ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹೃದಯ ದಿನದ ಪ್ರಯುಕ್ತ ತುರ್ತು ಸಹಾಯ ಕ್ಯೂಆರ್ ಕೋಡ್‌ಗೆ ಚಾಲನೆ

ವಿಶ್ವ ಹೃದಯ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆಗಳ ಸಮೂಹದಿಂದ ವ್ಯವಸ್ಥೆ
Published 28 ಸೆಪ್ಟೆಂಬರ್ 2023, 13:56 IST
Last Updated 28 ಸೆಪ್ಟೆಂಬರ್ 2023, 13:56 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಹೃದಯ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆಗಳ ಸಮೂಹವು ತುರ್ತು ಸಹಾಯ (ಎಸ್‌ಒಎಸ್) ಕ್ಯೂಆರ್ ಕೋಡ್‌ ಹಾಗೂ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿಗೆ (ಸಿಪಿಆರ್) ಚಾಲನೆ ನೀಡಿತು.

ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೂತನ ವ್ಯವಸ್ಥೆಗೆ ಚಾಲನೆ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಕಳೆದ ವರ್ಷ ‍ಪರಿಚಯಿಸಿದ್ದ ಎಸ್‌ಒಎಸ್ ಕ್ಯೂಆರ್ ಕೋಡ್‌ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾದ್ದರಿಂದ ಈ ವರ್ಷ 37 ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮರುಪರಿಚಯಿಸಲಾಗಿದೆ. ಬಿಬಿಎಂಪಿ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹೃದಯದ ಸಮಸ್ಯೆ ಕಾಣಿಸಿಕೊಂಡಾಗ ಪ್ರಾಥಮಿಕ ಅಥವಾ ತುರ್ತು ಚಿಕಿತ್ಸೆಗೆ ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ, ವೈದ್ಯಕೀಯ ಸೇವೆ ಪಡೆದುಕೊಳ್ಳಬಹುದು. ವ್ಯಕ್ತಿ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ತುರ್ತು ಸಂಖ್ಯೆಗೆ ಸಂಪರ್ಕ ಕಲ್ಪಿಸಿ, ಆಂಬುಲೆನ್ಸ್ ಸೇವೆಗೆ ನಿರ್ದೇಶಿಸಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ವಿವರಿಸಿದರು.

‘ಗುರುತಿಸಲಾದ ಟ್ರಾಫಿಕ್ ಜಂಕ್ಷನ್‌ಗಳಲ್ಲಿನ ಸಂಚಾರ ದೀಪಗಳಲ್ಲಿ ಹೃದಯದ ಆಕಾರ ಮೂಡಲಿದ್ದು, ಇದು ಪ್ರತಿಯೊಬ್ಬರಿಗೂ ಜೀವದ ಮೌಲ್ಯವನ್ನು ನೆನಪಿಸುತ್ತದೆ. ಹೃದಯದ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶವನ್ನು ಸಾರುತ್ತದೆ’ ಎಂದು ಹೇಳಿದರು.

ಜಿ. ಪರಮೇಶ್ವರ, ‘ಸಿಪಿಆರ್ ವಿಧಾನದಿಂದ ಹೃದಯ ಮತ್ತು ಶ್ವಾಸಕೋಶಗಳ ಪುನರುಜ್ಜೀವನಗೊಳಿಸಿ, ವ್ಯಕ್ತಿಯ ಜೀವ ಉಳಿಸಲು ಸಾಧ್ಯ. ಇದನ್ನು ಯಾವ ರೀತಿ‌ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಕ್ಯೂಆರ್ ಕೋಡ್‌ ಸಹಕಾರಿಯಾಗಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೇವೆ ಸುಲಭ: ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್, ‘ಟ್ರಾಫಿಕ್ ಜಂಕ್ಷನ್‌ಗಳ ಜತೆಗೆ ಅಪಾರ್ಟ್‌ಮೆಂಟ್‌ ಸಮುಚ್ಛಯ ಸೇರಿ ಪ್ರಮುಖ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಇರಿಸಲಾಗುತ್ತದೆ. ರೋಗಿಗಳು ಅಥವಾ ಅವರನ್ನು ಆರೈಕೆ ಮಾಡುವವರು ತಮ್ಮ ಮೊಬೈಲ್‌ಗಳ ಮೂಲಕ ಸ್ಕ್ಯಾನ್ ಮಾಡಿ, ಸೇವೆ ಪಡೆದುಕೊಳ್ಳಬಹುದು.

ಸ್ಕ್ಯಾನ್ ಮಾಡಿದ ಬಳಿಕ ‘ಮಣಿಪಾಲ್ ಆಂಬುಲೆನ್ಸ್ ರೆಸ್ಪಾನ್ಸ್ ಸರ್ವಿಸ್’ ಹಾಗೂ ‘108 ಆಂಬುಲೆನ್ಸ್’ ವ್ಯವಸ್ಥೆಗೆ ಸ್ಥಳದ ಮಾಹಿತಿ ರವಾನೆಯಾಗುತ್ತದೆ. ಆಂಬುಲೆನ್ಸ್ ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT