ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ: ‘ರ‍್ಯಾಪಿಡೊ’ ಸವಾರ ಸೇರಿ ಮೂವರ ಬಂಧನ

ಆಸ್ಪತ್ರೆಯಿಂದಲೇ ಪೊಲೀಸರಿಗೆ ಮಾಹಿತಿ: ಒಂದು ಗಂಟೆಯಲ್ಲಿ ಆರೋಪಿಗಳ ಸೆರೆ
Last Updated 29 ನವೆಂಬರ್ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಆ್ಯಪ್ ಆಧಾರಿತ ‘ರ‍್ಯಾಪಿಡೊ’ ಬೈಕ್‌ ಸೇವೆ ಬಳಸಿದ್ದ ಯುವತಿಯನ್ನು ಅಪಹರಿಸಿ, ಕ್ರೂರವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಈ ಸಂಬಂಧ ‘ರ‍್ಯಾಪಿಡೊ’ ಬೈಕ್ ಸವಾರ ಸೇರಿ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

‘22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡು, ಸ್ಥಳೀಯ ನಿವಾಸಿ ಶಹಾಬುದ್ದೀನ್ (23), ಈತನ ಸ್ನೇಹಿತ ಅರಾಫತ್ ಷರೀಫ್ (22) ಹಾಗೂ ಇವರಿಬ್ಬರ 22 ವರ್ಷದ ಸ್ನೇಹಿತೆಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೋಣನಕುಂಟೆ ನಿವಾಸಿ ಶಹಾಬುದ್ದೀನ್, ರ‍್ಯಾಪಿಡೊ ಬೈಕ್ ಸವಾರ. ಹುಳಿಮಾವು ನಿವಾಸಿ ಅರಾಫತ್, ಮೊಬೈಲ್ ದುರಸ್ತಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಅಪರಾಧ ಹಿನ್ನೆಲೆಯುಳ್ಳವರು. ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು’ ಎಂದು ತಿಳಿಸಿವೆ.

‘ಆರೋಪಿಗಳ ಸ್ನೇಹಿತೆಯಾಗಿದ್ದ 22 ವರ್ಷದ ಯುವತಿ, ಸಂತ್ರಸ್ತೆ ಮೇಲೆ ನಡೆದಿದ್ದ ಅತ್ಯಾಚಾರ ಕೃತ್ಯವನ್ನು ಮುಚ್ಚಿಟ್ಟು ಸುಳ್ಳು ಹೇಳಿದ್ದರು. ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಹೀಗಾಗಿ, ಸ್ನೇಹಿತೆಯನ್ನೂ ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಕರಣದ ವಿವರ: ‘ಕೇರಳದ 22 ವರ್ಷದ ಯುವತಿ ಕೆಲ ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಬಿಟಿಎಂ ಲೇಔಟ್‌ನ ಕಂಪನಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್
ಸಿಟಿಯ ನೀಲಾದ್ರಿ ನಗರದಲ್ಲಿ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನ. 25ರಂದು ರಾತ್ರಿ ಬಿಟಿಎಂ ಲೇಔಟ್‌ನಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದ ಸಂತ್ರಸ್ತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅದೇ ಸಂದರ್ಭದಲ್ಲೇ ಅವರು ಮದ್ಯ ಕುಡಿದಿದ್ದರೆಂದು ಗೊತ್ತಾಗಿದೆ. ಪಾನಮತ್ತ ಸ್ಥಿತಿಯಲ್ಲಿದ್ದ ಸಂತ್ರಸ್ತೆ, ನೀಲಾದ್ರಿನಗರದಲ್ಲಿರುವ ಮನೆಗೆ ಹೊರಟಲು ಸಜ್ಜಾಗಿದ್ದರು. ತಾವಿದ್ದ ಸ್ಥಳದಿಂದಲೇ ಮೊಬೈಲ್‌ ಆ್ಯಪ್ ಮೂಲಕ ‘ರ‍್ಯಾಪಿಡೊ’ ಬೈಕ್ ಕಾಯ್ದಿರಿಸಿದ್ದರು.’

‘ಬೈಕ್ ಸವಾರ ಶಹಾಬುದ್ದೀನ್, ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ಹತ್ತಿಸಿಕೊಂಡು ಹೊರಟಿದ್ದ. ನೀಲಾದ್ರಿನಗರದಲ್ಲಿ ನಿಗದಿತ ಸ್ಥಳ ಸಮೀಪದಲ್ಲಿರುವಾಗ ಬೈಕ್ ನಿಲ್ಲಿಸಿದ್ದ ಆರೋಪಿ, ಸಂತ್ರಸ್ತೆಗೆ ತಿಳಿಯದಂತೆ ಅರಾಫತ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇಬ್ಬರೂ ಆರೋಪಿಗಳು ಸಂತ್ರಸ್ತೆಯನ್ನು ಬೈಕ್‌ನಲ್ಲೇ ಅಪಹರಿಸಿದ್ದರು. ಸ್ನೇಹಿತೆ ಒಂಟಿಯಾಗಿ ವಾಸವಿದ್ದ ಮನೆಗೆ ಕರೆದೊಯ್ದಿದ್ದರು. ಮನೆಯ ಕೊಠಡಿಯಲ್ಲಿ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕ್ರೂರವಾಗಿ ವರ್ತಿಸಿ ಅಂಗಾಂಗಗಳಿಗೂ ಗಾಯ ಮಾಡಿದ್ದರು. ವಿಷಯ ಗೊತ್ತಿದ್ದರೂ ಆರೋಪಿತ ಯುವತಿ ಮೌನವಾಗಿದ್ದರು’ ಎಂದು ಹೇಳಿವೆ.

ಆಸ್ಪತ್ರೆಯಿಂದ ಮಾಹಿತಿ: ‘ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಸಂತ್ರಸ್ತೆ, ಅದೇ ಸ್ಥಿತಿಯಲ್ಲಿ ಮನೆಗೆ ಹೋಗಿದ್ದರು. ಮರುದಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಅತ್ಯಾಚಾರ ನಡೆದಿರುವುದಾಗಿ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆಸ್ಪತ್ರೆಯಿಂದಲೇ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತ್ವರಿತವಾಗಿ ಸಂತ್ರಸ್ತೆಯಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಒಂದು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ. ಸಂತ್ರಸ್ತೆ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ’ ಎಂದು ಮೂಲಗಳು ಹೇಳಿವೆ.

‘ರ‍್ಯಾಪಿಡೊ’ಗೆ ನೋಟಿಸ್

‘ಗ್ರಾಹಕರ ಸುರಕ್ಷತೆಗಾಗಿ ಯಾವುದೇ ಪರಿಶೀಲನೆ ನಡೆಸದೇ ಆರೋಪಿ ಶಹಾಬುದ್ದೀನ್‌ನನ್ನು ರ‍್ಯಾಪಿಡೊ
ಬೈಕ್ ಸವಾರ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಈ ಸಂಬಂಧ ಕಂಪನಿ ಪ್ರತಿನಿಧಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಮುಂಬರುವ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ಸಹ ನೀಡಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆ್ಯಪ್‌ ಮೂಲಕ ಆರೋಪಿ, ಅರ್ಜಿ ಸಲ್ಲಿಸಿದ್ದ. ಅದನ್ನು ಸ್ವೀಕರಿಸಿದ್ದ ಕಂಪನಿ, ಪೊಲೀಸ್ ಪರಿಶೀಲನೆ ಪತ್ರವಿಲ್ಲದೇ ನೇಮಕಾತಿ ಮಾಡಿತ್ತು. ಇದೇ ಆರೋಪಿ, ಹಲವು ಕಡೆ ಮತ್ತಷ್ಟು ಅಪರಾಧ ಕೃತ್ಯ ಎಸಗಿರುವ ಮಾಹಿತಿಯೂ ಇದೆ’ ಎಂದು ಮಾಹಿತಿ ನೀಡಿವೆ.

----

ಇದೊಂದು ಗಂಭೀರ ಪ್ರಕರಣ. ಆದಷ್ಟು ಬೇಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ, ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸಲಾಗುವುದು

- ಸಿ.ಕೆ. ಬಾಬಾ, ಆಗ್ನೇಯ ವಿಭಾಗ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT