ಸೋಮವಾರ, ಮಾರ್ಚ್ 27, 2023
21 °C

ಬಿಹಾರದ ಮಹಿಳೆ ತಮನ್ನಾ ಹತ್ಯೆ: ಪತಿ ಅಣ್ಣನ ಕೃತ್ಯ– ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿದ್ದ ಡ್ರಮ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣ ಭೇದಿಸಿರುವ ರೈಲ್ವೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಬಿಹಾರದ ಅರಾರಿಯಾ ಜಿಲ್ಲೆಯ ಕಮಾಲ್ (21), ತನ್ವೀರ್ ಆಲಂ (28) ಹಾಗೂ ಶಾಕೀಬ್ (25) ಬಂಧಿತರು. ಪ್ರಮುಖ ಆರೋಪಿ ನವಾಬ್ ಹಾಗೂ ಇತರರು ತಲೆಮರೆಸಿಕೊಂಡಿದ್ದಾರೆ. ಇವರೆಲ್ಲರೂ ಸೇರಿ ತಮ್ಮದೇ ಊರಿನ ತಮನ್ನಾ(27) ಅವರನ್ನು ಹತ್ಯೆ ಮಾಡಿದ್ದರು’ ಎಂದು ರೈಲ್ವೆ ಪೊಲೀಸ್ ಎಸ್ಪಿ ಎಸ್‌.ಕೆ. ಸೌಮ್ಯಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮನ್ನಾ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ತಾಂತ್ರಿಕ ಪುರಾವೆಗಳನ್ನು ಆಧರಿಸಿ ತನಿಖೆ ನಡೆಸಿದಾಗ, ಆರೋಪಿಗಳ ಸುಳಿವು ಲಭ್ಯವಾಯಿತು. ಬಿಹಾರದಿಂದ ಬಂದು ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಯಿತು’ ಎಂದರು.

ಎರಡನೇ ಮದುವೆಯಾಗಿದ್ದ ತಮನ್ನಾ: ‘ಬಿಹಾರದ ತಮನ್ನಾ, ಸಂಬಂಧಿ ಅಫ್ರೋಜ್ ಎಂಬುವವರನ್ನು ಮದುವೆ ಯಾಗಿದ್ದರು. ಅಂಗವಿಕಲರೆಂಬ ಕಾರಣಕ್ಕೆ ಅಫ್ರೋಜ್‌ ಅವರಿಂದ ಮೂರೇ ತಿಂಗಳಿ ನಲ್ಲಿ ದೂರವಾಗಿದ್ದ ತಮನ್ನಾ, ಸಂಬಂಧಿ ಮಹಮ್ಮದ್ ಇಂತಿಕಾಬ್ ಎಂಬುವವ ರನ್ನು ಎರಡನೇ ಮದುವೆಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಇಂತಿಕಾಬ್ ಹಾಗೂ ತಮನ್ನಾ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಜಿಗಣಿ ಬಳಿ ನೆಲೆಸಿದ್ದರು. ಇಂತಿಕಾಬ್ ಅಣ್ಣ ನವಾಬ್ ಬಿಹಾರದಲ್ಲಿದ್ದ. ಸಂಬಂಧಿಕರಾದ ಕಮಾಲ್, ತನ್ವೀರ್ ಆಲಂ, ಶಾಕೀಬ್ ಹಾಗೂ ಇತರರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು’ ಎಂದು ಅವರು ಹೇಳಿದರು.

ಜೀವನ ಹಾಳು ಮಾಡಿದ್ದಕ್ಕೆ ಹತ್ಯೆ: ‘ಅಫ್ರೋಜ್‌ ಜೀವನ ಹಾಳು ಮಾಡಿ, ಇದೀಗ ಇಂತಿಕಾಬ್ ಜೀವನವನ್ನೂ ತಮನ್ನಾ ಹಾಳು ಮಾಡುತ್ತಿದ್ದಾರೆಂದು ನವಾಬ್ ಸಿಟ್ಟಾಗಿದ್ದರು. ಸಂಬಂಧಿಕರ ಜೊತೆ ಸೇರಿ ತಮನ್ನಾ ಕೊಲೆ ಮಾಡಲು ಸಂಚು ರೂಪಿಸಿದ್ದರು’ ಎಂದರು.

‘ಇತ್ತೀಚೆಗೆ ನಗರಕ್ಕೆ ಬಂದಿದ್ದ ನವಾಬ್, ಸಂಬಂಧಿಕರನ್ನು ಒಂದು ಕಡೆ ಸೇರಿಸಿದ್ದ. ಪಾರ್ಟಿ ಮಾಡೋಣವೆಂದು ಹೇಳಿ ಇಂತಿಕಾಬ್ ಹಾಗೂ ತಮನ್ನಾ ಅವರನ್ನು ತನ್ನ ಬಳಿ ಕರೆಸಿದ್ದ. ರಾತ್ರಿ ಊಟ ಮುಗಿಸಿದ್ದ ನಂತರ ತಮನ್ನಾ ಜೊತೆ ನವಾಬ್ ಜಗಳ ತೆಗೆದಿದ್ದ. ತಮ್ಮನ ಜೀವನ ಹಾಳು ಮಾಡುತ್ತಿದ್ದೀಯಾ ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದ.’

‘ಇಂತಿಕಾಬ್‌ ಅವರಿಗೂ ಬೈದಿದ್ದ ನವಾಬ್, ಒಬ್ಬರನ್ನೇ ಜಿಗಣಿಗೆ ಕಳುಹಿಸಿದ್ದ. ಮನೆಯಲ್ಲಿ ಉಳಿದುಕೊಂಡಿದ್ದ ತಮನ್ನಾ ಜೊತೆ ಪುನಃ ಜಗಳ ತೆಗೆದಿದ್ದ ನವಾಬ್ ಹಾಗೂ ಇತರರು, ಹಲ್ಲೆ ಮಾಡಿ ಎರಡು ಕಾಲು ಮುರಿದಿದ್ದರು. ನಂತರ, ತಲೆಗೆ ಹೊಡೆದಿದ್ದರು. ವೇಲ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಬಿಹಾರಕ್ಕೆ ಮೃತದೇಹ ಸಾಗಿಸಲು ಯತ್ನ: ‘ತಮನ್ನಾ ಮೃತದೇಹವನ್ನು ಬಿಹಾರಕ್ಕೆ ಕೊಂಡೊಯ್ಯಲು ಆರೋಪಿಗಳು ಯೋಚಿ
ಸಿದ್ದರು. ತಾವು ಊರಿನಿಂದ ಬಟ್ಟೆ ತರುವಾಗ ಬಳಸಿದ್ದ ಡ್ರಮ್‌ನಲ್ಲಿ ಮೃತದೇಹ ಇರಿಸಿದ್ದರು. ಅದರ ಮೇಲೆ ಬಟ್ಟೆಯಿಂದ ಮುಚ್ಚಿದ್ದರು. ಬಿಹಾರಕ್ಕೆ ಹೋಗಲು ಡ್ರಮ್ ಸಮೇತ ಆಟೊದಲ್ಲಿ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ನಿಲ್ದಾಣದಲ್ಲಿ ಪೊಲೀಸರ ಕಾವಲು ಹೆಚ್ಚಿತ್ತು. ಹೆದರಿದ್ದ ಆರೋಪಿಗಳು, ಪ್ರವೇಶ ದ್ವಾರದಲ್ಲಿ ಡ್ರಮ್ ಇರಿಸಿ ಪರಾರಿ
ಯಾಗಿದ್ದರು. ಡ್ರಮ್ ಮೇಲಿದ್ದ ಸ್ಟಿಕ್ಕರ್‌ನಲ್ಲಿ ಆರೋಪಿಗಳ ಹೆಸರಿತ್ತು. ಅದು ಸಹ ಪ್ರಕರಣ ಭೇದಿಸಲು ನೆರವಾಯಿತು’ ಎಂದು ಹೇಳಿದರು.

‘₹ 50 ಸಾವಿರ ಬಹುಮಾನ’

‘ಯಶವಂತಪುರ ರೈಲು ನಿಲ್ದಾಣ ಬಳಿ ಇತ್ತೀಚೆಗೆ ಡ್ರಮ್‌ನಲ್ಲಿ ಮೃತದೇಹ ಸಿಕ್ಕಿತ್ತು. ಇದಾದ ಕೆಲವೇ ದಿನಗಳಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲೂ ಡ್ರಮ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು. ಇದೊಂದು ಸರಣಿ ಹತ್ಯೆ ಇರಬಹುದೆಂಬ ಶಂಕೆ ಇತ್ತು. ಆದರೆ, ತನಿಖೆ ಕೈಗೊಂಡಾಗ ಸಂಬಂಧಿಕರೇ ಕೃತ್ಯ ಎಸಗಿರುವುದು ತಿಳಿಯಿತು. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕೊಲೆ ರಹಸ್ಯ ಭೇದಿಸಿರುವ ತನಿಖಾ ತಂಡದ ಪೊಲೀಸರಿಗೆ ₹ 50 ಸಾವಿರ ಬಹುಮಾನ ಘೋಷಿಸಲಾಗಿದೆ’ ಎಂದು ಎಸ್ಪಿ ಎಸ್.ಕೆ. ಸೌಮ್ಯಲತಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು