ಬುಧವಾರ, ಜೂನ್ 29, 2022
21 °C

ಇಂದು ಪರಿಸರ ದಿನ: ‘ಶೂನ್ಯ ಕಸ‘ ಸಂಕಲ್ಪದಲ್ಲಿ ಮಿಷನ್ ದಿಶಾ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಾವುದೇ ಸಮಾರಂಭಗಳಲ್ಲಿ, ಕ್ರೀಡಾಕೂಟ, ಜಾತ್ರೆ ಮುಂತಾದ ಕಾರ್ಯಕ್ರಮಗಳಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ, ಲೋಟಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಇಂತಹ ಕಡೆಗಳಲ್ಲಿ ತನ್ನ ಸದಸ್ಯರು ಹಾಗೂ ಸ್ವಯಂಸೇವಕರ ಮೂಲಕ ‘ಶೂನ್ಯ ಕಸ’ ಅಥವಾ ಕಸ ಮುಕ್ತ ಅಭಿಯಾನ ನಡೆಸುವ ಮೂಲಕ ಗಮನ ಸೆಳೆಯುತ್ತಿದೆ ‘ಮಿಷನ್ ದಿಶಾ’ ತಂಡ.

ಬೇರೆಯವರಿಗೆ ‘ಪರಿಸರ ರಕ್ಷಣೆ’ ಕುರಿತು ಬೋಧನೆ ಮಾಡುವುದಲ್ಲದೆ, ಅದನ್ನು ತಮ್ಮ ಮನೆಗಳಲ್ಲಿಯೂ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ ತಂಡದ 15ಕ್ಕೂ ಹೆಚ್ಚು ಸದಸ್ಯರು.

ಏನಿದು ಶೂನ್ಯ ಕಸ ಅಭಿಯಾನ ?

ತಲಘಟ್ಟಪುರ ಪೊಲೀಸರು ವರ್ಷದ ಹಿಂದೆ ಸ್ಥಳೀಯರಿಗಾಗಿ ಕ್ರಿಕೆಟ್‌ ಟೂರ್ನಿ ಆಯೋಜಿಸಿದ್ದರು. ಈ ಟೂರ್ನಿ ಸಂಪೂರ್ಣವಾಗಿ ಕಸ ಮುಕ್ತವಾಗಿ ನಡೆಯಬೇಕು ಎಂಬುದನ್ನು ಸವಾಲಾಗಿ ಸ್ವೀಕರಿಸಿದ ಮಿಷನ್‌ ದಿಶಾ ತಂಡ, ‘ಪ್ಲೇಟ್‌ ಬ್ಯಾಂಕ್‌’ ನಿಂದ 300 ಸ್ಟೀಲ್ ತಟ್ಟೆ, ಚಮಚ ಹಾಗೂ ಜಗ್ಗುಗಳನ್ನು ತೆಗೆದುಕೊಂಡು ಹೋಗಿ ಬಳಸಲು ನೀಡಿತ್ತು. ಎರಡು ದಿನದಲ್ಲಿ ಸುಮಾರು 400 ಜನ 6 ಬಾರಿ ಇವುಗಳನ್ನು ಬಳಸಿದ್ದರು. ಇದರಿಂದ 2,400ಕ್ಕೂ ಹೆಚ್ಚು ಬಳಸಿ ಬಿಸಾಡುವ ತಟ್ಟೆ, ಲೋಟಗಳು ಕಸದ ಬುಟ್ಟಿ ಸೇರುವುದು ತಪ್ಪಿತ್ತು. ಟಿಶ್ಯೂ ಪೇಪರ್‌ ಬಳಸುವುದನ್ನೂ ತಂಡ ತಡೆದಿತ್ತು. ಇದೇ ರೀತಿ ಎಲ್ಲ ಸಮಾರಂಭಗಳಲ್ಲಿಯೂ ಸ್ಟೀಲ್ ತಟ್ಟೆ ಲೋಟವನ್ನು ಬಳಸುವುದನ್ನೇ ಈ ತಂಡ ಉತ್ತೇಜಿಸುತ್ತಿದೆ.

‘ಬಿಬಿಎಂಪಿ, ಪೊಲೀಸರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರು ಒಗ್ಗೂಡಿ ಕೆಲಸ ಮಾಡಿ, ಇಚ್ಛಾಶಕ್ತಿ ಪ್ರದರ್ಶಿಸಿದರೆ ಯಾವುದೇ ಸಮಾರಂಭವನ್ನೂ ಕಸ ಮುಕ್ತವಾಗಿಸಬಹುದು. ಈ ಪರಿಕಲ್ಪನೆಯನ್ನು ಅನೇಕ ಬಾರಿ ನಾವು ಅನುಷ್ಠಾನ ಮಾಡಿದ್ದೇವೆ’ ಎಂದು ತಂಡದ ಸದಸ್ಯೆ ಚೈತನ್ಯ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಜೈವಿಕ ದ್ರವ: ಪರಿಸರ ರಕ್ಷಣೆ ಕುರಿತು ಕೇವಲ ಬೋಧನೆ ಮಾಡುವುದಲ್ಲದೆ, ಹೇಳಿದ್ದನ್ನು ಸ್ವತಃ ಪಾಲಿಸುತ್ತಿದ್ದಾರೆ ತಂಡದ ಸದಸ್ಯರು.

‘ಜನರು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಮತ್ತು ನೆಲ ಒರೆಸಲು ಅನೇಕ ವಾಷಿಂಗ್ ಪೌಡರ್, ಸಾಬೂನುಗಳು, ಮಾರ್ಜಕಗಳನ್ನು ಬಳಸುತ್ತಾರೆ. ಇವುಗಳಿಗೆ ಹೆಚ್ಚು ರಾಸಾಯನಿಕಗಳನ್ನು ಬಳಸಿರುತ್ತಾರೆ. ಅಲ್ಲದೆ, ಎಷ್ಟೇ ಜಾಗೃತಿ ವಹಿಸಿದ್ದರೂ ಈ ರಾಸಾಯನಿಕ ಅಂಶ ಆಹಾರದಲ್ಲಿಯೂ ಸೇರಿರುತ್ತದೆ. ಅದರ ಬದಲು ನೈಸರ್ಗಿಕವಾಗಿ ದೊರೆಯುವಂತಹ ಪದಾರ್ಥಗಳಿಂದಲೇ ‘ವಾಷಿಂಗ್ ಲಿಕ್ವಿಡ್‌’ ತಯಾರಿಸಿ ಬಳಸುತ್ತಿದ್ದೇವೆ’ ಎಂದು ಚೈತನ್ಯ ಹೇಳಿದರು.

ಕಿತ್ತಳೆ, ನಿಂಬೆಹಣ್ಣುಗಳ ಸಿಪ್ಪೆ, ಅಂಟವಾಳ ಕಾಯಿ ಹಾಗೂ ಬೆಲ್ಲ ಬಳಸಿ ಈ ದ್ರವವನ್ನು ತಯಾರಿಸಬಹುದು. ಮನೆಯು ಟೈಲ್ಸ್, ಶೌಚಾಲಯ ಸ್ವಚ್ಛಗೊಳಿಸಲು ಮತ್ತು ಪಾತ್ರೆ ತೊಳೆಯಲೂ ಇದನ್ನು ಬಳಸಬಹುದಾಗಿದೆ. ತಂಡದ ಸದಸ್ಯರೆಲ್ಲ ಇದೇ ಕ್ರಮ ಅನುಸರಿಸುತ್ತಿದ್ದು, ಹಲವರಿಗೆ ಈ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು