇ ಹೆಚ್ಚು ಬಳಸಬೇಕು’ ಎಂದು ತಜ್ಞರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT