ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಮಹಿಳೆಯರ ಒತ್ತಾಯ

ಬಸ್‌ ಪ್ರಯಾಣಿಕರ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಕ್ಷೇತ್ರದ ಮಹಿಳೆಯರ ಒತ್ತಾಯ
Last Updated 15 ಫೆಬ್ರುವರಿ 2022, 20:57 IST
ಅಕ್ಷರ ಗಾತ್ರ

ಬೆಂಗಳೂರು: ಪಂಜಾಬ್, ತಮಿಳುನಾಡು, ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಒತ್ತಾಯಿಸಿದರು.

‘ನಗರದ ಬಸ್‌ ಸೇವೆಯು ಸಾರ್ವಜನಿಕರ ಕೈಗೆಟುಕುವ ದರದಲ್ಲಿ ಇದೆಯೇ’ ಎಂಬುದರ ಕುರಿತು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಭಾಗವಹಿಸಿದ್ದ ಪೌರ ಕಾರ್ಮಿಕ ಮಹಿಳೆಯರು, ಮನೆಗೆಲಸ ಮಾಡುವವರು, ವಿದ್ಯಾರ್ಥಿಗಳು, ಬೀದಿ ಬದಿ ವ್ಯಾಪಾರಿಗಳು, ರೈತ ಮಹಿಳೆಯರು ಉಚಿತ ಪ್ರಯಾಣಕ್ಕೆ ಆಗ್ರಹಿಸಿದರು.

‘ಬೆಂಗಳೂರಿನಲ್ಲಿ ಬಸ್ ಪ್ರಯಾಣ ದರ ಜಾಸ್ತಿ ಇದೆ. ಮಾಸಿಕ ಪಾಸ್ ದರ ₹1050 ಇದೆ. ಕೋವಿಡ್ ನಂತರ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದರೆ, ಕೆಲಸ ಇದ್ದರೂ ಹಲವರಿಗೆ ವೇತನ ಕಡಿತವಾಗಿದೆ. ಈ ಸಂದರ್ಭದಲ್ಲಿ ಬಸ್‌ ಪ್ರಯಾಣ ದರವೇ ದುಬಾರಿಯಾಗುತ್ತಿದೆ’ ಎಂದು ತಮ್ಮ ಅಹವಾಲು ಹೇಳಿಕೊಂಡರು.

‘ಪೌರ ಕಾರ್ಮಿಕರಿಗೆ ₹14 ಸಾವಿರ ವೇತನ ಇದೆ. ಒಂದು ದಿನ ರಜೆ ಪಡೆದರೂ ವೇತನ ಕಡಿತವಾಗುತ್ತದೆ. ಬಸ್‌ ಪ್ರಯಾಣಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಪ್ರಯಾಣಕ್ಕೆ ಖರ್ಚು ಮಾಡುವ ಹಣ ಉಳಿದರೆ ಮಕ್ಕಳಿಗೆ ಮೊಟ್ಟೆ, ಸೊಪ್ಪು, ತರಕಾರಿ ತಿನ್ನಿಸಲು ಸಾಧ್ಯವಾಗುತ್ತದೆ. ಬೇರೆ ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವಾಗ ಬೆಂಗಳೂರಿನಲ್ಲಿ ಅದಕ್ಕೆ ಅವಕಾಶ ಇಲ್ಲದಿರುವುದು ಸರಿಯಲ್ಲ. ಉಚಿತ ಪ್ರಯಾಣಕ್ಕೆ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು’ ಎಂದು ಪೌರ ಕಾರ್ಮಿಕರಾದ ಲಕ್ಷ್ಮಿ ಮನವಿ ಮಾಡಿದರು.

‘ಬೆಂಗಳೂರಿನ ಹೊರ ವಲಯದಿಂದ ತರಕಾರಿ ಬೆಳೆದು ಬೆಂಗಳೂರಿಗೆ ತರುತ್ತೇವೆ. ಆದರೆ, ಬಸ್‌ನಲ್ಲಿ ಲಗೇಜ್ ದರಕ್ಕೆ ಬಹುಪಾಲು ಪಾವತಿಸಬೇಕಾಗಿದೆ’ ಎಂದು ಹೊಸಕೋಟೆಯ ರೈತ ಮಹಿಳೆ ಹೇಳಿದರು.

ಸಾರಿಗೆ ತಜ್ಞ ಮನು ಮಥಾಯಿ ಮಾತನಾಡಿ, ‘ಬಸ್‌ನಲ್ಲಿ ಪ್ರಯಾಣಿಸುವವರು ನಗರದ ಪರಿಸರಕ್ಕೆ ತಮ್ಮದೇ ಆದ ಕೊಡಗೆ ನೀಡುತ್ತಿದ್ದಾರೆ. ಅವರಿಗೆ ಸೇವೆ ಒದಗಿಸಬೇಕಿರುವುದು ಸರ್ಕಾರದ ಕರ್ತವ್ಯ’ ಎಂದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ‘ಬಸ್‌ ದರ ಕಡಿಮೆ ಮಾಡಿದರೆ ಸಾಲದು. ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಈ ಬಗ್ಗೆ ಸದನದಲ್ಲೂ ಧ್ವನಿ ಎತ್ತಲಾಗುವುದು’ ಎಂದು ಹೇಳಿದರು. ಸಾರಿಗೆ ತಜ್ಞರಾದ ಆಶಿಶ್‌ ವರ್ಮ, ಸಿಂತಿಯ ಸ್ಟೀಫನ್, ತಾರಾ ಕೃಷ್ಣಸ್ವಾಮಿ, ವಿನಯ್ ಶ್ರೀನಿವಾಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT