ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ 80 ವರ್ಷದ ಮಹಿಳೆ ಕೋವಿಡ್-19 ಗೆದ್ದು ಬಂದ ಅನುಭವ

Last Updated 13 ಜುಲೈ 2020, 15:46 IST
ಅಕ್ಷರ ಗಾತ್ರ

ಕೋವಿಡ್ ಜಯಿಸಿದ 80ರ ಹರೆಯದ ಎನ್. ಲೀಲಾವತಿ ಅವರ ಅನುಭವವಿದು. ಅದನ್ನು ಅವರೇ ಬರೆದು ಕಳಿಸಿದ್ದಾರೆ. 'ಅಟ್ಟಹಾಸ', 'ರಣಕೇಕೆ'ಗಳ ನಡುವೆ ಈ ಅನುಭವ ವಿಶಿಷ್ಟವಾಗಿ ನಿಲ್ಲುತ್ತದೆ.

ಜಲಬಾಧೆಗೆ ಸಂಬಂಧಿಸಿದಂತೆ ಸಣ್ಣದೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೆ ಮುನ್ನ ‘ಒಂದು ಕೋವಿಡ್ ಟೆಸ್ಟ್ ಮಾಡಿಸಿಬಿಡಿ’ ಎಂದರು. ಮಣಿಪಾಲ್ ಆಸ್ಪತ್ರೆಯ ವೈದ್ಯರು. ಪರೀಕ್ಷಿಸಿದಾಗ ಕೋವಿಡ್ ಅಸಿಂಪ್ಟೊಮ್ಯಾಟಿಕ್ ಎಂದು ವರದಿ ಬಂತು ಎಂದುಬಿಬಿಎಂಪಿಯಿಂದ ಸುದ್ದಿ ಬಂದಿತು.

‘ಆಂಬುಲೆನ್ಸ್ ಬರುತ್ತೆರೆಡಿಯಾಗಿ’ ಎಂಬ ಆದೇಶ ತಲುಪುವಷ್ಟರಲ್ಲೇ ನಮ್ಮ ಮನೆಯವರೆಲ್ಲರಲ್ಲೂ ಗಡಿಬಿಡಿ, ಗೊಂದಲ, ಗಾಬರಿ. ಪ್ರತಿ ದಿನ ಟಿವಿಯಲ್ಲಿ ‘ರಣಕೇಕೆ’, ‘ಅಟ್ಟಹಾಸ’ ಪದಗಳನ್ನೇ ಕೇಳಿದ್ದ ನನಗೆ ದಿಕ್ಕೇ ತೋಚದಂತಾಯಿತು.

ಆಸ್ಪತ್ರೆಗೆ ಸೇರುವುದೆಂದು ತೀರ್ಮಾನವಾದರೂ ಎಲ್ಲಿ ಎಂದು ನಿರ್ಧರಿಸಲು ಮತ್ತೆರಡು ಗಂಟೆ ಬೇಕಾಯಿತು. ನಂತರ ಜೆ.ಪಿ.ನಗರದ ಆಸ್ಟರ್ ಆಸ್ಪತ್ರೆಯಲ್ಲಿ ಜೂನ್ 1ರಂದು ‘ಎಸಿಂಪ್ಟೊಮ್ಯಾಟಿಕ್ ರೋಗಿ’ ಆಗಿ ದಾಖಲಾದೆ. ನನ್ನ 80 ವರ್ಷಗಳ ಜೀವನದಲ್ಲಿ ಎಂದೂ ಒಂಟಿ ಇರದ ನಾನು ಮುಂದಿನ ಹತ್ತು ದಿನಗಳನ್ನು ಪೂರ್ಣ ಏಕಾಂತದಲ್ಲಿ ಕಳೆಯುವಂತಾಯಿತು.

ಏನಾಗುತ್ತದೋ ಎಂಬ ಭಯ, ಆಸ್ಪತ್ರೆಗೆ ಸೇರಿಸುವಾಗ ಕೈಗೊಂದು ಫೋನನ್ನು ತುರುಕಿದ್ದರೂ ಅದನ್ನು ಬಳಸಲು ಬರದ ನನಗೆ ಪ್ರತಿ ಕ್ಷಣವೂ ಯಾವಾಗ ಹೊರಬಂದೇನಪ್ಪಾ ಎಂಬ ತವಕ, ತಲ್ಲಣ. ದಾದಿಯರು, ವೈದ್ಯರು ಬಂದರು; ಹಲವಾರು ಟೆಸ್ಟ್‌ಗಳನ್ನು ಮಾಡಿದರು. ಆದರೆ ಯಾರನ್ನು ಏನೆಂದು ಕೇಳುವುದು? ಎಲ್ಲವೂ ಅಯೋಮಯ.

ದಿನಗಳು ಕಳೆಯಲಾರಂಭಿಸಿದವು. ಹೊತ್ತುಹೊತ್ತಿಗೆ ದಾದಿಯರು ಬಂದು ಔಷಧಿ, ಮಾತ್ರೆಗಳನ್ನು ನೀಡಿದರು. ಹಲ್ಲಿಲ್ಲದ ನನಗೆ ಸೇವಿಸಲು ಆಗುವಂತಹ ಸೂಪ್, ಜ್ಯೂಸ್, ಹಾಲುಗಳನ್ನೇ ನೀಡಿದರು. ದಿನವೂ ಮನದಲ್ಲಿ ಕಾಡುತ್ತಿದ್ದ ಕೋವಿಡ್ ಭೂತ ಈಗ ನನ್ನ ದೇಹದಲ್ಲೇ ಸೇರಿದ್ದರೂ ಯಾವುದೇ ಭಯ ಆಗದಂತೆ ಅವರು ನನ್ನನ್ನು ನೋಡಿಕೊಂಡರು.

ಮನೆಯಿಂದ ಯಾರೂ ಬರುವಂತಿಲ್ಲ, ಯಾರನ್ನೂ ನೋಡುವಂತಿಲ್ಲ ಎಂಬ ಕೊರತೆಯೊಂದರ ಹೊರತಾಗಿ ಕೋವಿಡ್ ನನ್ನನ್ನು ಯಾವ ರೀತಿಯಲ್ಲೂ ಬಾಧಿಸಲಿಲ್ಲ. ಎರಡು ಮೂರು ದಿನ ನೆಗಡಿ ಇದ್ದದ್ದನ್ನು ಬಿಟ್ಟರೆ ನನಗೆ ಇನ್ನಾವ ಲಕ್ಷಣಗಳು ಇರಲೂ ಇಲ್ಲ, ಬರಲೂ ಇಲ್ಲ. ಕೋವಿಡ್ 19 ಮೈಲ್ಡ್ ಮತ್ತು ಅಸಿಂಪ್ಟೊಮ್ಯಾಟಿಕ್ ಆಗಿರುವವರು ಹೆದರಲು ಯಾವುದೇ ಕಾರಣಗಳಿಲ್ಲ. ಫ್ಲೂ, ಜ್ವರ ಬಂದಾಗ ಆಸ್ಪತ್ರೆಗೆ ಸೇರುವುದಕ್ಕೂ, ಇದಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. 80 ವಯಸ್ಸಿನ ನನಗೇ ಹೆದರುವ ಕಾರಣವಿಲ್ಲವೆಂದಮೇಲೆ ನನಗಿಂತ ಚಿಕ್ಕವರು, ಹೆಚ್ಚು ಆರೋಗ್ಯವಂತರು ಕೋವಿಡ್ ಪಾಸಿಟಿವ್ ಆದರೂ ಧೈರ್ಯದಿಂದ ಎದುರಿಸಿ ಗುಣಮುಖರಾಗಿ ಹೊರಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT