ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ಕೆಲಸಕ್ಕೆ ಕುತ್ತು

Last Updated 6 ನವೆಂಬರ್ 2019, 6:10 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿರುವ ಬೆನ್ನಲ್ಲೇ, ಮನೆಗೆಲಸ ಮತ್ತು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರು ಕೆಲಸದಿಂದ ಹೊರದಬ್ಬಲ್ಪಡುತ್ತಿದ್ದಾರೆ.

ಪೊಲೀಸರ ಕ್ರಮಕ್ಕೆ ಹೆದರಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳು, ಬಂಗಾಳಿ ಮಾತನಾಡುವ ಅದರಲ್ಲೂ ಅಲ್ಪಸಂಖ್ಯಾತರನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದ್ದಾರೆ.

ಕಾಡುಬೀಸನಹಳ್ಳಿ, ಕೋರಮಂಗಲ, ಎಚ್‌.ಎಸ್.ಆರ್‌ ಲೇಔಟ್, ಸೋಮಸುಂದರ ಪಾಳ್ಯ, ಪಣತ್ತೂರು,ಸರ್ಜಾಪುರರಸ್ತೆ, ಕುಂದಲಹಳ್ಳಿ ಮತ್ತು ತುಬರನಹಳ್ಳಿ ಸುತ್ತಮುತ್ತ ಇರುವ ಅಪಾರ್ಟ್‌ಮೆಂಟ್ ಸಮುಚ್ಚಯ ಗಳಿಗೆ ವಲಸೆ ಕಾರ್ಮಿಕ ಮಹಿಳೆಯರು ಕೆಲಸಕ್ಕೆ ಬಾರದಂತೆ ನಿರ್ಬಂಧಿಸಬೇಕು ಎಂಬ ಸಂದೇಶಗಳನ್ನು ನಿವಾಸಿಗಳು ಆಂತರಿಕವಾಗಿ ಇ–ಮೇಲ್ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.

ಅಧಿಕೃತ ಮಾರ್ಗಸೂಚಿ ಇಲ್ಲದೆ ವಲಸಿಗರನ್ನು ಕೆಲಸದಿಂದ ಹೊರ ಹಾಕುತ್ತಿರುವುದನ್ನು ಮಹಿಳಾ ಹಕ್ಕು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಮನೆ ಕೆಲಸಗಾರರ ಸಂಘಟನೆ ಕಾರ್ಯಕರ್ತರು ಖಂಡಿಸಿದ್ದಾರೆ. ‘ಅಪಾರ್ಟ್‌ಮೆಂಟ್ ನಿವಾಸಿಗಳ ಈ ನಡೆ ಹಲವರ ಜೀವನೋಪಾಯವನ್ನೇ ಕಸಿದುಕೊಳ್ಳಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯೋಗಸ್ಥ ದಂಪತಿ ಮೇಲೆ ಪರಿಣಾಮ: ‘ಅಪಾರ್ಟ್‌ಮೆಂಟ್ ಸಮುಚ್ಚಯಗಳ ನಿವಾಸಿಗಳು ಈ ರೀತಿ ನಿಷೇಧ ಹೇರಿದರೆ ಉದ್ಯೋಗಸ್ಥ ದಂಪತಿಗಳ ಮೇಲೆ ಇದರ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ‍ಪೌರತ್ವ ನೋಂದಣಿ(ಎನ್‌ಸಿಆರ್‌) ಅಭಿಯಾನ ನಡೆಸಲಾಗುತ್ತದೆಯೋ ಇಲ್ಲವೋ ಎಂಬುದು ಇನ್ನೂ ಗೊತ್ತಿಲ್ಲ. ಅಭಿಯಾನ ಆರಂಭಿಸುವುದಾಗಿ ಹೇಳಿರುವ ಸರ್ಕಾರ, ಈ ಸಂಬಂಧ ಕೂಡಲೇ ಮಾರ್ಗಸೂಚಿಗಳನ್ನು ರೂಪಿಸಿ ಗೊಂದಲ ನಿವಾರಿಸಬೇಕು’ ಎಂಬುದು ಅಪಾರ್ಟ್‌ಮೆಂಟ್ ನಿವಾಸಿ ಅನಘಾ ಕುಲಕರ್ಣಿ ಅವರ ಒತ್ತಾಯ.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಭದ್ರತಾ ಸಿಬ್ಬಂದಿಯೊಂದಿಗೆ ಪೊಲೀಸರು ಇತ್ತೀಚೆಗೆ ಸಭೆ ನಡೆಸಿದರು. ಅಂದಿನಿಂದ ಅನಿಶ್ಚಿತತೆ ಕಾಡುತ್ತಿದೆ’ ಎನ್ನುತ್ತಾರೆ ಕಾಡುಬೀಸನಹಳ್ಳಿ ನಿವಾಸಿ ಅಪೂರ್ವಾ ದಾಸ್.

ಮನೆಗೆಲಸಗಾರರ ಸಂಘದ ಪ್ರಕಾರ, ಬಂಗಾಳಿ ಮೂಲದ 20 ಸಾವಿರದಿಂದ 30 ಸಾವಿರದಷ್ಟು ಜನ ಅಡುಗೆ ಕೆಲಸ ಮಾಡುತ್ತಿದ್ದಾರೆ. ಇದರೊಟ್ಟಿಗೆ ಮನೆಗೆಲಸ ಮಾಡುವವರೂ ಇದ್ದಾರೆ.

ದಿನಗೂಲಿಗಳೇ ಏಕೆ ಟಾರ್ಗೆಟ್‌?
‘ಬಂಗಾಳಿ ಮಾತನಾಡುವ ಮುಸ್ಲಿಮರು ಎಂಬ ಕಾರಣಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಎಂಬ ಹಣೆಪಟ್ಟಿ ಕಟ್ಟಿ ಕೆಲಸದಿಂದ ಹೊರ ಹಾಕುವುದು ಸರಿಯಲ್ಲ’ ಎಂದು ಸ್ತ್ರೀ ಜಾಗೃತಿ ಸಮಿತಿಯ ಗೀತಾ ಮೆನನ್ ಹೇಳಿದರು.

‘ಬಹುರಾಷ್ಟ್ರೀಯ ಕಂಪನಿಗಳಲ್ಲೂ ಬಂಗಾಳಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇವಲ ದಿನಗೂಲಿ ಕಾರ್ಮಿಕರನ್ನೇ ಏಕೆ ಗುರಿಯಾಗಿಸಿ ನಿಷೇಧ ಹೇರಲಾಗುತ್ತಿದೆ? ವಲಸಿಗ ಮಹಿಳೆಯರ ನೆರವಿಗೆ ನಾವು ನಿಲ್ಲುತ್ತೇವೆ’ ಎಂದರು.

‘ಈ ರೀತಿಯ ಪ್ರವೃತ್ತಿಗಳು ಮಹಿಳೆಯರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಮಹಿಳೆಯ ದುಡಿಮೆಯ ಮೇಲೆ ಕುಟುಂಬ ನಿಂತಿರುತ್ತದೆ. ಇದು ಸಂಕೀರ್ಣ ಕಾನೂನು ಸಮಸ್ಯೆಯಾಗಿದ್ದು, ತಜ್ಞರು ಪರಿಹರಿಸಬೇಕಾಗಿದೆ. ಅಲ್ಲಿಯವರೆಗೆ ಮಾನವೀಯತೆ ಆಧಾರದ ಮೇಲೆ ಅಂತಹ ಕಾರ್ಮಿಕರ ರಕ್ಷಣೆಗೆ ಸರ್ಕಾರ ಮುಂದಾಗಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ರುತ್ ಮನೋರಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT